ಸುದ್ದಿಲೈವ್/ಶಿವಮೊಗ್ಗ,ಅ.21
ಡಿ.31ರೊಳಗೆ ಶಿವಮೊಗ್ಗ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಎಲ್ಲಾ ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಇಂದು ನಗರದ ಮಂಡ್ಲಿಯಲ್ಲಿರುವ ಕೃಷ್ಣರಾಜೇಂದ್ರ ವಾಟರ್ ಪಂಪ್ ಹೌಸ್‌ಗೆ ತೆರಳಿ ನೀರು ಶುದ್ಧೀಕರಣ ಘಟಕದ ಎಲ್ಲಾ ವಿಭಾಗಗಳಿಗೆ ಭೇಟಿ ಕೊಟ್ಟ ನಂತರ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಶಾಸಕ ಹಲವು ಖಡಕ್ ಸೂಚನೆ ನೀಡಿದರು.
ಇತ್ತೀಚಿಗೆ ವಿಪರೀತ ಮಳೆಯಿಂದಾಗಿ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಕಲುಷಿತ ನೀರು ಸರಬರಾಜು ಆಗಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡ ಅವಿರತ ಶ್ರಮ ಪಟ್ಟು ಕೆಲಸ ಮಾಡುತ್ತಿದೆ. ಅನೇಕ ಲೋಪದೋಷಗಳಿವೆ. ಕೆಲವು ಅಧಿಕಾರಿಗಳ ಬೇಜವಬ್ದಾರಿ ವರ್ತನೆಗೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಈ ರೀತಿಯ ಘಟನೆ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.
ಕರ್ನಾಟಕ ನಗರ ನೀರು ಸರಬರಾಜು ಮಂಡಳಿಗೆ ನಗರಕ್ಕೆ ನೀರು ಸರಬರಾಜು ಮಾಡುವ ಸಂಪೂರ್ಣ ಜವಬ್ದಾರಿ ಇದ್ದು, ಅವರಿಗೆ ಸಹಕಾರವಾಗಿ ಪಾಲಿಕೆಯಿಂದ 106 ವಿವಿಧ ಹಂತದ ಸಿಬ್ಬಂದಿಗಳನ್ನು ನೀಡಲಾಗಿದೆ. ಆದರೂ ಶುದ್ಧಿಕರಣ ಘಟಕದಲ್ಲಿ ಸುಸಜ್ಜಿತ ಲ್ಯಾಬ್ ಇಲ್ಲ, ಸಲಕರಣೆ ಇಲ್ಲ, ನುರಿತ ತಜ್ಞರು ಇಲ್ಲ, ಮತ್ತು ಮೂರು ಹಂತದ ಟೆಸ್ಟಿಂಗ್ ಮಾಡಬೇಕಾಗಿದ್ದು, ಅದರ ಕೊರತೆ ಇದೆ ಎಂಬ ದೂರುಯಿತ್ತು. ಈಗ ಸಧ್ಯಕ್ಕೆ ಪಿಸಿಕಲ್ ಮತ್ತು ಕೆಮಿಕಲ್ ಟೆಸ್ಟ್ ಇಲ್ಲಿ ನಡೆಯುತ್ತಿದೆ. ಬಯೋಲಾಜಿಕಲ್ ಟೆಸ್ಟ್ ಮೆಗ್ಗಾನ್ ಮತ್ತು ಗ್ರಾಮಾಂತರ ನೀರು ಸರಬರಾಜು ಕೇಂದ್ರದ ಲ್ಯಾಬ್‌ನಲ್ಲಿ ನಡೆಸಲಾಗುತ್ತಿದ್ದು, ಪ್ರಸ್ತುತ ಶುದ್ಧೀಕರಣ ಘಟಕದಲ್ಲಿ ತಜ್ಞರ ಕೊರತೆಯನ್ನು ಮತ್ತು ಲ್ಯಾಬ್‌ಗೆ ಸಂಬAಧಿಸಿದ ಎಲ್ಲಾ ನ್ಯೂನತೆಗಳನ್ನು ಡಿ.31ರೊಳಗೆ ಸರಿಪಡಿಸುವುದಾಗಿ ಜಲಮಂಡಳಿ ಒಪ್ಪಿಕೊಂಡಿದೆ ಎಂದರು.
ಕೆಟ್ಟು ಹೋದ ಎರಡು ಮೋಟರ್‌ಗಳನ್ನು ಮೂರು ದಿನಗಳಲ್ಲಿ ಬದಲಾಯಿಸಲಾಗುವುದು ಇನ್ನು ಗುಣಮಟ್ಟದ ನೀರು ನಾಗರಿಕರಿಗೆ ಕೊಡಬಹುದು. ಪಿಎಸ್‌ವಿ ಪೌಂಡರ್‌ನ್ನು 250ಕ್ಕಿಂತ ಜಾಸ್ತಿ ಟರ್ಬಿಸಿಟಿ ಇದ್ದರೆ ಬಳಸುತ್ತಿದ್ದು, 400ಕ್ಕಿಂತ ಹೆಚ್ಚು ಟರ್ಬಿಸಿಟಿ ಇದ್ದರೆ ಅಲಂನ್ನು ಬಳಸಲಾಗುವುದು. ತಜ್ಞರು ಮತ್ತು ಅಧಿಕಾರಿಗಳ ಕೊರತೆಯನ್ನು ಕೂಡ ನೀಗಿಸಲಾಗುವುದು. ನಾನೇ ಸ್ವತಃ ಇಂದು ಕೇಂದ್ರಕ್ಕೆ ಬಂದು ಪರಿಶೀಲನೆ ಮಾಡಿ ನೀರು ಸೇವಿಸಿದ್ದೇನೆ. ನಾಗರಿಕರು ಆತಂಕ ಪಡುವುದು ಬೇಡ ಎಂದರು.
ನವಂಬರ್ ಅಂತ್ಯದೊಳಗೆ 52 ವಿಭಾಗಗಳಿಗೆ 24×7 ಶುದ್ಧ ನೀರು ಸರಬರಾಜು ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದ ಅವರು ಇವತ್ತಿನ ಪರಿಶೀಲನೆ ವೇಳೆಯಲ್ಲಿ ಕರ್ತವ್ಯ ಲೋಪ ಮಾಡಿದ ಓರ್ವ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚಿಸಿದ್ದೇನೆ. ಹಾಗೂ ಎಲ್ಲಾ ವಿವರ ಪಡೆದು ಲೋಪ ಸರಿಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದು ಮುಂದಿನ ದಿನಗಳಲ್ಲಿ ನಗರದ ಶುದ್ಧ ಕುಡಿಯುವ ನೀರಿನಲ್ಲಿ ದೋಷ ಕಂಡುಬಂದರೆ ಅದಕ್ಕೆ ಜಲಮಂಡಳಿಯ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಯುಕ್ತರಾದ ಕವಿತಾ ಯೋಗಪ್ಪನವರ್, ಜಲಮಂಡಳಿಯ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ಎ.ಡಬ್ಲೂಇ ಮಿಥುನ್‌ಕುಮಾರ್, ಸೂಡಾ ಮಾಜಿ ಅಧ್ಯಕ್ಷರಾದ ಜ್ಞಾನೇಶ್ವರ್, ನಾಗರಾಜ್, ಪಾಲಿಕೆ ಮತ್ತು ಜಲಮಂಡಳಿಯ ಪ್ರಮುಖ ಅಧಿಕಾರಿಗಳು ಇದ್ದರು.