Girl in a jacket

ಲಿಫ್ಟ್ ಲೋಪ - ಸೇವಾ ನ್ಯೂನ್ಯತೆಗೆ ಪರಿಹಾರ ಸೂಚಿಸಿದ ಗ್ರಾಹಕರ ಆಯೋಗ



ಸುದ್ದಿಲೈವ್/ಶಿವಮೊಗ್ಗ


ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಇವರು ಎದುರುದಾರರಾದ ನಿಭವ್ ಲಿಫ್ಟ್  ಪ್ರೆ.ಲಿ. ಚೆನ್ನೆ ಮತ್ತು ಬೆಂಗಳೂರು ಇವರ ವಿರುದ್ದ ದಾಖಲಿಸಿದ್ದ ದೂರನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾನ್ಯೂನ್ಯತೆ ಹಿನ್ನೆಲೆ ಎದುರುದಾರರು ಪರಿಹಾರ ನೀಡುವಂತೆ ಆದೇಶಿಸಿದೆ. 


ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್ ರವರು ವಕೀಲರ ಮುಖಾಂತರ ಎದುರಾದರರ ವಿರುದ್ದ ದೂರನ್ನು ಸಲ್ಲಿಸಿ, ತಾವು ಗೋಪಾಲಗೌಡ ಬಡಾವನೆಯಲ್ಲಿ ಮೊದಲನೇ ಮತ್ತು ಎರಡನೇ ಮಹಡಿಯುಳ್ಳ ಮನೆಯನ್ನು ಕಟ್ಟಿಸಿದ್ದು, ಮನೆಯಲ್ಲಿ ವೃದ್ದ ತಂದೆ, ತಾಯಿ, ಹೆಂಡತಿ ಮತ್ತು ಮಕ್ಕಳಿಗೆ 2ನೇ ಮಹಡಿಗೆ ಹೋಗಲು ಅನುಕೂಲವಾಗುವಂತೆ ಎದುರುದಾರರಿಂದ ಒಂದು ಎಲಿವೇಟರ್/ಲಿಫ್ಟ್ ಖರೀದಿಸಿದ್ದರು.  


ಜಿಎಸ್‌ಟಿ ಒಳಗೊಂಡಂತೆ ರೂ.13,44,999/- ಗಳನ್ನು ಪಾವತಿಸಿ ಮನೆಯ ಗೃಹ ಪ್ರವೇಶದ ಒಳಗಾಗಿ ಎಲಿವೇಟರ್/ಲಿಫ್ಟ್‌ನ್ನ ಅಳವಡಿಸಲು ಹೇಳಿರುತ್ತಾರೆ. ಅದರಂತೆ ಎದುರುದಾರರು ಎಲಿವೇಟರ್/ಲಿಫ್ಟ್‌ನ್ನ ಅಳವಡಿಸಿರುತ್ತಾರೆ. 


ಆದರೆ ಸದರಿ ಎಲಿವೇಟರ್/ಲಿಫ್ಟ್ ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ಮನೆಯ ಗೃಹ ಪ್ರವೇಶಕ್ಕೆ ಬಂದ ಬಂಧುಮಿತ್ರರು 2ನೇ ಮಹಡಿವರೆಗೆ ಹೋಗಲು ತೊಂದರೆಯಾಗಿರುತ್ತದೆ ಹಾಗೂ ಇದರಿಂದ ಮನೆಯ ಗೃಹ ಪ್ರವೇಶಕ್ಕೆ ಬಂದ ಬಂಧುಮಿತ್ರರ ಎದುರಲ್ಲಿ ತಮಗೆ ಅವಮಾನವಾಗಿದ್ದು, ಎದುರುದಾರರ ಕೃತ್ಯದಿಂದಾಗಿ ತಾವು ಮನೆಯವರಿಂದ ಹಾಗೂ ಬಂಧುಮಿತ್ರರಿಂದ ತುಂಬಾ ಅವಮಾನಕ್ಕೆ ಗುರಿಯಾಗಿರುವುದಲ್ಲದೆ ಮಾನಸಿಕವಾಗಿ ಸಹ ತುಂಬಾ ನೊಂದಿರುವುದಾಗಿ ದೂರನ್ನು ಸಲ್ಲಿಸಿದ್ದರು. 


ಎದುರುದಾರರಿಂದ ತಾವು ಎಲಿವೇಟರ್/ಲಿಫ್ಟ್‌ನ್ನ ಖರೀದಿಸಿದ ಮೊತ್ತವನ್ನು ಹಿಂದಿರುಗಿಸಲು ಹಾಗೂ ನ್ಯಾಯಾಲಯದ ಖರ್ಚು-ವೆಚ್ಚ ಹಾಗೂ ಪರಿಹಾರವಾಗಿ ರೂ.50,000/- ಗಳನ್ನು ನೀಡಬೇಕೆಂದು ಎದುರುದಾರರಿಗೆ ನಿರ್ದೇಶನ ನೀಡಬೇಕೆಂದು ಕೋರಿದ್ದರು. 


ದೂರುದಾರರ ದೂರು, ಎದುರುದಾರರ ಲಿಖಿತ ತಕರಾರು, ಉಭಯತರರು ಸಲ್ಲಿಸಿದ ದಾಖಲೆಗಳು ಹಾಗೂ ಸಾಕ್ಷಾಧಾರಗಳನ್ನು ಹಾಗೂ ಉಭಯತರರ ವಾದ-ವಿವಾದಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಉಭಯ ಪಕ್ಷಗಾರರ ಒಪ್ಪಂದದಂತೆ ಗೃಹ ಪ್ರವೇಶದ ಒಳಗಾಗಿ ಎಲಿವೇಟರ್/ಲಿಫ್ಟ್‌ನ್ನ ಸರಿಯಾಗಿ ಕೆಲಸ ಮಾಡುವ ಹಾಗೆ ಅಳವಡಿಸಿಕೊಟ್ಟಿಲ್ಲವಾದ್ದರಿಂದ ಎದುರುದಾರರು ಸೇವಾ ನ್ಯೂನ್ಯತೆ ಎಸಗಿರುವುದಾಗಿ ಕಂಡು ಬಂದ ಹಿನ್ನಲೆಯಲ್ಲಿ ಗ್ರಾಹಕರ ವೇದಿಕೆ ಎದುರುದಾರರು ದೂರುದಾರರಿಂದ ಪಡೆದ ರೂ.13,44,999/-ಗಳ ಮೇಲೆ ದಿ: 06-02-2024 ರಿಂದ ಶೇ.9 ಬಡ್ಡಿಯನ್ನು 45 ದಿನಗಳ ಒಳಗಾಗಿ ಪಾವತಿಸಬೇಕು. 


ತಪ್ಪಿದಲ್ಲಿ ಸದರಿ ಮೊತ್ತದ ಮೇಲೆ ಶೇ.10 ರಂತೆ ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಪೂರಾ ಹಣ ನೀಡುವವರೆಗೂ ಹಾಗೂ ರೂ.50,000/- ಗಳನ್ನು ಪರಿಹಾರವಾಗಿ ಮತ್ತು ರೂ.10,000/- ಗಳನ್ನು ವ್ಯಾಜ್ಯದ ಖರ್ಚು-ವೆಚ್ಚದ ಬಾಬ್ತಾಗಿ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತ ಬಿ.ಪಟ್ಟಣ ಶೆಟ್ಟಿ ಹಾಗೂ ಬಿ.ಡಿ.ಯೋಗಾನಂದ ಇವರನ್ನೊಳಗೊಂಡ ಪೀಠವು ಆ.21 ರಂದು ಆದೇಶಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು