ಸುದ್ದಿಲೈವ್/ಶಿವಮೊಗ್ಗ
ಟ್ಯಾಕ್ಸಿ ಮಾಲೀಕರ ಸಂಘ, ಶಿವಮೊಗ್ಗ ಪ್ರವಾಸಿ ಮ್ಯಾಕ್ಸಿ ಕ್ಯಾಬ್ ಮಾಲೀಕರ ಮತ್ತು ಚಾಲಕರ ಸಂಘದ ಆಶ್ರದಲ್ಲಿ ಇಂದು ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ಪಕ್ಕದಲ್ಲಿರುವ ಆರ್ ಟಿ ಒ ಕಚೇರಿಯಲ್ಲಿ ತಮ್ಮವಾಹನಗಳನ್ನ ತಂದು ಪ್ರತಿಭಟನೆ ನಡೆಸಲಾಯಿತು.
ತಮ್ಮ ವಾಹನಗಳಿಗೆ ಪ್ಯಾನಿಕ್ ಬಟನ್, ರೆಟ್ರೋ ರಿಫ್ಲಟಕ್ಟರ್ ಟೇಪ್, ಜಿಪಿಎಸ್ ಅಳವಡಿಕೆಯನ್ನ ವಿರೋಧಿಸಿ ಸಾರಿಗೆ ಜಂಟಿ ಆಯುಕ್ತ ಭೀಮನಗೌಡ ಪಾಟೀಲ್ ಗೆ ಮನವಿ ಸಲ್ಲಿಸಿತು. ವಾಹನಗಳಿಗೆ ಪ್ಯಾನಿಕ್ ಬಟನ್, ರೆಟ್ರೋ ರಿಫ್ಲಟಕ್ಟರ್ ಟೇಪ್, ಜಿಪಿಎಸ್ ಅಳವಡಿಕೆ ಮಾಡದಿದ್ದರೆ ಎಫ್ ಸಿ ಆಗುತ್ತಿಲ್ಲ. ಇವುಗಳನ್ನ ಸರ್ಕಾರ ನಿಗದಿ ಪಡಿಸಿದ ಏಜೆನ್ಸಿಗಳ ಬಳಿಯೇ ಖರೀದಿಸಬೇಕೆಂಬ ನಿಯಮ ಟಾಕ್ಸಿ, ಟಿಟಿ, ಚಾಲಕರನ್ನ ಮತ್ತು ಮಾಲೀಕರನ್ನ ಕಂಗೆಡಿಸಿದೆ.
ಇದರ ಜೊತೆಗೆ ಎಲ್ಲೋ ಬೋರ್ಡ್ ಕಾರುಗಳಿಗೆ ಎಲ್ ಇಡಿ ಬಲ್ಬ್ ಅಳವಡಿಸುವಂತಿಲ್ಲ. ಅಳವಡಿಸಿದರೆ ಸಾವಿರಾರು ರೂ. ದಂಡ ವಿಧಿಸಲಾಗುತ್ತಿದೆ. ಅದೇ ವೈಟ್ ಬೋರ್ಡ್ ಕಾರುಗಳಿಗೆ ಈ ನಿಯಮಗಳು ಅನ್ವಯವಾಗುತ್ತಿಲ್ಲವೇಕೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಬಗ್ಗೆ ಮನವಿ ಸ್ವೀಕರಿಸಿದ ಸಾರಿಗೆ ಜಂಟಿ ಆಯುಕ್ತ ಭೀಮನಗೌಡ ಪಾಟೀಲ್ ಈ ನಿಯಮಗಳನ್ನ ಸರ್ಕಾರದ ಗಮನಕ್ಕೆ ತರುತ್ತೇನೆ. ಸರ್ಕಾರ ಮುಂದಿನ ಆದೇಶ ಏನು ಬರಲಿದೆ ಅದನ್ನ ಅನುಸರಿಸಲಾಗುವುದು. ಅಲ್ಲಿಯವರೆಗೂ ಯಾವ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದರು.
ಆರ್ ಟಿ ಒದಲ್ಲಿ ಭ್ರಷ್ಠಾಚಾರದ ಆರೋಪ
ಮನವಿ ಮಾಡಿರುವ ಸಂಘಟನೆಗಳು ಕಚೇರಿಯಲ್ಲಿ ಭ್ರಷ್ಠಾಚಾರ ವಿಕೋಪಕ್ಕೆ ಹೋಗಿದೆ. ಇದನ್ನಾದರೂ ನಿಯಂತ್ರಿಸಿ ಎಂದು ಜಂಟಿ ಆಯುಕ್ತರು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿರುವ ಜಂಟಿ ಆಯುಕ್ತರು ಕೆಲ ಕೆಲಸಗಳಿಗೆ ಕಚೇರಿಗೆ ಬರುವ ಅಗತ್ಯವಿಲ್ಲ. ಆನ್ ಲೈನ್ ನಲ್ಲಿ ಪರಿವಾಹನ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರೇ ಮದ್ಯವರ್ತಿಗಳನ್ನ ಸಂಪರ್ಕಿಸದೆ ನೇರವಾಗಿ ಅಧಿಕಾರಿಗಳನ್ನ ಸಂಪರ್ಕಿಸಿ ಕೆಲಸ ಮುಗಿಸಿಕೊಳ್ಳುವಂತೆ ಸೂಚಿಸಿದರು.
ಆಯುಕ್ತರ ಈ ಮಾತು ನಗೆ ತರಿಸಿದೆ. ಆರ್ ಟಿ ಒ ಕಚೇರಿಯಲ್ಲಿ ಮೂರನೇ ವ್ಯಕ್ತಿ ಸರ್ಕಾರಿ ನೌಕರರ ಪಾಸ್ ವರ್ಡ್ ನಲ್ಲಿ ಲಾಗ್ ಇನ್ ಆಗಿರುವ ಉದಾಹರಣೆಗಳಿವೆ. ಕಚೇರಿ ಮತ್ತು ಅರಣ್ಯ ಇಲಾಖೆಯ ಪಕ್ಕದಲ್ಲಿ ಮದ್ಯವರ್ತಿಗಳ ಹಾವಳಿಗಳು ಅಧಿಕಾರಿಗಳ ಕಣ್ಣಿಗೆ ಕಾಣದೆ ಇರುವುದು. ಸಂಜೆಯ ನಂತರ ಬಟವಾಡೆ ಆಗದೆ ಇರುವುದು ಗಮನಕ್ಕೆ ಬಾರದೆ ಇರುವುದು ದುರಂತ ಸಹ ಹೌದು.
ಮನವಿ ನೀಡುವ ಸಂದರ್ಭದಲ್ಲಿ ಟ್ಯಾಕ್ಸಿ ಮಾಲೀಕರ ಸಂಘದ ಕಾರ್ಯದರ್ಶಿ ರಾಘವೇಂದ್ರ ಶಿವಮೊಗ್ಗ ಪ್ರವಾಸಿ ಮ್ಯಾಕ್ಸಿ ಕ್ಯಾಬ್ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಕೋದಂಡ ಮೊದಲಾದವರು ಭಾಗಿಯಾಗಿದ್ದರು.