ad

ಕೃಷಿ ಮೇಳಕ್ಕೆ ಮೊದಲನೇ ದಿನವೇ 50 ಸಾವಿರ ರೈತರು ಭಾಗಿ

SUDDILIVE || SHIVAMOGGA

ಕೃಷಿ ಮೇಳಕ್ಕೆ ಮೊದಲನೇ ದಿನವೇ 50 ಸಾವಿರ ರೈತರು ಭಾಗಿ-50,000 farmers participate in the agricultural fair on the first day itself

Fair, agriculture


ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಸಾವಯವ ಕೃಷಿ, ಅಣಬೆ ಕೃಷಿ, ಸಹಜ ಕೃಷಿ, ಪುಷ್ಪಕೃಷಿ ಹೀಗೆ ಅನೇಕ ಬಗೆಯ ಕೃಷಿ ಪದ್ದತಿಗಳು ಅಲ್ಲಿ ಅನಾವರಣಗೊಂಡಿದ್ದವು. ಬಗೆಬಗೆಯ ಗಿಡಗಳು, ಬೀಜಗಳು, ಆಧುನಿಕ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ಮಳಿಗೆಗಳ ಎದುರು ಕೃಷಿಕರು ಕುತೂಹಲದಿಂದ ವೀಕ್ಷಣೆ ಮಾಡಿರುವ ದೃಶ್ಯ ಕಂಡು ಬಂದಿದೆ. 

 ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿವಿಯಲ್ಲಿ ಆರಂಭವಾದ ಕೃಷಿ ಮೇಳದಲ್ಲಿ ಮೊದಲ ದಿನವೇ 50 ಸಾವಿರ ಜನ ಮೇಳದಲ್ಲಿ ಭಾಗವಹಿಸಿದ್ದರು. ತಾಂತ್ರಿಕ ವಿಚಾರ ಸಂಕಿರಣದಲ್ಲಿ ನೂರಾರು ರೈತರು ಭಾಗವಹಿಸಿ ವಿವಿಧ ಬಗೆಯ ಕೃಷಿ ಬಗ್ಗೆ ಮಾಹಿತಿ ಪಡೆದುಕೊಂಡರು.

Fair, agriculture

ಕೃಷಿ, ತೋಟಗಾರಿಕೆ, ಮೀನು ಕೃಷಿ, ಜೇನು ಕೃಷಿ, ಹೈನುಗಾರಿಕೆ, ಔಷಧ ವಿಜ್ಞಾನ, ಕೃಷಿಯಲ್ಲಿ ತಾಂತ್ರಿಕತೆ, ನವೀನ ಆವಿಷ್ಕಾರಗಳು..ಹೀಗೆ ಹೊಸತನವೊಂದಕ್ಕೆ ಕೃಷಿ ಮೇಳ ಸಾಕ್ಷಿಯಾಗುತ್ತಿದೆ. ವಿವಿಯ ವಿವಿಧ ಸಂಶೋಧನಾ ಕೇಂದ್ರಗಳು, ಕಾಲೇಜುಗಳು ಕೃಷಿ ಮೇಳದಲ್ಲಿ ಅನೇಕ ಮಾಹಿತಿಗಳೊಂದಿಗೆ ಪಾಲ್ಗೊಂಡಿವೆ. ಕಣ್ಮರೆಯಾಗುತ್ತಿರುವ ಭತ್ತದ ತಳಿಗಳು, ಹೊಸ ಬಗೆಯ ರಾಗಿ, ಮೆಕ್ಕೆಜೋಳದ ತಳಿಗಳು, ರೈತರ ಖರ್ಚನ್ನು ಕಡಿಮೆಗೊಳಿಸಿ ಹೆಚ್ಚು ಆದಾಯ ತರುವ ಕೃಷಿ ಪದ್ದತಿಗಳನ್ನು ಮೇಳದಲ್ಲಿ ಪರಿಚಯಿಸಲಾಗಿದೆ. 

