ಸುದ್ದಿಲೈವ್/ಶಿವಮೊಗ್ಗ
ನಗರದ ಬಹುಮುಖಿಯ ವತಿಯಿಂದ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಆವರಣದ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಸೆ. 11ರ ಬುಧವಾರ ಸಂಜೆ 5.30ಕ್ಕೆ ನಡೆಯುವ 40ನೇ ಕಾರ್ಯಕ್ರಮದಲ್ಲಿ, ಪತ್ರಕರ್ತರು, ಲೇಖಕರು, ಸಾಮಾಜಿಕ ಹೋರಾಟಗಾರರೂ ಆದ ಎನ್. ರವಿಕುಮಾರ್ (ಟೆಲೆಕ್ಸ್) ರವರು "ದಲಿತ್-ಒಂದು ಅವಲೋಕನ" ಕುರಿತು ಪ್ರಾತ್ಯಕ್ಷಿಕೆ ಸಹಿತ ಉಪನ್ಯಾಸ ನೀಡಲಿದ್ದಾರೆ.
ಎನ್. ರವಿಕುಮಾರ್. "ಟೆಲೆಕ್ಸ್ ರವಿ" ಎಂದೇ ಕರೆಯಲ್ಪಡುವ ಇವರು ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್ ಪತ್ರಿಕೆ, ಈ ವಾರ ಸೇರಿದಂತೆ ಸ್ಥಳೀಯ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಶಿವಮೊಗ್ಗ ಟೆಲೆಕ್ಸ್ ಪತ್ರಿಕೆಯ ಸಂಪಾದಕರಾಗಿದ್ದಾರೆ.
ಅನೇಕ ಜನಪರ ಚಳುವಳಿಗಳಲ್ಲಿ ಭಾಗವಹಿಸಿ, ಸಫಾಯಿ ಕರ್ಮಚಾರಿಗಳ ಬಗ್ಗೆ ಅಧ್ಯಯನ ನಡೆಸಿ, ಅವರ ಹಕ್ಕಿಗಾಗಿ ಹೋರಾಟ ನಡೆಸಿರುವ ಇವರು, ನೆನೆಗುದಿಗೆ ಬಿದ್ದಿದ್ದ ಶಿವಮೊಗ್ಗದ ಪಂಚವಟಿ ಕಾಲೋನಿ ಕೊಳಚೆ ಪ್ರದೇಶದ ಪೌರಕಾರ್ಮಿಕರ ಪುನರ್ ವಸತಿಗಾಗಿ ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ. ಕವಿಗಳು, ಬರಹಗಾರರು ಆಗಿರುವ ಇವರು, ದಾವಣಗೆರೆ, ಕುವೆಂಪು ವಿವಿಗಳಲ್ಲಿ ಅಲ್ಲದೆ ಸಾಹಿತ್ಯ ಸಮ್ಮೇಳನಗಳಲ್ಲಿ ವಿಚಾರ ಮಂಡಿಸಿದ್ದಾರೆ.
ದಮನಿತರ ಪರವಾಗಿ ಸದಾ ಹೋರಾಟ ನಡೆಸುವ ಇವರಿಗೆ ಗಿರಿಧರ ಪ್ರಶಸ್ತಿ, ಬಿಎಂಶ್ರೀ ಕಾವ್ಯ ಪುರಸ್ಕಾರ, ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ... ಮುಂತಾದ ಪ್ರಶಸ್ತಿಗಳು ಲಭಿಸಿವೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.