Girl in a jacket

ಪರಿಸರ ಸಮತೋಲನಕ್ಕಾಗಿ ಸೂಡಾದಿಂದ ಗಿಡ ನೆಡುವ ಕಾರ್ಯಕ್ರಮ : ಹೆಚ್.ಎಸ್.ಸುಂದರೇಶ್


ಸುದ್ದಿಲೈವ್/ಶಿವಮೊಗ್ಗ

ಪರಿಸರದಲ್ಲಿ ಸಮೋತಲನ ಕಾಪಾಡಲು ನಾವೆಲ್ಲ ಗಿಡಗಳನ್ನು ನೆಟ್ಟು ಪೋಷಿಸಬೇಕು. ನಗರದ ಹಸುರೀಕರಣ ಮತ್ತು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸೂಡಾ ವತಿಯಿಂದ ವಿವಿಧ ಬಡಾವಣೆಗಳಲ್ಲಿ ಸುಮಾರು 5 ರಿಂದ 6 ಸಾವಿರ ಗಿಡಗಳನ್ನು ನೆಟ್ಟು ಪೋಷಿಸಲಾಗುವುದು ಎಂದು ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ತಿಳಿಸಿದರು.

ನಗರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಶನಿವಾರ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

 ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ನಿರಂತರ ಪರಿಸರ ಹಾನಿಯಿಂದ ಪ್ರಸ್ತುತ ಮಲೆನಾಡಿನಲ್ಲೂ 43 ಡಿಗ್ರಿಗಿಂತಲೂ ಹೆಚ್ಚು ತಾಪಮಾನ ಕಂಡುಬರುತ್ತಿದೆ. ಹೀಗೆಯೇ ಸಾಗಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ನಮ್ಮ ಸುತ್ತಮುತ್ತಲಿನಲ್ಲಿ ಗಿಡಗಳನ್ನು ನೆಟ್ಟು ಮಕ್ಕಳಂತೆ ಅವುಗಳನ್ನು ಪೋಷಿಸಿ ಸಲುಹಬೇಕು ಎಂದು ಕಿವಿ ಮಾತು ಹೇಳಿದರು.

ಪ್ರಾಧಿಕಾರದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 1000, ಊರುಗಡೂರು ಬಡಾವಣೆಯಲ್ಲಿ 1500 ನಿದಿಗೆ ಬಡಾವಣೆ, ಭದ್ರಾವತಿಯ ಕುವೆಂಪು ಬಡಾವಣೆ ಸೇರಿದಂತೆ 5 ರಿಂದ 6 ಸಾವಿರ ಗಿಡಗಳನ್ನು ನೆಡಲಾಗುವುದು. ಸುಮಾರು 7 ಅಡಿಯ ಗಿಡಗಳನ್ನು ನೆಡಲಾಗುವುದು. ಅರಣ್ಯ ಇಲಾಖೆಯವರು 2 ವರ್ಷಗಳ ಕಾಲ ಗಿಡಗಳ ನಿರ್ವಹಣೆ ಮಾಡುವರು.

ಸುಮಾರು 14 ವರ್ಷಗಳಿಂದ ಪ್ರಾಧಿಕಾರ ವ್ಯಾಪ್ತಿಯಲ್ಲಿ ಬಡಾವಣೆ ನಿರ್ಮಾಣ ಆಗಿಲ್ಲ. ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಅನೇಕ ವರ್ಷಗಳಿಂದ ನಿವೇಶನಕ್ಕೆ ಸಂಬAಧಿಸಿದAತೆ ತೊಂದರೆಗಳಿದ್ದು ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ. ನಗರದ ಬಡಾವಣೆಗಳಲ್ಲಿ ಒಟ್ಟು 2300 ನಿವೇಶನಗಳು ಖಾಲಿ ಇವೆ. ಇಲ್ಲಿ ಮನೆಗಳನ್ನು ಕಟ್ಟಬೇಕು. ಇಲ್ಲವಾದಲ್ಲಿ ಅವುಗಳನ್ನು ರದ್ದುಗೊಳಿಸಿ ಮನೆ ಅವಶ್ಯಕತೆ ಇರುವವರಿಗೆ ಹಂಚಿಕೆ ಮಾಡಲು ಸುತ್ತೋಲೆ ಹೊರಡಿಸಿರುವ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹಲವರಿಗೆ ಈ ಸಂಬAಧ ನೋಟಿಸ್ ನೀಡಲಾಗಿದೆ ಎಂದರು.

