ಸುದ್ದಿಲೈವ್/ಶಿವಮೊಗ್ಗ
ನಿನ್ನೆ ಮಧ್ಯರಾತ್ರಿ ಯಡಹಳ್ಳಿಕೆರೆಯಲ್ಲಿ ನೀರಿಗೆ ಬಿದ್ದು ಅಪಾಯದ ಹಂತದಲ್ಲಿ ಇದ್ದ ಅರಳಾಪುರ ಸಮೀಪದ ಹುಣಸೇಬೈಲು ರಮೇಶ್ ಅವರನ್ನು 112 ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ವರದಿಯಾಗಿದೆ.
ಯಡೇಹಳ್ಳಿ ಕೆರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದವರನ್ನ ಬಿಜೆಪಿಯ ಎಸ್ಟಿ ಮುಖಂಡರು ಎಂದು ಗುರುತಿಸಲಾಗಿದೆ. ಜೀವ ಉಳಿಸುವ ಮೂಲಕ ತೀರ್ಥಹಳ್ಳಿ ಪೊಲೀಸರು ರಮೇಶ್ ಅವರ ಜೀವ ಉಳಿಸಲು ನೆರವಾಗಿದ್ದಾರೆ.
ಗುತ್ತಿಗೆ ಹಣ ಸರಿಯಾಗಿ ಪಾವತಿಯಾಗದೆ ಸಾಲದ ಸುಳಿಗೆ ಎಸ್ಟಿ ಮುಖಂಡ ಸಿಲುಕಿದ್ದರು. ಇದರಿಂದ ಹಲವರ ಬಳಿ ನೋವು ತೋಡಿಕೊಂಡಿದ್ದರು. ಇದರ ಮಾಹಿತಿಯನ್ನು ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಯಡೇಹಳ್ಳಿ ಕೆರೆಯಲ್ಲಿ ಮುಳುಗುತ್ತಿದ್ದ ಎಸ್ಟಿ ಮುಖಂಡನನ್ನು ಪೊಲೀಸ್ ಸಿಬ್ಬಂದಿಗಳಾದ ರಾಮಪ್ಪ ಮತ್ತು ಲೋಕೇಶ್ ತಮ್ಮಪ್ರಾಣ ಲೆಕ್ಕಿಸದೆ ರಕ್ಷಿಸಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆಗೆ ರಾತ್ರಿ 11 ಗಂಟೆಗೆ ಕರೆ ಬಂದ ಹಿನ್ನಲೆಯಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾದ 112 ರ ರೆಸ್ಪಾಂಡರ್ ರಾಮಪ್ಪ ಮಾಳೂರು ಪೊಲೀಸ್ ಠಾಣೆ ಮತ್ತು ಡ್ರೈವರ್ ಲೋಕೇಶ್ AHC50 ಇವರುಗಳು ಕೂಡಲೇ ದೂರುದಾರರು ತಿಳಿಸಿದ ಯಡೇಹಳ್ಳಿ ಕೆರೆಯ ಹತ್ತಿರ ತಲುಪಿದಾಗ ಕಾರೊಂದು ಅನುಮಾನಾಸ್ಪದವಾಗಿ ನಿಂತಿರುವುದು ಗೋಚರಿಸಿದೆ.
ಶಾಸಕ ಆರಗರಿಂದ ಶ್ಲಾಘನೆ
ಜೀವ ಉಳಿಸಿದ ಪೊಲೀಸ್ ಸಿಬ್ಬಂದಿಗಳಾದ ರಾಮಪ್ಪ ಮತ್ತು ಲೋಕೇಶ್ ರವರಿಗೆ ಶಾಸಕರಾದ ಆರಗ ಜ್ಞಾನೇಂದ್ರರವರು ಹೃದಯಂತರಾಳದ ಅಭಿನಂದನೆ ಸಲ್ಲಿಸಿದ್ದಾರೆ.
ಅಪಾಯವನ್ನು ಲೆಕ್ಕಿಸದೇ ಪ್ರಾಣ ಉಳಿಸಲು ಕೆರೆಗೆ ದುಮುಕಿದ ಪೊಲೀಸರ ಧೈರ್ಯಕ್ಕೆ ಎಷ್ಟು ಮೆಚ್ಚುಗೆ ಹೇಳಿದರೂ ಕೂಡ ಕಡಿಮೆ ,ನಿಮಗೂ ನಿಮ್ಮ ಕುಟುಂಭಕ್ಕೂ ದೇವರು ಸನ್ಮಂಗಳವನ್ನುಂಟು ಮಾಡಲಿ ಎಂದು ಶಾಸಕರು ತಮ್ಮ ಅಭಿನಂದನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪೋಲಿಸರಿಗೆ ಸಹಕರಿಸಿದ ತಮ್ಮೆಲ್ಲಾ ಕಾರ್ಯಕರ್ತರಿಗೂ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ.