ಸುದ್ದಿಲೈವ್/ಶಿವಮೊಗ್ಗ
ಡಿಸಿಸಿ ಬ್ಯಾಂಕ್ ನಲ್ಲಿ ಹೊಸ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬಂದ ನಂತರ ಐದು ಜನ ಹಳಬರು, 6 ಜನ ಹೊಸಬರು ಆಯ್ಕೆಯಾಗಿದ್ದಾರೆ. ನಾಳೆ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ಆರ್ ಎಂ ಮಂಜುನಾಥ್ ಗೌಡರು ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾರ್ಷಿಕ ಮಹಾಸಭೆಯ ಒಂದು ದಿನ ಹಿಂದೆ ಸುದ್ದಿಗೋಷ್ಠಿ ನಡೆಸುವುದು ವಾಡಿಕೆ, ಅದರಂತೆ ಬ್ಯಾಂಕ್ 2023-24 ನೇ ಸಾಲಿನ ಒಟ್ಟು 17.99 ಕೋಟಿ ಲಾಭವಾಗಿದೆ. 10.59 ಕೋಟಿ ನಿವ್ವಳ ಲಾಭಗಳಿಸಿದೆ. ಷೇರು ಬಂಡವಾಳ 138.98 ಕೋಟಿ ರೂ. ಇದ್ದರೆ, 67.46 ಕೋಟಿ ರೂ. ನಿಧಿಗಳು, 233.29 ಕೋಟಿ ದುಡಿಯುವ ಬಂಡವಾಳ ಹೊಂದಲಾಗಿದೆ. 1462.78 ಕೋಟಿರೂ. ಠೇವಣಿ ಸಂಗ್ರಹವಾಗಿದೆ ಎಂದರು.
ಶೂನ್ಯ ಬಡ್ಡಿದರದಲ್ಲಿ ಅಲ್ಪಾವಾಧಿ ಕೃಷಿ ಬೆಳೆ ಸಾಲ ಒಟ್ಟು 104250 ರೈತರಿಗೆ 1010.20 ಕೋಟಿ ಸಾಲ ಹಂಚಿಕೆಯಾಗಿದೆ. ಈ ಪೈಕಿ 3581 ಹೊಸ ರೈತರಿಗೆ ರೂ. 43.04 ಕೋಟಿ ಮತ್ತು ಹೆಚ್ಚುವರಿ ಸಾಲ 6683 ರೈತರಿಗೆ 33.68 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಶೇ.108.96 ರಷ್ಟು ಪ್ರಗತಿಯಾಗಿರುತ್ತದೆ. ಆ.24 ರ ಮಾಹೆಯ ಅಂತ್ಯದವರೆಗೆ 37672 ರೈತರಿಗೆ ಒಟ್ಟು 417.85 ಕೋಟಿ ಸಾಲ ಹಂಚಿಕೆ ಮಾಡಲಾಗಿದೆ. 99.07 ಸಾಲ ವಸೂಲಾತಿಯಾಗಿದೆ ಎಂದರು.
ರೈತರ ಮತ್ತು ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಯೋಜನೆಯ ರೀತ್ಯ ಮೊಬೈಲ್ ವಾಹನದ ಸೌಲಭ್ಯ, ಈ ವಾಹನದಲ್ಲಿ ಎಟಿಎಂ ಅಳವಡಿಸಲಾಗಿದೆ. ಮೊಬೈಲ್ ಆಪ್ ಮೂಲಕ ಪಾಸ್ ಬುಕ್, ಖಾತೆಗಳ ಬ್ಯಾಲೆನ್ಸ್ ಬಗ್ಗೆ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ನಬಾರ್ಡ್ ಕೃಷಿ ವಿರೋಧಿ ಧೋರಣೆ ಕೈಬಿಡಬೇಕು. ಈಗ ಬ್ಯಾಂಕ್ 25 ಕೋಟಿ ಲಾಭಗಳಿಸಿದೆ. ನಬಾರ್ಡ್ ರಿಲ್ಯಾಕ್ಸ್ ಆಗಿದ್ದರೆ ಇಷ್ಟು ಹೊತ್ತಿಗೆ ನಿವ್ವಳ ಲಾಭ 100 ಕೋಟಿ ಮಾಡುತ್ತಿದ್ವಿ. ಪುನರ್ಧನ ಬಿಡುಗಡೆಯ ಲಿಮಿಟ್ ಫಿಕ್ಸ್ ಮಾಡಬೇಕಿತ್ತು. ಇದನ್ನ ಮಾಡಲಿಲ್ಲ. ರೈತರಿಗೆ 4.5% ಗೆ ಕೊಡ್ತೀವಿ ಆದರೆ ನಬಾರ್ಡ್ 8.5% ಗೆ ಸಹಕಾರಿ ಬ್ಯಾಂಕ್ ಗೆ ಕೊಡುತ್ತದೆ. ಇದರಿಂದ ರೈತರಿಗೆ ಉತ್ತೇಜನ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
2024-25 ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಬೆಳೆಸಾಲ ಒಟ್ಟು 120000 ರೈತರಿಗೆ 120 ಕೋಟಿ ಹಾಗೂ 3 ಬಡ್ಡಿ ದರದಲ್ಲಿ 1500 ರೈತರಿಗೆ 80 ಕೋಟಿ ಮಾಧ್ಯಮಾವಧಿ ಕೃಷಿ ಸಾಲ ಹಂಚಿಕೆ ಮಾಡುವ ಯೋಜನೆಯನ್ನ ಹೊಂದಲಾಗಿದೆ. 2100 ಸ್ವ-ಸಹಾಯ ಸಂಘಗಳಿಗೆ 100 ಕೋಟಿ ಸಾಲ ವಿತರಿಸುವ ಗುರಿಹೊಂದಲಾಗಿದೆ ಎಂದರು.
ಪೆಟ್ರೋಲ್ ಬಂಕ್, ಟ್ರಾನ್ಸ್‌ಪೋರ್ಟ್ ಕಂಪನಿ, ಹಾಸ್ಪಿಟಲ್ ಮುಂತಾದ ಉದ್ಯಮಗಳಿಗೆ ಸಾಲ ನೀಡುವ ಮೂಲಕ ಕೃಷಿಯೇತರ ಸಾಲ ನೀಡಲು ಕ್ರಮವಿಡಲಾಗಿದೆ. 1600 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. 2025 ರ ಮಾರ್ಚ್ ಅಂತ್ಯಕ್ಕೆ 25 ಕೋಟಿ ನಿವ್ವಳ ಲಾಭಗಳಿಸುವ ಯೋಜನೆಯನ್ನ ಹೊಂದಲಾಗಿದೆ.
ಸೊರಬದ ಜಡೆ, ಭದ್ರಾವತಿಯ ಕಲ್ಲಿಹಾಳ್ ಶಿಕಾರಿಪುರದ ಸುಣ್ಣದಕೊಪ್ಪದಲ್ಲಿ ನೂತನಶಾಕೆ ಆರಂಭಿಸಲಾಗುವುದು, ಕಾಚಿನಕಟ್ಟೆ, ಗಾಜನೂರು, ನವಲೆ, ಆಯನೂರು, ಹೊಳಲೂರು, ಭದ್ರಾವತಿಯ ಬಾರಂದೂರು, ಆನವೇರಿ, ತೀರ್ಥಹಳ್ಳಿಯ ಮೇಗರವಳ್ಳಿ, ಎಪಿಎಂಸಿ ಯಾರ್ಡ್, ದೇವಂಗಿ ಆರಗ, ಕಟ್ಟೆಹಕ್ಕಲು, ಸಾಗರದಲ್ಲಿ ತ್ಯಾಗರ್ತಿ, ಬ್ಯಾಕೋಡು, ಸೊರಬದ ಕುಪ್ಪಗಡ್ಡೆ, ಚಂದ್ರಗುತ್ತಿ, ಶಿಕಾರಿಪುರದ ಹಿತ್ಲಾ, ಹೊಸನಗರದ ನಿಟ್ಟೂರು ಹಾಗೂ ನಗರದಲ್ಲಿ ನೂತನ ಶಾಖೆ ಆರಂಭಿಸಲಾಗುತ್ತಿದೆ ಎಂದರು.
ನ್ಯಾಯಾಲಯದ ನಿಯಮಕ್ಕೆ ಬದ್ಧ
ನೇಮಕಾತಿ ಹಗರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನ್ಯಾಯಾಲಯದ ತೀರ್ಪಿಗೆ ಅಭ್ಯರ್ಥಿ ಮತ್ತು ನಾವು ಬದ್ಧವಾಗಬೇಕು. ಆದರೆ ಸಾಲ ನೀಡಿ ನೇಮಕಾತಿಯಾಗಿರುವ ಪ್ರಕರಣವೂ ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಬೇಕಿದೆ. ನಕಲಿ ಚಿನ್ನಾಭರಣವನ್ನ ಅಡವಿಟ್ಟು ಸಾಲಪಡೆದ ಪ್ರಕರಣದ ಆರೋಪಿಗಳ ಆಸ್ತಿಗಳನ್ನ ಜಪ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್‌ನ ಸದಸ್ಯರಾದ ಸುಧೀರ್, ಮಹಲಿಂಗಶಾಸ್ತ್ರಿ, ಡಿ.ಆರ್, ನಾಗಭೂಷಣ ಕಲ್ಮನೆ, ಎಸ್ ಕೆ ಮರಿಯಪ್ಪ, ದುಗ್ಗಪ್ಪಗೌಡ, ಚಂದ್ರಶೇಖರ್ ಗೌಡ, ಹನುಮಂತು ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.