 ಊರುಗಡೂರಿನಲ್ಲಿ 60 ಎಕರೆಯಲ್ಲಿ ಬಡಾವಣೆ ನಿರ್ಮಿಸಲಾಗುತ್ತಿದ್ದು 672 ನಿವೇಶನ ನಿರ್ಮಿಸಲಾಗುವುದು. ರೈತರಿಗೆ ನೀಡುವ ನಿವೇಶನ ಹೊರತುಪಡಿಸಿ ಉಳಿದ 431 ನಿವೇಶನಗಳನ್ನು ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಿದ್ದು 2 ರಿಂದ 3 ತಿಂಗಳ ಒಳಗೆ ಹಂಚಿಕೆ ಮಾಡಲಾಗುವುದು. ಗೋಪಿಶೆಟ್ಟಿಕೊಪ್ಪದಲ್ಲೂ 104 ಎಕರೆ ಜಮೀನು 50:50 ಅನುಪಾತದಲ್ಲಿ ರೈತರಿಂದ ಖರೀದಿಸಲಾಗುತ್ತಿದೆ. ನಿದಿಗೆಯಲ್ಲಿ 3 ಎಕರೆಯಲ್ಲಿ ಬಡಾವಣೆ ನಿರ್ಮಿಸಲಾಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಪ್ರಾಧಿಕಾರ ಜಮೀನು ಕೊಂಡು ಬಡಾವಣೆ ನಿರ್ಮಿಸುತ್ತಿದೆ.

 ರೈತರು ಖಾಸಗಿಯವರಿಗೆ ತಮ್ಮ ಜಮೀನನ್ನು ಮಾರುವ ಬದಲು ಕಾನೂನುಬದ್ದವಾಗಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನೀಡಿದರೆ ಎಲ್ಲರಿಗೂ ಅನೂಕವಾಗುತ್ತದೆ. ಸೋಗಾನೆ, ಹೊಳೆಹೊನ್ನೋರು, ಭದ್ರಾವತಿ ಭಾಗದಲ್ಲಿ ಜಮೀನು ಮಾರಾಟ ಮಾಡುವವರು ಇದ್ದರೆ 50:50 ಆಧಾರದಲ್ಲಿ ಪ್ರಾಧಿಕಾರಕ್ಕೆ ಮಾರಾಟ ಮಾಡಬಹುದು. ಪ್ರಾಧಿಕಾರದ ವತಿಯಿಂದ ಇನ್ನೂ ಅಭಿವೃದ್ದಿ ಕೆಲಸಗಳು ಆಗಬೇಕಿದ್ದು ಮಾಸ್ಟರ್ ಪ್ಲಾನ್ ನ್ನು ತಯಾರಿಸಲಾಗುತ್ತಿದೆ.

 ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಸೇರಿದಂತೆ ನಿವಾಸಿಗಳ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಒದಗಿಸಲಾಗುವುದು. ಬಡಾವಣೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯವರ ಸಹಕಾರ ಮತ್ತು ಪಾತ್ರ ಮಹತ್ತರವಾಗಿದ್ದು ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.


ಕಾರ್ಯಕ್ರಮದಲ್ಲಿ ಸೂಡಾ ಸದಸ್ಯ ಹೆಚ್.ಎಸ್.ಸಿದ್ದಪ್ಪ, ಅರಣ್ಯ ಇಲಾಖೆ ಎಸಿಎಫ್ ವಿಜಯಕುಮಾರ್, ಸೂಡಾ ಎಇಇ ಬಸವರಾಜ್, ಸಹಾಯಕ ಅಭಿಯಂತರ ಗಂಗಾಧರಸ್ವಾಮಿ, ಆರ್‌ಎಫ್‌ಓ ವಿಜಯಕುಮಾರ್ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ನಿವಾಸಿಗಳು, ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು