Girl in a jacket

ಬಂಜಾರ ಸಮುದಾಯದ ವಿಶಿಷ್ಟ ದೀಪಾವಳಿ


ಸುದ್ದಿಲೈವ್/ಶಿವಮೊಗ್ಗ  

ನಗರದ ಗಾಡಿಕೊಪ್ಪ ತಾಂಡದಲ್ಲಿ ಬಂಜಾರ ಸಮುದಾಯದಿಂದ ವಿಶಿಷ್ಟ ಹಾಗೂ ವಿಭಿನ್ನವಾಗಿ ಲಂಬಾಣಿ ಯುವತಿಯರು ಉಡುಗೆಗಳನ್ನು ತೊಡುವ ಮೂಲಕ ದೀಪಾವಳಿ ಹಬ್ಬ ಆಚರಣೆ ನಡೆಸಲಾಯಿತು.‌

ಆಧುನಿಕತೆಗೆ ಸಿಲುಕಿ ಬದಲಾದ ಜೀವನಶೈಲಿಯಲ್ಲಿ ಲಂಬಾಣಿ ಸಮುದಾಯದವರು ಮಾತ್ರ ಮೂಲ ಸಂಪ್ರದಾಯ ಬಿಟ್ಟುಕೊಟ್ಟಿಲ್ಲ. ಬೆಳಕಿನ ಹಬ್ಬ ದೀಪಾವಳಿ ಅವರ ಪಾಲಿಗೆ ಸಂಬಂಧಗಳನ್ನು ಬೆಸೆಯಲು ವೇದಿಕೆಯಾಗಿದೆ. ದೀಪಾವಳಿ ಹಬ್ಬ ಅಂದ್ರೆ ಬಂಜಾರ ಸಮುದಾಯಕ್ಕೆ ಎಲ್ಲಿಲ್ಲದ ಸಂಭ್ರಮ.. ಯುವತಿಯರು ಲಂಬಾಣಿ ಉಡುಗೆಗಳನ್ನು ತೊಟ್ಟು ಮನೆ‌ ಮನೆಗೆ ತೆರಳಿ ದೀಪ ಬೆಳಗುವುದು ಪದ್ದತಿ. ಈ ಪದ್ದತಿಯನ್ನು ಬಂಜಾರ ಸಮುದಾಯದ ಜನ ಅನಾದಿ ಕಾಲದಿಂದಲೂ ಅಚರಿಸಿಕೊಂಡು ಬಂದಿದ್ದಾರೆ.

ಲಂಬಾಣಿ ಸಮುದಾಯದ ಉಡುಗೆಗಳನ್ನು ತೊಟ್ಟು ಹೆಜ್ಜೆ ಹಾಕುವ ಬಾಲೆಯರು, ಸಾಂಪ್ರದಾಯಿಕವಾಗಿ ಬಂಜಾರ ಸಮುದಾಯದ ದೇವರಿಗೆ ಪೂಜೆ ಸಲ್ಲಿಸಿ ಸಂಭ್ರಮಿಸುತ್ತಾರೆ.

ಬಂಜಾರ ಸಮಾಜದ ನಂಬಿಕೆಯಂತೆ ಗಾಡಿ ಕೊಪ್ಪ ತಾಂಡದಲ್ಲಿ  ಯುವತಿಯರು ಹೂಗಳನ್ನು ತಂದು ಸಮಾಜದ ಎಲ್ಲ ಮಹಿಳೆಯರು ಒಂದೆಡೆ ಸೇರಿ ನೃತ್ಯ ಮಾಡಿದರು. ಇದರಿಂದ ಲಕ್ಷ್ಮಿ ಕಟಾಕ್ಷ್ಯವಾಗುವ ನಂಬಿಕೆಯಿದೆ. ಆ ನಂಬಿಕೆಯಂತೆ ಮಹಿಳೆಯರು ಲಂಬಾಣಿ ಜನಾಂಗದ ಉಡುಗೆ - ತೊಡುಗೆಗಳನ್ನು ತೊಟ್ಟು ನೃತ್ಯ ಮಾಡಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.

ಬಂಜಾರರು ಆಚರಿಸುವ ‘ದವಾಳಿ’ ಹಬ್ಬವು ಪ್ರಕೃತಿಯ ಆರಾಧನೆ, ಹಿರಿಯರ ಸ್ಮರಣೆ, ಪರಸ್ಪರ ಹಂಚಿ ತಿನ್ನುವ ಗುಣ, ಸಕಲರಿಗೂ ಲೇಸು ಬಯಸುವ ಕಾರಣದಿಂದಾಗಿ ವಿಭಿನ್ನವಾಗಿ ಕಾಣುತ್ತದೆ.ಪ್ರಕೃತಿ ಜತೆಗಿನ ಪ್ರೀತಿ, ಹಿರಿಯರ ಸ್ಮರಣೆ, ಪರಸ್ಪರ ಹಂಚಿ ತಿನ್ನುವ ಪ್ರವೃತ್ತಿ ಈ ಹಬ್ಬದಲ್ಲಿ ಕಾಣಬಹುದಾಗಿದೆ. 

ಜಾನುವಾರುಗಳೆಡೆಗಿನ ಪ್ರೇಮ ಹಾಗೂ ಸಕಲರಿಗೂ ಲೇಸು ಬಯಸುವ ಗುಣ ಇವರು ಆಚರಿಸುವ ದವಾಳಿಯ ವಿಶೇಷ. ಕಾಳಿ ಆಮಾಸ್, ನಸಾಬ್, ಧಬುಕಾರ್, ಮೇರಾ, ಫೂಲ್ ತೋಡನ್, ಗೊದಣೋ, ಸಳೋಯಿ ಸೇವನೆ ಲಂಬಾಣಿಗರ ದವಾಳಿಯ ವಿಶಿಷ್ಟ ಆಚರಣೆಗಳು. 

ತಾಂಡವನ್ನು ರಕ್ಷಿಸುವ ಶ್ರೀ ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವರಿಗೆ ಕಾಡಿನಿಂದ ತಂದ ಹೂಗಳನ್ನು  ಅರ್ಪಿಸಿ  ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ ನಂತರ  ಪ್ರತಿ ಮನೆಗೆ ತೆರಳಿ ಗೋದಾಣೋ (ಸಗಣಿಯ ಉಂಡೆ ) ಮಾಡಿ ಮುಖ್ಯ ಬಾಗಿಲ ಬಳಿ ಹೂ ಇಟ್ಟು ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು.


ಅದೇ ರೀತಿ ಮಲವಗೊಪ್ಪದಲ್ಲಿ ಸಡಗರ ಮತ್ತು ಸಂಪ್ರದಾಯದಂತೆ ಹಬ್ಬವನ್ನ ಆಚರಿಸಲಾಯಿತು. ಲಂಬಾಣಿ ಜನಾಂಗದವರಿಂದ ಸಂಪ್ರದಾಯದ ಉಡುಗೆತೊಟ್ಟು ಆಚರಿಸಿದರು.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close