ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಗ್ರಾಮಾಂತರ ಭಾಗದಲ್ಲಿ ಕಾಡಾನೆಯ ಸಾವೊಂದು ತಲ್ಲಣಗೊಳಿಸಿದೆ. ಕಾಡಾನೆಯ ಸಾವು ಕಾಣುತ್ತಿದ್ದಂತೆ ರೈತರ ನಿದ್ದೆಗೆಡೆಸಿದ್ದ ಕಾಡಾನೆಗಳ ಡ್ರೈವ್ ಆಪರೇಷನ್ ಸಹ ಸ್ಥಗಿತಗೊಂಡಂತೆ ಕಂಡು ಬಂದಿದೆ. ಮೂರು ದಿನಗಳ ಅಂತರದಲ್ಲಿ ಆನೆ ಡ್ರೈವ್ ಆಪರೇಷನ್ ಮುಗಿಸಿರುವುದು ಇಲಾಖೆಯ ವೈಫಲ್ಯವನ್ನ ಎತ್ತಿಹಿಡಿದಿದೆ.
ಒಂದು ವಾರದಲ್ಲಿ ಈ ಪ್ರದೇಶದಲ್ಲಿ ಒಟ್ಟು ಕಾಡಾನೆಗಳ ಸಂಖ್ಯೆಯನ್ನು ಇಲಾಖೆ ಗುರುತಿಸದಿದ್ದರೆ ನಾವು ಇನ್ನೊಂದು ಕಾಡಾನೆ ಕಳೆದುಕೊಳ್ಳುವ ಅಪಾಯದಲ್ಲಿದ್ದೇವೆ ಎಂದರೆ ತಪ್ಪಾಗಲಾರದು.
ಪುರುದಾಳು, ಸಿರಿಗೆರೆ, ಗುಡ್ಡದ ಅರಕೆರೆ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾದ ಪರಿಣಾಮ ಸಕ್ರೇಬೈಲಿನಿಂದ ಸರಿ ಸುಮಾರು ಒಂದು ವಾರದ ಹಿಂದೆ ಸಕ್ರೇಬೈಲಿನಿಂದ ಆಲೆ, ಬಹದ್ದೂರು ಮತ್ತು ಸೋಮಣ್ಣ ಎಂಬ ಮೂರು ಆನೆಗಳನ್ನ ತಂದು ಕಾಡಾನೆಗಳನ್ನ ಬೇರೆಡೆ ಓಡಿಸುವ ಕಾರ್ಯಾಚರಣೆ ಆರಂಭಗೊಂಡಿತ್ತು.
ಮೂರು ಸಕ್ರೆಬೈಲಿನ ಆನೆಗಳು ಮೂರುದಿನ ಕಾರ್ಯಾಚರಣೆ ನಡೆಸಿದ್ದು ಈ ಮದ್ಯೆ ವೀರಗಾರನ ಬೈರನ ಕೊಪ್ಪದದ ಕಂದಕದಲ್ಲಿ ಬಿದ್ದ ಕಾಡಾನೆಯೊಂದು ಮೃತ ಪಟ್ಟ ಬೆನ್ನಲ್ಲೇ ಈ ಡ್ರೈವ್ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಮೊದಲು ಈ ಭಾಗದಲ್ಲಿ ಕಾಡಾನೆಗಳು ಎಷ್ಟಿವೆ ಎಂಬ ಮಾಹಿತಿ ಅರಣ್ಯ ಇಲಾಖೆಯಲ್ಲೇ ಬಹುಶಃ ಇಲ್ಲದಂತೆ ಕಂಡು ಬರುತ್ತಿದೆ. ಆನೆಗಳ ಸಂಖ್ಯೆಯ ಮಾಹಿತಿ ಇಲ್ಲದೆ ಡ್ರೈವ್ ಕಾರ್ಯಾಚರಣೆಗೆ ಕೈಹಾಕಿರುವುದು ಮೊದಲನೇ ತಪ್ಪು ಎಂಬುದು ಸ್ಥಳೀಯರ ಆರೋಪವಾಗಿದೆ.
ಮೂರು ದಿನ ಮಾತ್ರ ಡ್ರೈವ್ ಕಾರ್ಯಾಚರಣೆಯನ್ನ ಆರ್‌ಎಫ್‌ಒ ವಿನಯ್ ನಡೆಸಿ ಸ್ಥಗಿತಗೊಳಿಸಿರುವುದು ಪರಿಣಾಮಕಾರಿಯಾದ ಡ್ರೈಲ್ ಅಲ್ಲ ಎಂಬ ಆರೋಪಕ್ಕೆ ಗುರಿಯಾಗಿದೆ. ಮೂರು ದಿನಗಳಲ್ಲಿ ಚಾಲನಾ ಕಾರ್ಯಾಚರಣೆ ಮುಗಿಸಿ ಮೂರು ಆನೆಗಳನ್ನು ಮತ್ತೆ ಸಕ್ರೆಬೈಲು ಆನೆ ಶಿಬಿರಕ್ಕೆ ಕಳುಹಿಸಲಾಗಿದೆ. ಒಂದು ಡ್ರೈವ್ ಕಾರ್ಯಾಚರಣೆ ಕನಿಷ್ಠ 15 ದಿನಗಳ ವರೆಗೆ ಕಾರ್ಯಾಚರಣೆಯನ್ನ ನಡೆಸಬೇಕಿತ್ತು. ಆದರೆ ಡ್ರೈವ್ ಮೂರೇ ದಿನಕ್ಕೆ ಮುಗಿಸಿರುವುದು ಈ ಎಲ್ಲಾ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಮತ್ತು ಈ ಡ್ರೈವ್ ಗೆ ಕನಿಷ್ಠ 20 ಜನ ಅರಣ್ಯ ಸಿಬ್ಬಂದಿಯೊಂದಿಗೆ ಮಾಡಬೇಕು ಎಂಬ ನಿಯಮವಿದ್ದರೂ ಕಡಿಮೆ ಜನರನ್ನ ಇಟ್ಟುಕೊಂಡು ಡ್ರೈವ್ ನಡೆಸಿರುವ ಆರೋಪವೂ ಕೇಳಿ ಬಂದಿರುವುದರಿಂದ ಇದೊಂದು ಕಾಟಾಚಾರದ ಡ್ರೈವ್ ಇರಬಹುದು ಎಂಬ ಶಂಕೆಗೆ ಗುರಿಯಾಗಿದೆ. ಮಾಹಿತಿ ಪ್ರಕಾರ ಪುರದಾಳು ಮತ್ತು ಶೆಟ್ಟಿಹಳ್ಳಿ ನಡುವಿನ ಪ್ರದೇಶದಲ್ಲಿ ಕನಿಷ್ಠ 15 ರಿಂದ 20 ಕಾಡಾನೆಗಳಿವೆ ಎಂಬ ಮಾಹಿತಿ ಇದೆ.
ಆದರೆ ಡ್ರೈವ್ ನಡೆಸಿದ ವೇಳೆ ಆನೆಗಳ ಸಂಖ್ಯೆಯನ್ನ ಗುರುತಿಸಿ ಡ್ರೈವ್ ನಡೆಸದೆ ಇರುವುದು ವೈಫ್ಯಲ್ಯತೆಯ ಮೊದಲ ಹೆಜ್ಜೆಯಾಗಿದೆ. ಈ ಡ್ರೈವ್ ಈ ಪ್ರದೇಶದ ಕಾಡಿನಲ್ಲಿ ಕಾಡಾನೆಗಳ ಚಲನವಲನವನ್ನು ಸುಲಭವಾಗಿ ಪತ್ತೆಹಚ್ಚಲು ಏನು ಕ್ರಮಕೈಗೊಳ್ಳಲಾಗಿದೆ ಎಂಬುದರ ಬಗ್ಗೆಯೇ ಇಲಾಖೆಯಲ್ಲಿ ಮಾಹಿತಿ ನಿಖರವಾಗಿಲ್ಲ ಎಂಬ ಅನುಮಾನವೂ ಮೂಡಿದೆ.
