ಸುದ್ದಿಲೈವ್/ಶಿವಮೊಗ್ಗ
ರಾಣೇಬೆನ್ನೂರಿನಿಂದ ಹೊಸನಗರ ಮಾರ್ಗಚಾಗಿ ಬೈಂದೂರಿಗೆ ಹಾದು ಹೋಗುವ 766 ಸಿ ಹೆದ್ದಾರಿ ಮಾರ್ಗ ಪಶ್ಚಿಮ ಘಟ್ಟದ ಮೇಲೆ ಹಾದು ಹೋಗಿದ್ದು, ಪಶ್ಚಿಮ ಘಟ್ಟಗಳಲ್ಲಿ ಕಾನೂನು ಬಾಹಿರವಾಗಿ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂಬ ಹೆಗ್ಗಳಿಕೆಗೆ ಸಾಕ್ಷಿಯಾಗಿವೆ.
ರಾಜಕಾರಣಿಗಳ ದುಷ್ಟತನ, ಹಪಾಪಿತನದಿಂದ ಎಂತಹ ಕಾನೂನು ಅಡತಡೆಗಳಿದ್ದರೂ ಸಲೀಸಾಗಿ ನಡೆಯಲಿದೆ ಎಂಬುದಕ್ಕೆ ಈ ಯೋಜನೆ ಮತ್ತೊಂದು ಸಾಕ್ಷಿಯಾಗಿದೆ. ಶಿವಮೊಗ್ಗ ಹೊನ್ನಾವರ ರಸ್ತೆಯ ಚತುಷ್ಪಥ ರಸ್ತೆ, ತೀರ್ಥಹಳ್ಳಿಯಿಂದ ಆಗುಂಬೆಗೆ ಸಾಗುವ ರಸ್ತೆಗಳು, ಈಗ ರಾಣೆಬೆನ್ನೂರು-ಬೈಂದೂರು ರಸ್ತೆಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆ ಕಣ್ಣುಮುಚ್ಚಿ ಕುಳಿತಿರುವುದು ಈ ಇಲಾಖೆಯ ಅಸ್ಥಿತ್ವವ್ನ್ನೇ ಪ್ರಶ್ನಿಸುವಂತೆ ಮಾಡಿದೆ.
2014ರಲ್ಲಿ ರಾಣೆಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆ ಗೇರಿದ ಹೊಸನಗರ- ನಗರ- ಸಂಪೆಕಟ್ಟೆ-ನಿಟ್ಟೂರು ಮಾರ್ಗವಾಗಿ ಸಾಗುವ ರಸ್ತೆಯ ಉನ್ನತೀಕರಣ ಹಂತಹಂತವಾಗಿ ನಡೆಯುತ್ತಿವೆ. ಇಲ್ಲಿನ ಅಂತರವನ್ನು ಕಡಿಮೆ ಮಾಡುವ ದೃಷ್ಟಿಯಿಂದ ನೂತನ ಬೈಪಾಸ್ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಹೊಸನಗರದಿಂದ ಅಡಗೋಡಿ ಮಾರ್ಗವಾಗಿ ಸಾಗುವ ಬೈಪಾಸ್ ರಸ್ತೆಯು ತಿರುವುಗಳಿಂದ ಕೂಡಿದ 15 ಕಿ.ಮೀ. ಪ್ರಯಾಣದ ದೂರವನ್ನು ತಗ್ಗಿಸಲಿದೆ ಎಂದು ಅಂದಾಜಿಸಲಾಗಿದೆ. ಈ 766 ಸಿ ಹೆದ್ದಾರಿ ಸಂಪರ್ಕ ವಂಚಿತ ಕೆಲ ಹಳ್ಳಿಗಳಿಗೆ ನೂತನ ರಸ್ತೆಯಿಂದ ಅನುಕೂಲವಾಗುವ ನಿರೀಕ್ಷೆಯಿತ್ತು. ಬಹುಅಪೇಕ್ಷಿತ ಬೆಕ್ಕೋಡಿ ಸೇತುವೆ ನಿರ್ಮಾಣವೂ ಯೋಜನೆಯ ಭಾಗವಾಗಿದ್ದು ಕಾಮಗಾರಿ ಆರಂಭವಾಗಿದೆ.
ಆದರೆ, ಕಾಮಗಾರಿ ಕೈಗೊಳ್ಳಲು ಪಶ್ಚಿಮಘಟ್ಟ ಸೂಕ್ಷ್ಮ ವಲಯದ ನಿಯಮಗಳು ಅಡ್ಡಿಯಾಗುವ ಲಕ್ಷಣಗಳು ಕಂಡುಬಂದಿವೆ. ಪರಿಸರ ಕಾರ್ಯಕರ್ತ ಗಿರೀಶ್ ಆಚಾರ್ ಬೈಪಾಸ್ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಯೋಜನೆ ಕೈಗೊಳ್ಳುವ ವೇಳೆ ಹಲವು ನಿಯಮಗಳು ಉಲ್ಲಂಘನೆಯಾಗಿರುವುದಕ್ಕೆ
ವಿರೋಧ ವ್ಯಕ್ತವಾಗಿದೆ.
200 ಕಿಮಿ ಹಾದು ಹೋಗುವ ಈ ಮಾರ್ಗದಲ್ಲಿ ಆಡುಗೋಡಿ ಮತ್ತು ಮಾವಿನಕೊಪ್ಪ ನಡುವಿನ 13 ಕಿಮಿ ಮಾರ್ಗದಲ್ಲಿ 4500 ಮರಗಳ ಕಡಿತಲೆಯಾಗಲಿದೆ. 40 ಹೆಕ್ಟೇರ್ ಅರಣ್ಯ ಪ್ರದೇಶ ಬರಿದಾಗಲಿದೆ. ಈ ರಸ್ತೆ ಕಾಮಗಾರಿಗೆ ಅರಣ್ಯ ಕ್ಲಿಯರೆನ್ಸ್ ಸಿಗದೆಯೂ ಶರಾವತಿ ಹಿನ್ನೀರಿನಲ್ಲಿ ಸೇತುವೆ ಬೇಸ್ ಮೆಂಟ್ ಗೆ ಅಡಿಪಾಯ ಹಾಕಲಾಗಿದೆ.
ಆಕ್ಷೇಪಣೆಯಲ್ಲಿ ಇರುವುದೇನು?:
ಉದ್ದೇಶಿತ ಬೈಪಾಸ್ ರಸ್ತೆ ಪಶ್ಚಿಮಘಟ್ಟ ಪರಿಸರ ಸೂಕ್ಷ್ಮವಲಯ ಪ್ರದೇಶದಲ್ಲಿದೆ. ಹಿರೇಭಾಸ್ಕರ, ಲಿಂಗನಮಕ್ಕಿ ಜಲಾಶಯ ನಿರ್ಮಾಣಕ್ಕಾಗಿ ಈ ಭಾಗದಲ್ಲಿ ಹಿಂದೆ ದಟ್ಟ ಅರಣ್ಯ ನಾಶವಾಗಿದೆ. 25 ಸಾವಿರ ಎಕರೆ ಅರಣ್ಯ ಭೂಮಿಯನ್ನು ಮುಳುಗಡೆ ಸಂತ್ರಸ್ತರ ಪುನರ್ವಸತಿಗೆ ನೀಡಲಾಗಿದೆ. ಇಷ್ಟಲ್ಲದೇ ಈಗ ಹೆದ್ದಾರಿ ನಿರ್ಮಾಣದಿಂದ ಇನ್ನಷ್ಟು ಅರಣ್ಯ ಹಾಳಾಗಲಿದೆ.
ಹೆದ್ದಾರಿ ಹಾದು ಹೋಗುವ ಭೂಪ್ರದೇಶ ಪರಿಸರ ಸೂಕ್ಷ್ಮವಲಯ ಎಂದು ಗುರುತಿಸಿಕೊಂಡಿದ್ದರೂ ಅರಣ್ಯ ಇಲಾಖೆಯು ಹಿಂದೆ ಕೈಗೊಂಡ ಸರ್ವೆಯಲ್ಲಿ ಈ ಅಂಶವನ್ನು ಮರೆಮಾಚಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ವರದಿ ನೀಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈಗಿರುವ ರಸ್ತೆಯನ್ನೇ 2014ರಲ್ಲಿ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಿ ಹೊರಡಿಸಿದ್ದ ಅಧಿ ಸೂಚನೆಯಲ್ಲಿ ಬೈಪಾಸ್ ರಸ್ತೆ ನಿರ್ಮಾಣದ ಉಲ್ಲೇಖವೇ ಇಲ್ಲ.
ಫಾರೆಸ್ಟ್ ಕ್ಲಿಯರೆನ್ಸ್ ಸಿಗುವ ಮುನ್ನವೇ ಬೈಪಾಸ್ ರಸ್ತೆಯಲ್ಲಿ 4 ಹೊಸ ಸೇತುವೆಗಳ ನಿರ್ಮಾಣಕ್ಕೆ ಕಾಮಗಾರಿ ಆದೇಶ ನೀಡಿರುವುದು ನಿಯಮಬಾಹಿರ ವಾಗಿದೆ. ಸರಿಯಾದ ವರದಿ ನೀಡದ ಅರಣ್ಯ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿ ಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು. ಪರಿಸರಕ್ಕೆ ಹಾನಿಯಾಗುವ ಈ ಬೈಪಾಸ್ ರಸ್ತೆ ಕಾಮಗಾರಿಯನ್ನು ನಿಲ್ಲಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಗಿರೀಶ್ ಆಚಾರ್ ಹೇಳಿದ್ದಾರೆ.
ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಕಾರ‌್ಯ ನಡೆಯುತ್ತಿರುವ ಸಂದರ್ಭದಲ್ಲಿ ಬೈಪಾಸ್ ರಸ್ತೆಯ ಅಗತ್ಯವೇ ಇಲ್ಲ, ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ವಲಯದಲ್ಲಿ ರಸ್ತೆ ನಿರ್ಮಾಣದಿಂದ ಇಲ್ಲಿನ ಜೀವವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಬೈಪಾಸ್ ನಿರ್ಮಾಣಕ್ಕೆ 25 ಹೆಕ್ಟರ್ ದಟ್ಟ ಅರಣ್ಯ ನಾಶವಾಗಲಿದೆ. ಆದರೆ ಕೇವಲ 18.84 ಹೆಕ್ಟೇರ್ ಭೂಮಿ ಅಗತ್ಯತೆಯನ್ನು ಸರ್ವೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಪರಿಸರ ಸಚಿವಾಲಯದಿಂದ ಫಾರೆಸ್ಟ್ ಕ್ಲಿಯರೆನ್ಸ್ ದೊರೆತಿಲ್ಲ, ಪರಿಹಾರಾತ್ಮಕ ಭೂಮಿಯ ಭೂ ಪರಿವರ್ತನೆ ಕಾರ‌್ಯ ಪೂರ್ಣಗೊಂಡಿಲ್ಲ, ಆದರೂ ಹೆದ್ದಾರಿ ಕಾಮಗಾರಿ ಆರಂಭಗೊಳಿಸಲಾಗಿದೆ. ಸುಮಾರು 313 ಕೋಟಿ ರೂ. ವೆಚ್ಚದಲ್ಲಿ ಹೊಸನಗರ ಹಾಗೂ ಬೆಕ್ಕೋಡಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದು, ಅವೈಜ್ಞಾನಿಕವಾಗಿ ಮಣ್ಣು ತೆಗೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಭೂಮಿ ಗುತ್ತಿಗೆ ಪಡೆದವರಿಂದ ನಿರಾಕ್ಷೇಪಣೆ
ಯೋಜನೆಗೆ ಬಳಸುವ ಅರಣ್ಯಭೂಮಿಗೆ ಪರಿಹಾರಾತ್ಮಕವಾಗಿ ಸೊರಬ ತಾಲೂಕಿನ ಕೊಡಂಬಿ ಗ್ರಾಮದಲ್ಲಿಭೂಪ್ರದೇಶ ಗುರುತಿಸಲಾಗಿದ್ದು, ಅಲ್ಲಿ ಅರಣ್ಯ ಬೆಳೆಸುವ ಸಲುವಾಗಿ ಮುಂದಿನ ಹತ್ತು ವರ್ಷಗಳಿಗೆ 7.34 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ಆದರೆ ಈ ಪ್ರದೇಶವು ಡೀಮ್ ಅರಣ್ಯವಾಗಿದ್ದು, ಈಗಾಗಲೇ ದಟ್ಟ ಕಾಡಿದೆ. ಹೊಸದಾಗಿ ಅಲ್ಲಿ ಅರಣ್ಯ ಬೆಳೆಸುವ ಅವಕಾಶವೇ ಇಲ್ಲ. ಅರಣ್ಯವಿಲ್ಲದ ಪ್ರದೇಶದ ಬದಲಾಗಿ ಈಗಾಗಲೇ ನೈಸರ್ಗಿಕ ಅರಣ್ಯವಿರುವ ಪ್ರದೇಶವನ್ನೇ ಆಯ್ಕೆ ಮಾಡಿರುವುದು ನಿಯಮ ಉಲ್ಲಂಘನೆಯಾಗಿದೆ. ಮುಳುಗಡೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಬೈಪಾಸ್ ಗೆ ಎಂಪಿಎಂ ಹಾಗೂ ಕೆಪಿಸಿ ಸಂಸ್ಥೆಗಳಿಂದ ನಿರಾಕ್ಷೇಪಣೆ ಪಡೆಯಲಾಗಿದೆ. ಆದರೆ ಆ ಸಂಸ್ಥೆಗಳು ಗುತ್ತಿಗೆ ಆಧಾರದಲ್ಲಿ ಭೂಮಿ ಪಡೆದಿದ್ದು, ಮೂಲ ಇಲಾಖೆಗಳಿಂದ ನಿರಾಕ್ಷೇಪಣೆ ಪಡೆದಿಲ್ಲದಿರುವುದೂ ಸೇರಿದಂತೆ ಹತ್ತಾರು ನಿಯಮಗಳ ಉಲ್ಲಂಘನೆಯಾಗಿದೆ. ಈ ಕಾರಣಕ್ಕೆ ಉದ್ದೇಶಿತ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಕೋರಲಾಗಿದೆ.
ಅರಣ್ಯದಲ್ಲಿ ಬೈಪಾಸ್ ಸಮಗ್ರ ತನಿಖೆಗೆ ಸೂಚನೆ
ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ 766ಸಿ ನಲ್ಲಿ ಹೊಸನಗರದ ಮಾವಿನಕೊಪ್ಪದಿಂದ ಅಡುಗೋಡಿ ವರೆಗಿನ ಬೈಪಾಸ್ ಕಾಮಗಾರಿಗೆ ಪರಿಸರ ಕಾಯಕರ್ತ ಗಿರೀಶ್ ಆಚಾರ್ ಸಲ್ಲಿಸಿದ ಆಕ್ಷೇಪಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರ ಗಳ ಸಚಿವಾಲಯಗಳು ಪ್ರತಿಕ್ರಿಯಿಸಿವೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯಕಾವ್ಯದರ್ಶಿಗೆ ಸೂಚನೆ ನೀಡಿದ್ದು, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯ ಅಧಿಕಾರಿಯಿಂದ ಸಮಗ್ರ ಪರಿಶೀಲನೆ ನಡೆಸಿ ಮುಂದಿನ ಕ್ರಮದ ಶಿಫಾರಸಿನೊಂದಿಗೆ 10 ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಇದಲ್ಲದೇ ಕೇಂದ್ರ ಸರಕಾರದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಇಲಾಖೆಯ ಉಪ ಮಹಾನಿರೀಕ್ಷಕಿ ಪ್ರಣೀತಾ ಪೌಲ್ ಸಹ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರಕಾರದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯಕಾವ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ಬೈಪಾಸ್ ರಸ್ತೆ
ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರಕಾಮಗಾರಿ ಆರಂಭಿಸಿರುವುದು ಸೇರಿದಂತೆ ಇಡೀ ಪ್ರಕ್ರಿಯೆಯಲ್ಲಿ ಹಲವು ನಿಯಮಗಳನ್ನು ಉಲ್ಲಂಘಿಸಲಾಗಿದೆ. ಬೈಪಾಸ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಬಾರದು ಎಂದು ಗಿರೀಶ್ ಆಚಾರ್ ಹಾಗೂ ವಕೀಲ ವೀರೇಂದ್ರ ಪಾಟೀಲ್ ಸರಕಾರಗಳಿಗೆ ಪತ್ರ ಬರೆದಿದ್ದರು.