Girl in a jacket

ಒಂದೇ ಮಳೆ, ರೈಲ್ವೆ ಟ್ರ್ಯಾಕ್ ಹಾನಿ, ಸೇತುವೆ ಮುಳುಗಡೆ, ಕೋಡಿಬಿದ್ದ ಕೆರೆಹಳ್ಳಗಳು

 


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರ ಭಾಗಗಳಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯ ಅವಾಂತರಗಳ ಬಗ್ಗೆ ಸುದ್ದಿಗಳು ಬರಲಾರಂಭಿಸಿವೆ. ಮಳೆ ರೈತರ ಬೆಳೆ ಹಾನಿಗೆ ಮಾತ್ರ ಕಾರಣವಾಗಿಲ್ಲ ಹಲವು ಸಣ್ಣ ಪುಟ್ಟ ತೊಂದರೆಗಳು, ಸೇತುವೆ ಮುಳುಗಡೆ,  ರೈಲ್ವೆ ಟ್ರಾಕ್ ಗಳು ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಕೋಡಿ ಬಿದ್ದ ಪುರುದಾಳ್ ಡ್ಯಾಂ


ರಾತ್ರಿ ಬಿಡದೆ ಸುರಿದ ಭಾರಿ ಮಳೆಗೆ  ಪುರದಾಳು ಡ್ಯಾಂ ಕೋಡಿಬಿದ್ದಿದೆ. ಮಳೆಯಿಂದಾಗಿ ಎರಡನೇ ಬಾರಿಗೆ  ಬಾರೇಹಳ್ಳ ಚೆಕ್ ಡ್ಯಾಂ ಕೋಡಿ ಬಿದ್ದಿದೆ. ಶಿವಮೊಗ್ಗ ತಾಲೂಕಿನಲ್ಲಿ ಕಳೆದ ರಾತ್ರಿ ನಿರಂತರ ಮಳೆ ಹಿನ್ನೆಲೆಯಲ್ಲಿ ಡ್ಯಾಂ ತುಂಬಿ ಹರಿದಿದೆ. ಸುಮಾರು 2 ಸಾವಿರಕ್ಕೂ ಅಧಿಕ ಎಕರೆ ಜಮೀನಿಗೆ ನೀರಾವರಿ ಒದಗಿಸುವ ಡ್ಯಾಂನಿಂದ ಪುರದಾಳು, ಅನುಪಿನಕಟ್ಟೆ, ಶಾಂತಿಪುರ, ಹನುಮಂತಾಪುರ ಸೇರಿದಂತೆ ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ. ಆದರೆ ನಿನ್ನೆ ರಾತ್ರಿ ಒಂದೇ ದಿನ ಬಿದ್ದ ಮಳೆಗೆ  ಗ್ರಾಮಸ್ಥರು ಭೀತಿಗೊಂಡಿದ್ದಾರೆ.

ರೈಲ್ವೆ ಟ್ರ್ಯಾಕ್ ಹಾನಿ

ಶಿವಮೊಗ್ಗ-ಸಾಗರ ನಡುವಿನ ರೈಲ್ವೆ ಟ್ರ್ಯಾಕ್‌‌ ಕೂರಿಸಲು ಅಳವಡಿಸಿದ ಜಲ್ಲಿಕಲ್ಲುಗಳು ಮಳೆಗೆ ಕೊಚ್ಚಿಕೊಂಡು ಹೋಗಿರುವ ಘಟನೆ ವರದಿಯಾಗಿದೆ. ಕುಂಸಿ-ಅರಸಾಳು ನಡುವಿನ ಸೂಡೂರು ಗೇಟ್ ಬಳಿ ಹಳಿಯ ಕೆಳಗೆ 5-6 ಅಡಿಯ ಜೆಲ್ಲಿಕಲ್ಲು ಮಳೆಗೆ ಕೊಚ್ಚಿ ಹೋಗಿದೆ.

ಇದರಿಂದ ತಾಳಗುಪ್ಪ-ಶಿವಮೊಗ್ಗ-ಬೆಂಗಳೂರು- ಮೈಸೂರು ಇಂಟರ್ ಸಿಟಿ ರೈಲು ತಡವಾಗಿ ಸಂಚರಿಸಿದೆ. ಬೆಳಿಗ್ಗೆ 5-15 ಕ್ಕೆ  ತಾಳಗುಪ್ಪ ಬಿಟ್ಟ ರೈಲು ಆನಂದಪುರಂ ರೈಲ್ವೆ ನಿಲ್ದಾಣ ಸರಿಯಾಗಿ ಸೇರಿದರೂ ಶಿವಮೊಗ್ಗ ತಲುಪುವಲ್ಲಿ 1 ಗಂಟೆ ತಡವಾಗಿ ತಲುಪಿದೆ. ನಂತರ ಟ್ಯಾಕ್ ಸರಿಪಡಿಸಲಾಗಿದೆ.

ಸೇತುವೆ ಮುಳುಗಡೆ


ರಾತ್ರಿ ಸುರಿದ ಧಾರಾಕಾರ ಮಳೆಗೆ ಮುದುವಾಲ ಯಡವಾಲ ದೇವಬಾಳು ತ್ಯಾಜವಳ್ಳಿ ಕೊನಗವಳ್ಳಿ ಯಿಂದ ಹಾರನಹಳ್ಳಿಗೆ ಸಂಪರ್ಕಿಸುವ ಮುಖ್ಯ  ರಸ್ತೆಯ ಸೇತುವೆ  ಮುಳುಗಡೆಯಾಗಿ ಸಾರ್ವಜನಿಕರಿಗೆ ನಡೆದುಕೊಂಡು ಓಡಾಡಲು ಸಹ ಆಗದ ಪರಿಸ್ಥಿತಿ ಉಂಟಾಗಿದೆ.  ಹೀಗೆ ಒಂದೇ ಮಳೆ ಶಿವಮೊಗ್ಗ ಗ್ರಾಮಾಂತರ ಭಾಗದ ಜನರನ್ನ ಭೀತಿ ಪಡಿಸಿದೆ. 

ಆನೆಕಂದಕ, ಗೌಡನಕೆರೆ, ಸೀಗೆಹಳ್ಳ ಭರ್ತಿ, ಬಸವಾಪುರ ಸೇತುವೆ ಹಾನಿ


ಏಕ‌ಏಕಿ‌ ಸುರಿದ ಮಳೆಗೆ ಹಳ್ಳಕೊಳ್ಳ, ನದಿ,‌ ನಾಲೆಗಳು ತುಂಬಿ ಹರಿದಿದ್ದು, ಕೆಲವು ಕಡೆಗಳಲ್ಲಿ ನಾಲೆಗಳು ಹೊಡೆದು  ಕೃಷಿ ಭೂಮಿ‌ ಮೇಲೆ ನೀರು ಹರಿದ ಪರಿಣಾಮ ಕೃಷಿ ಜಮೀನಿನಲ್ಲಿ‌ ಮಣ್ಣು ಸರಿದು ಬೆಳೆ ಅಡಿಯಾಗಿದೆ.

ಶಿವಮೊಗ್ಗ ತಾಲ್ಲೂಕಿನ ಗೌಡನ ಕೆರೆ ಕೋಡಿ ಉಕ್ಕಿ ಹರಿದ ಪರಿಣಾಮ ಕೆಳಭಾಗದ ನಾಲೆಯ ದಂಡೆ ಮೇಲೆ ನೀರು ಉಕ್ಕಿ ಹರಿದಿದೆ. ಕೆಲವು ಕಡೆಗಳಲ್ಲಿ ನಾಲೆಯ ದಂಡೆಗೂ ಹಾನಿಯಾಗಿದೆ. ಜಮೀನಿಗೆ ತೆರಳಲು ಪರದಾಡುವಂತಾಗಿದೆ.

ಇದೇ ತಾಲ್ಲೂಕಿನ‌‌ ಸೀಗೆಹಳ್ಳ ಜಲಾಶಯದ‌ ಕೋಡಿ ಕೂಡ ಉಕ್ಕಿ ಹರಿದ ಪರಿಣಾಮ  ಯರೆಬೀಸು, ಕೂಡಿ, ಆಡಿನಕೊಟ್ಟಿಗೆ ಮೊದಲಾದ ಕಡೆಗಳಲ್ಲಿ ನಾಲೆಗೆ ಹಾನಿಯಾಗಿದ್ದು, ಬೆಳೆ ನಾಶವಾಗಿದೆ.


ಆನೆ ನಿರೋಧಕ ಕಂದಕ ಹಾನಿ

ಯರೆಬೀಸು ಬಳಿಯ ಜಾರಗಟ್ಟು ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತವಾಗುವ ಸಂಭವವಿದೆ. ಸಿರಿಗೆರೆ ವಲಯಾರಣ್ಯ ವ್ಯಾಪ್ತಿಯ ಚಿಲುಮೆಜಡ್ಡು ಬಳಿಯಲ್ಲಿ ‌ನಿರ್ಮಿಸಿದ ಆನೆ ನಿರೋಧಕ ಕಂದಕದ ಮಣ್ಣು ಕೊಚ್ವಿಕೊಂಡು ಹೋಗಿ ರಸ್ತೆ‌ ಮೇಲೆ ಬಿದ್ದ ಪರಿಣಾಮ ಸಂಚಾರಕ್ಕೂ ಅಡಚಣೆಯಾಗಿದೆ.

ಬಸವಾಪುರ ಸೇತುವೆ ಹಾನಿ

ಹೊಸನಗರ ಹಾಗೂ ಶಿವಮೊಗ್ಗ ತಾಲ್ಲೂಕು ಸಂಪರ್ಕಿಸುವ  ಬಸವಾಪುರ ಬಳಿಯ‌‌ ಸೇತುವೆ ಮೇಲೆ ನೀರು ಹರಿದ ಪರಿಣಾಮ‌ ಸಂಚಾರಕ್ಕೂ ಅಡಚಣೆಯಾಗಿತ್ತು. ಶೆಟ್ಟಿಕೆರೆ ಕೆರೆ ಕೋಡಿ‌ ಹರಿದು ಬೆಳೆ ಹಾನಿಯಾಗಿದೆ.ಆಯನೂರು, ಕುಂಸಿ,‌ಚೋರಡಿ ಮೊದಲಾದ ಕಡೆಗಳಲ್ಲಿ ವ್ಯಾಪಕ ಮಳೆ ಸುರಿದು ಹಾನಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close