ಕಾಫಿ ಎಸ್ಟೇಟ್ ಗಳಲ್ಲಿ ಕಾಡಾನೆಗಳ ಪತ್ತೆಗೆ ಡ್ರೋನ್ ಬಳಸುವ ಸಾಧ್ಯತೆ ಇದೆ. ಆದರೆ ಈ ಮಲೆನಾಡಿನಲ್ಲಿ ಈ ಕಾಡು ಆನೆಗಳನ್ನು ಪತ್ತೆಹಚ್ಚಲು ಡ್ರೋನ್ ಬಳಸಲು ಸಾಧ್ಯವೇ ಇಲ್ಲ ಎನ್ಬತ್ತಾರೆ ತಜ್ಞರು. ಇದರಿಂದ ಸಿಬ್ಬಂದಿಯ ಹಣ ಮತ್ತು ಸಮಯದ ಸಂಪೂರ್ಣ ವೇಸ್ಟ್ ಎಂದು ಹೇಳಲಾಗುತ್ತದೆ.
ಮೊದಲು ಕಾಡಾನೆಗಳ ಚಲನವಲನ ಕಂಡು ಹಿಡಿದು ಆಮೇಲೆ ಚಾಲನಾ ಕಾರ್ಯಾಚರಣೆಯಲ್ಲಿ ಇಲಾಖೆ ತೊಡಗಿಸಿಕೊಳ್ಳದೆ ಏಕಾಏಕಿ ಕಾರ್ಯಾಚರಣೆಗೆ ಇಳಿದಿರುವುದು ಕಾರ್ಯಾಚರಣೆಯ ವೈಫಲ್ಯಕ್ಕೆ ಎರನೇ ಹೆಜ್ಜೆಯಾಗಿದೆ ಎನ್ನಬಹುದು.
ಮೊದಲು ಇಲಾಖೆ ಕಳೆದ 6 ತಿಂಗಳಿಂದ ಕಾರ್ಯಾಚರಣೆ ನಡೆಸಿದ್ದರೆ ಈ ವೇಳೆಗೆ ಕನಿಷ್ಠ ಮೂರ್ನಾಲ್ಕು ಕಾಡಾನೆಗಳನ್ನು ಸೆರೆ ಹಿಡಿಯಬಹುದಿತ್ತು. ಜೊತೆಗೆ ಕಾಡಾನೆಗಳನ್ನ ಪ್ರಾಣ ಹಾನಿ ಇಲ್ಲದೆ ಒಂದೆಡೆಗೆ ಸಾಗಿಸಬಹುದಿತ್ತು. ಆದರೆ ಇಲಾಖೆ ಈ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ವೈಫಲ್ಯಕ್ಕೆ ಮಗದೊಂದು ಹೆಜ್ಜೆಯ ಗುರುತಾಗಿ ಉಳಿದಿದೆ.
ರೈತರ ಸಮಸ್ಯೆಯನ್ನ ಬಗೆಹರಿಸಲು ಮುಂದಾಗಿದ್ದ ಅರಣ್ಯ ಇಲಾಖೆ ಮತ್ತೊಂದು ಸಮಸ್ಯೆಯನ್ನ ಸುತ್ತಿಕೊಂಡಂತೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಾದರೂ ಇಲಾಖೆ ಸರಿಪಡಿಸಿಕೊಳ್ಳುವ ನಿರೀಕ್ಷೆಯೊಂದಿಗೆ ಈ ಸುದ್ದಿಗೆ ವಿರಾಮ ಇಡಲಾಗುತ್ತಿದೆ.