ಕೃಷಿಗೆ ಪೂರಕವಾದ ಬೀಜ, ಗೊಬ್ಬರ, ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ಮೇಳ ಸಾಕಷ್ಟು ಶ್ರಮ ವಹಿಸಿದೆ. ವಿಶ್ವ ವಿದ್ಯಾಲಯದಿಂದ ಕೃಷಿ ಹಾಗೂ ತೋಟಗಾರಿಕೆ ಬಗ್ಗೆ ಮಾಹಿತಿ ನೀಡುವ ಮಳಿಗೆಗಳು ಒಂದೆಡೆ, ವಿವಿಧ ಖಾಸಗಿ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸುತ್ತಿರುವ ಮಳಿಗೆಗಳು ಮತ್ತೊಂದೆಡೆ.

ಕೃಷಿ ಮೇಳದಲ್ಲಿ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಗಳ ಬಗ್ಗೆ ಮಾತ್ರವಲ್ಲದೇ ಬಾಗಲಕೋಟೆ ಹಾಗೂ ರಾಯಚೂರು ವಿವಿಗಳ ತಜ್ಞರು ಕೂಡ ಪಾಲ್ಗೊಂಡು ತಮ್ಮಲ್ಲಿ ನಡೆದ ಸಂಶೋಧನೆಗಳ ಮಾಹಿತಿಗಳನ್ನು ರೈತರಿಗೆ ನೀಡುತ್ತಿದ್ದಾರೆ. ಶಿವಮೊಗ್ಗ, ತೀರ್ಥಹಳ್ಳಿ, ಶೃಂಗೇರಿ ಅಡಕೆ ಸಂಶೋಧನಾ ಕೇಂದ್ರಗಳು, ಕತ್ತಲಗೆರೆ ಸಂಶೋಧನಾ ಕೇಂದ್ರ, ಹಿರಿಯೂರು, ದಾವಣಗೆರೆ, ಮೂಡಿಗೆರೆ ಹಾಗೂ ಬ್ರಹ್ಮಾವರದ ಸಂಶೋಧನಾ ಕೇಂದ್ರಗಳು, ಗೇರು ಸಂಶೋಧನಾ ನಿರ್ದೇಶನಾಲಯ, ಜೈವಿಕ ಮಾಹಿತಿ ಕೇಂದ್ರ, ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ಹೀಗೆ ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಬಹುತೇಕ ಸಂಶೋಧನಾ ಕೇಂದ್ರಗಳು ಮೇಳದಲ್ಲಿ ಭಾಗವಹಿಸಿ ಮಾಹಿತಿ ನೀಡುವಲ್ಲಿ ಮುಂದಾಗಿವೆ.

ತಳಿಗಳ ಪರಿಚಯಕ್ಕೆ ವೇದಿಕೆ

ಮೈಸೂರು ಸಣ್ಣ, ರಾಜಭೋಗ, ಗುಲ್ವಾಡಿ ಸಣ್ಣ, ಜಾಸ್ಮಿನ್, ಜಯ, ಸಿದ್ದಸಾಲೆ, ಹೊಳೆಸಾಲು, ರಂಗೋಲಿ ಸೇರಿದಂತೆ 50ಕ್ಕೂ ಹೆಚ್ಚು ಅಪರೂಪದ ಭತ್ತದ ತಳಿಗಳು, ಕರಿಮುಂಡಗ, ದೊಡ್ಡ, ಜಗಳೂರು ರಾಗಿ, ಬೋಂಡ ರಾಗಿ ಸೇರಿದಂತೆ ಸುಮಾರು 10 ಬಗೆಯ ರಾಗಿ ತಳಿಗಳು, ಉಳ್ಳಾಲ, ವೆಂಗುರ್ಲಿಯ ವಿವಿಧ ತಳಿಗಳ ಗೋಡಂಬಿ, ತೀರ್ಥಹಳ್ಳಿ, ತರೀಕೆರೆ, ಸಾಗರ ಭಾಗದ ಅಡಕೆ, ವಿವಿಧ ಬಗೆಯ ಸಿರಿಧಾನ್ಯಗಳು, ಕೋಕೋ...ಹೀಗೆ ವಿವಿಧ ಬಗೆಯ ತಳಿಗಳು, ಪ್ರದೇಶವಾರು ಬೆಳಗಳ ಪರಿಚಯಕ್ಕೆ ಕೃಷಿ ಮೇಳ ವೇದಿಕೆಯಾಗಿದೆ. 

ಅಂಗಾಶ ಬಾಳೆ, ತಾಳೆ, ಕಾಫಿ, ಕಾಳು ಮೆಣಸು ಕೃಷಿ ಬಗ್ಗೆಯೂ ಇಲ್ಲಿ ತಜ್ಞರಿಂದ ಮಾಹಿತಿ ಸಿಗುತ್ತದೆ. ವಿವಿಧ ಬಗೆಯ ಹಣ್ಣು, ತರಕಾರಿ ಬೀಜಗಳ ಮಾರಾಟದ ಮಳಿಗೆಯೂ ಇಲ್ಲುಂಟು. ಕೃಷಿಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಯಂತ್ರೋಪಕರಣಗಳನ್ನೂ ಪರಿಚಯಿಸಲಾಗುತ್ತಿದೆ. 

ಕೃಷಿ ತಾಕಿಗೆ ರೈತರ ಭೇಟಿ

ಕೃಷಿಯ ಹೊಸ ಸಾಧ್ಯತೆಗಳನ್ನು ರೈತರು ಪ್ರತ್ಯಕ್ಷವಾಗಿ ಕಾಣಲು ಅನುಕೂಲವಾಗುವಂತೆ ಕೃಷಿ ತಾಕುಗಳನ್ನು ನಿರ್ಮಿಸಲಾಗಿದೆ. ಹೆಸರು, ಸೂರ್ಯಕಾಂತಿ, ರಾಗಿ, ಮುಸುಕಿನ ಜೋಳ, ವಿವಿಧ ಬಗೆಯ ತರಕಾರಿಗಳು, ಪುಷ್ಪಕೃಷಿ ಮುಂತಾದ ತಾಕುಗಳಿಗೆ ಭೇಟಿ ನೀಡಿದ ರೈತರು ಕುತೂಹಲದಿಂದ ಮೊದಲ ದಿನ ಮಾಹಿತಿ ಪಡೆದರು. ನಿನ್ನೆ ಆರಂಭಗೊಂಡ ಕೃಷಿ ಮೇಳಕ್ಕೆ ಸುಮಾರು 50 ಸಾವಿರ ಜನ ರೈತರು ಭಾಗಿಯಾಗಿದ್ದರು. 

ಸೋಲಾರ್, ತಂತ್ರಜ್ಞಾನಕ್ಕೂ ಬೇಡಿಕೆ:

ವಿದ್ಯುತ್ ಸಮಸ್ಯೆಯಿಂದ ಪಾರಾಗಲು ರೈತರು ಸೋಲಾರ್ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದ ದೃಶ್ಯ ಕೃಷಿ ಮೇಳದಲ್ಲಿ ಕಂಡು ಬಂದಿತು. ಸೋಲಾರ್ ಶಕ್ತಿಯನ್ನು ಬಳಸಿ ಪಂಪ್‌ಸೆಟ್ ಮೂಲಕ ನೀರೆತ್ತುವ ಪ್ರಾತ್ಯಕ್ಷಿಕೆಯನ್ನು ಹಲವರು ಕುತೂಹಲದಿಂದ ನೋಡುತ್ತಿದ್ದರು.

ಇನ್ನು ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಜ್ಞಾನದತ್ತಲೂ ರೈತರು ಮುಖ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ಹೊರಬಂದು ಪವರ್ ಟ್ರಿಲ್ಲರ್, ಟ್ರಾಕ್ಟರ್, ಚಿಕ್ಕ ಗಾತ್ರದ ಜೆಸಿಬಿಗಳ ಬಗ್ಗೆ ಅನೇಕರು ಮಾಹಿತಿ ಕಲೆ ಹಾಕುತ್ತಿದ್ದರು. ಕೆಲ ಕಂಪನಿಗಳು ಸ್ಥಳದಲ್ಲೇ ಬ್ಯಾಂಕ್ ಸಾಲ ದೊರಕಿಸಿಕೊಡುವ ಭರವಸೆಯನ್ನೂ ನೀಡುವ ಮೂಲಕ ರೈತರಿಗೆ ಬೆಂಬಲ ನೀಡಿದವು.

50,000 farmers participate in the agricultural fair on the first day itself

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close