ಸುದ್ದಿಲೈವ್/ಭದ್ರಾವತಿ
ಚೀಟಿ ಹಣಕಟ್ಟಲು ಬೈಕ್ ನಲ್ಲಿ ಹೋಗುವಾಗ ಅಪಘಾತವಾಗಿದ್ದ ಪ್ರಕರಣ ಹಲವು ಟ್ವಿಸ್ಟ್ ಪಡೆದುಕೊಂಡಿದೆ. ಯುವಕನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ನಾಲ್ವರು ಅಪರಿಚಿತರು ಕೋಮಕ್ಕೆ ಹೋಗುವಂತೆ ಹೊಡೆದಿದ್ದು ಆತನಿಂದ 25 ಸಾವಿರ ರೂ. ರಾಬರಿಯಾಗಿರುವುದಾಗಿ ಪ್ರಕರಣ ದಾಖಲಾಗಿದೆ.
ನಾಲ್ವರು ಹೊಡೆದಿದ್ದು ಯಾಕೆ? ಅವರೆಲ್ಲಾ ಯಾರು ಯಾರು? ಹಣ ಹೇಗೆ ಕಿತ್ತುಕೊಂಡು ಹೋದರು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಇದರ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಅಪರಾಧಿಗಳನ್ನ ಆದಷ್ಟು ಬೇಗ ಹಿಡಿಯುವಂತೆ ಆಗ್ರಹಿಸಿ ಪ್ರತಿಭಟನೆಉ ಎಚ್ಚರಿಕೆಯನ್ನೂ ನೀಡಿದೆ.
ಎಫ್ಐಆರ್ ನಲ್ಲಿ ಏನಿದೆ?
ಭದ್ರಾವತಿಯ ಜನ್ನಾಪುರದಿಂದ ಮಳೇನಹಳ್ಳಿಯ ಕಾರ್ತಿಕ್ ಎಂಬುವರಿಗೆ 25 ಸಾವಿರ ರೂ ಹಣ ಚೀಟಿ ಕಟ್ಟಲು ಕೆಎ 14 ಇಬಿ 4877 ಕ್ರಮ ಸಂಖ್ಯೆಯ ಸ್ಟಾರ್ ಸಿಟಿ ಬೈಕ್ ನಲ್ಲಿ ಸೆ.2 ರಂದು ಕವಲಗುಂದಿ, ಹೊಳೆನೆರಲೆಕೆರೆ ಮಾರ್ಗವಾಗಿ ಸುಜನ್ ಗೌಡ ಎಂಬ ಯುವಕ ಹೊರಟಿದ್ದಾನೆ.
ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸುಜನ್ ಗೌಡ |
ಹೊಳೆನೆರಳೆ ಕಡೆಯಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಏಕಾಏಕಿ ಬೈಕ್ ಗೆ ಅಡ್ಡ ಬಂದ ಕಾರಣ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಕೆಳಗೆ ಬಿದ್ದಿದ್ದು ಉಪಚರಿಸಲು ಮುಂದಾಗಿದ್ದಾನೆ. ಉಪಚರಿಸುವ ವೇಳೆ ಬಂದ 3-4 ಜನ ಹುಡುಗರು ಆಕೆಯನ್ನ ಆಟೋದಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೂರರಿಂದ-ನಾಲ್ಕು ಜನ ಅಪರಿಚಿತರಲ್ಲಿ ಒಬ್ಬ ಸುಜನ್ ಗೌಡನ ಬಳಿ ಉಳಿದುಕೊಂಡು ಒಂದು ಆಟೋ ಕರೆಯಿಸಿ ಅದರಲ್ಲಿ ಸುಜನ್ ಗೌಡರನ್ನ ಆಸ್ಪತ್ರೆಗೆ ಸೇರಿಸುವಂತೆ ಹೇಳಿ ಆಟೋ ಹತ್ತಿಸಿದ್ದಾನೆ. ಆಟೋ ಹತ್ತಿಸಿದಾಗ ಇಬ್ಬರಿಂದ ಮೂರು ಜನ ಯುವಕರಿದ್ದು ತಮ್ಮ ಮಧ್ಯೆ ಸುಜನ್ ನನ್ನ ಕೂರಿಸಿಕೊಂಡು ಭದ್ರಾವತಿ ಕಡೆ ಚಲಿಸಿದ್ದಾರೆ. ಮಾರ್ಗ ಮಧ್ಯದಲ್ಲಿ ಈತನನ್ನ ಚೆನ್ನಾಗಿ ಥಳಿಸಿದ್ದಾರೆ.
ಸುಜನ್ ನ ಕಣ್ಣು ಮೂಗು ಬಾಯಿಯಲ್ಲಿ ರಕ್ತ ಬಂದಿದೆ. ಅಪರಿಚಿತ ಯುವಕರ ಹೊಡೆತಕ್ಕೆ ಸುಜನ್ ಗೌಡ ಪ್ರಜ್ಞೆ ತಪ್ಪಿದ್ದಾನೆ. ಈ ವೇಳೆ ಮಾರ್ಗಮಧ್ಯದಲ್ಲಿಯೇ ಹಲ್ಲೆ ನಡೆಸಿದ ಯುವಕರು ಇಳಿದು ಹೋಗಿದ್ದಾರೆ.
ಎರಡನೇ ತಾರೀಖು ಪ್ರಜ್ಞೆ ಕಳೆದುಕೊಂಡ ಸುಜನ್ ನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಐದು ದಿನ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದ ಸುಜನ್ ಗೆ ನಿನ್ನೆ ಪ್ರಜ್ಞೆ ಬಂದಿದೆ. ಪ್ರಜ್ಞೆ ಬಂದ ನಂತರ ಪೊಲೀಸರಿಗೆ ನಡೆದ ಘಟನೆ ವಿವರಿಸಿದ್ದಾನೆ. ಭದ್ರಾವತಿ ಗ್ರಾಮಾಂತರ ಪೊಲೀಸರು ಈ ಘಟನೆಯನ್ನ ಹೇಗೆ ಬೇದಿಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂಬುದೇ ರೋಚಕ ಹಾಗೂ ಕುತೂಹಲ ಮೂಡಿಸಿದೆ.