Girl in a jacket

ಬಹುಮುಖಿ ಕಾರ್ಯಕ್ರಮದಲ್ಲಿ ಚಿಂತಕ ರವಿಕುಮಾರ್ ಹೇಳಿದ್ದೇನು?


ಸುದ್ದಿಲೈವ್/ಶಿವಮೊಗ್ಗ


ವೈವಿಧ್ಯಮಯ ಭಾರತದೊಳಗೊಂದು ಅಸ್ಪೃಶ್ಯಭಾರತವಿದೆ. ಇದು ನಮಗೆ ಕಾಣಬೇಕಾದರೆ ನಾವು ಅಂಬೇಡ್ಕರ್ ಕಣ್ಣುಗಳಿಂದ  ನೋಡಿದಾಗ ಮಾತ್ರ ಕಾಣುತ್ತದೆ ಎಂದು ಪತ್ರಕರ್ತ, ಚಿಂತಕ ಎನ್. ರವಿಕುಮಾರ್ ಹೇಳಿದರು.


ಬಹಮುಖಿ ಆಯೋಜಿಸಿದ್ದ ’ದಲಿತ-ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಉಪನ್ಯಾಸ ನೀಡುತ್ತಿದ್ದ ಅವರು ದಲಿತರು,  ದಲಿತತ್ವ ಎಂಬುದರ ಕುರಿತು ಮಾತನಾಡುವುದು ಎಂದರೆ ಅಂತಿಮವಾಗಿ ಭಾರತದ ಮೂಲನಿವಾಸಿಗಳ ಅಸ್ತಿತ್ವ , ಅಸ್ಮಿತೆ  ಮತ್ತು ಅವರು  ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಸವಾಲುಗಳ ಕುರಿತು ಮಾತನಾಡುವುದೇ  ಆಗಿದೆ. ದಿನ ನಿತ್ಯ ಭಾರತದಲ್ಲಿ ಜಾತಿ ಆಧಾರಿತ ಕ್ರೌರ್ಯ ನಡೆಯುತ್ತಿದ್ದು ಸ್ವಾತಂತ್ರ್ಯ ಬಂದ ನಂತರದಲ್ಲೂ ಮುಂದುವರೆದಿರುವುದು ವಿಪರ್ಯಾಸ ಎಂದರು.


ನಾವು ಇವತ್ತಿನ ವಿಶ್ವಗುರು ಭಾರತವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ದೇಶದ ಸಾಮಾಜಿಕ ಸಂರಚನೆಯನ್ನು ಆರ್ಥಮಾಡಿಕೊಳ್ಳಬೇಕು. ಅಸಲಿಗೆ ಭಾರದಲ್ಲಿರುವುದು ಧರ್ಮವಲ್ಲ, ಜಾತಿ ಮಾತ್ರವೇ ಆಗಿದೆ ಎನ್ನುವುದಕ್ಕೆ ಜಾತಿ ಹೆಸರಿನಲ್ಲಿ ದಿನನಿತ್ಯ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ. ಇಂದು ಜಾತೀಯತೆ ರೂಪಾಂತರವಾಗಿದೆಯೇ ವಿನಃ ಅದು ನಾಶವಾಗಿಲ್ಲ.  ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬರೆಯದೆ ಹೋಗಿದ್ದರೆ ಭಾರತದ ದಲಿತರ ಪಾಡು ಇನ್ನಷ್ಟು ಭೀಕರವಾಗಿರುತ್ತಿತ್ತು.  ಮನುಷ್ಯರನ್ನು ದೂರ ನಿಲ್ಲಿಸಿ ಮಾತನಾಡುವುದು ನಿವಾರಣೆಯಾಗಿದೆ ,ಆದರೆ ಅವರನ್ನು ಮನಸ್ಸಿನೊಳಗೆ ಬಿಟ್ಟುಕೊಳ್ಳದೆ ದೂರವಿಟ್ಟು ಯಾವುದೋ ಕಾಲವಾಗಿದೆ.  ಜೊತೆಯಲ್ಲಿ ಉಣ್ಣುವುದು, ಓಡಾಡುವುದು ಇದ್ದರೂ ಅಂತಿಮವಾಗಿ ಜಾತಿಗೆ ಬಂದು ನಿಲ್ಲುತ್ತಾರೆ ಎಂದು ರವಿಕುಮಾರ್ ವಿಶ್ಲೇಷಿಸಿದರು.


ಜಾತಿಯತೆ ಜೀವಂತವಾಗಿರುವಾಗಲೂ ಸಂವಿಧಾನದ ಸೌಲತ್ತುಗಳನ್ನು ಪಡೆದುಕೊಂಡ ದಲಿತರು ತಮ್ಮ ಅಸ್ಮಿತೆಯನ್ನು ಮರೆಮಾಚಿಕೊಳ್ಳಲು ಸವರ್ಣ ಸಂಸ್ಕೃತಿಯ ಧರಿಸಲು ತವಕಿಸುತ್ತಿದ್ದಾರೆ. ಇದು ದಲಿತತ್ವದಲ್ಲಿ ಅಡಗಿರುವ ವೈಚಾರಿಕತೆಗೆ ಬಗೆವ ದ್ರೋಹವೇ ಆಗಿದೆ. ಇಂದು ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರ, ಹತ್ಯೆ ಪ್ರಕರಣಗಳಲ್ಲೂ ಸಮಾಜ ಜಾತಿಯನ್ನು ನೋಡುತ್ತಿದೆ. ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಹತ್ಯೆಗಳಿಗೆ ಸಮಾಜ ಒಕ್ಕೊರಲಿನಿಂದ ಪ್ರತಿಕ್ರಿಯಿಸುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.


ಇಂದು ಜಾತಿ-ಜಾತಿಗಳ ನಡುವೆ ಸಮಾನತೆ ತರುವ ಮೂಲಕ ಜಾತ್ಯಾತೀತ ಭಾರತವನ್ನು ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ಶೋಷಕ ಜಾತಿಗಳು ಶೋಷಿತ ಜಾತಿಗಳ ಬಗೆಗೆ ಅಂತಃಕರಣ, ಸಮಭಾವದಿಂದ ನೋಡಬೇಕು. ಇದೇ ಬುದ್ದಭಾರತದ ಮರುಹುಟ್ಟು ಎಂದು ಎನ್. ರವಿಕುಮಾರ್ ಕರೆ ನೀಡಿದರು.


ಕಾರ್ಯಕ್ರಮವನ್ನು ಕೆ.ಜಿ ವೆಂಕಟೇಶ್ ನಿರೂಪಿಸಿದರು. ಬಹುಮುಖಿಯ ಪ್ರೋ.ಹೆಚ್. ಎಸ್ ನಾಗಭೂಷಣ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು