ಸುದ್ದಿಲೈವ್/ಶಿವಮೊಗ್ಗ
ಶೆಟ್ಟಿಹಳ್ಳಿ ಸುತ್ತಲ ಗ್ರಾಮಗಳಾದ ಪುರದಾಳ, ಗುಡ್ಡದ ಅರಕೆರೆ, ಆಲದೇವರ ಹೊಸೂರು ಗ್ರಾಮಗಳಲ್ಲಿ ಕಾಡಾನೆ ಹಿಂಡು ಪ್ರತಿ ದಿನ ಬೆಳೆ ನಾಶ ಮಾಡುತ್ತಿವೆ. ಭತ್ತ, ಬಾಳೆ ನೆಲಕ್ಕೆ ಹಾಸಿದೆ. ಅಡಕೆ ಮರಗಳು ಧರೆಗೊರಗಿವೆ. ಸಂಜೆಯಾಗುತ್ತಿದ್ದಂತೆ ಹೊಲಕ್ಕೆ ಧಾವಿಸುವ ಆನೆಗಳು ಬೆಳಗಾಗುತ್ತಿದ್ದಂತೆ ಕಾಡು ಸೇರಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿವೆ. ಈಗಾಗಲೇ ಸಕ್ರೆಬೈಲು ಆನೆಬಿಡಾರದಿಂದ ಮೂರು ಆನೆಗಳನ್ನ ನಿಯೋಜಿಸಲಾಗಿದ್ದು ಆನೆ ಓಡಿಸುವ ಕಾರ್ಯ ಸಾಗಿದೆ ಆದರೆ ಆನೆಗಳು ಮಾತ್ರ ಹೊಲ ಬಿಟ್ಟು ಕದಲುತ್ತಿಲ್ಲ.
ಸೋಮವಾರ ಮಧ್ಯಾಹ್ನ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಸ್ಥಳಕ್ಕೆ ಭೇಟಿ ನೀಡಿ ರೈತರನ್ನ ಮಾತನಾಡಿಸಿದರು. ಈ ವೇಳೆ ಕೆಲವು ರೈತರು ಬೇಲಿಗೆ ವಿದ್ಯುತ್ ಹರಿಸುತ್ತಿರುವುದೂ ಕಂಡು ಬಂತು. ಹಲವೆಡೆ ಆನೆಗಳು ದಾಟದಂತೆ ತಡೆಗೆ ತೋಡಿದ ಕಂದಕಗಳನ್ನ ಮುಚ್ಚಿ ಹೊಲಕ್ಕೆ ದಾರಿ ಮಾಡಿಕೊಂಡಿರುವುದು ಡಿಸಿಎಫ್ ಗಮನಕ್ಕೆ ಬಂದಿತು. ರೈತರ ಸಮಸ್ಯೆಗಳ ಆಲಿಸಿದ ಅಧಿಕಾರಿಗಳು ಆನೆ ಓಡಿಸುವ ಕಾರ್ಯಕ್ಕೆ ಸಹಕಾರ ಕೋರಿದರು. ಜೊತೆಗೆ ವಿದ್ಯುತ್ ಸಂಪರ್ಕ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.
ಆರು ತಿಂಗಳಿಂದ ಗಿರಕಿ ಹೊಡೆಯುತ್ತಿರು ಆನೆಗಳ ಇರುವಿಕೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದರೂ ಸಹ, ಸರಹದ್ದಿನೊಳಗಿವೆ ಎಂದು ಸುಮ್ಮನಾಗುತ್ತಾರೆ. ರಾತ್ರಿಯೆಲ್ಲಾ ಗರ್ನಾಲ್, ಪಟಾಕಿ ಹೊಡೆದು ಓಡಿಸಲು ಪ್ರಯತ್ನ ಪಡುತ್ತಾರೆ. ಡಿಸೆಂಬರ್ ಕಳೆದರೆ ವಾಪಸ್ ಭದ್ರಾ ಅಭಯಾರಣ್ಯದೆಡೆ ಹೋಗಲಿವೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಇವೆಲ್ಲದರ ಮಧ್ಯೆ ಒಕ್ಕಲು ಸಮಯದೊಳಗೆ ಆನೆಗಳು ಬೆಳೆ ಬರಿದು ಮಾಡುವ ಲಕ್ಷಣಗಳು ಕಾಣುತ್ತಿವೆ.