ಸುದ್ದಿಲೈವ್/ತೀರ್ಥಹಳ್ಳಿ
ತಾಲೂಕಿನ ಭಾವೈಕ್ಯತೆ ಕೇಂದ್ರವಾಗಿರುವ ಹಣಗೆರೆಕಟ್ಟೆಯ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ಗುರುವಾರ ನಡೆದ ಹುಂಡಿ ಎಣಿಕೆಯಲ್ಲಿ ಮೋಸ ನಡೆದಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ಇಂದೂ ಸಹ ಮರು ಎಣಿಕೆ ನಡೆದಿದೆ. ಮರು ಎಣಿಕೆಯಲ್ಲಿ ಹೆಚ್ಚುವರಿ 77 ಸಾವಿರ ಹಣ ಹೆಚ್ಚಿಗೆ ಪತ್ತೆಯಾಗಿದ್ದು, ಇನ್ನು ತಹಶೀಲ್ದಾರ್ ತೆಗೆದುಕೊಳ್ಳುವ ನಡೆಯ ಮೇಲೆ ಕುತೂಹಲ ಮೂಡಿಸಿದೆ.
ಗುರುವಾರ ಹುಂಡಿಯ ಹಣ ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಹಣಗೆರೆಕಟ್ಟೆ ದೇವಸ್ಥಾನದ ಆಡಳಿತ ಮಂಡಳಿ ತಹಶೀಲ್ದಾರ್ ಗೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಗುರುವಾರವೇ ಮೇಲ್ನೋಟಕ್ಕೆ ಹಣದ ಕಂತುಗಳನ್ನು ಎಣಿಸಿದಾಗ ಹೆಚ್ಚುವರಿ ನೋಟುಗಳು ಕಂಡು ಬಂದಿದ್ದವು. ನಂತರ ಆ ಹಣವನ್ನು ತಾಲ್ಲೂಕು ಕಚೇರಿಯ ಖಜಾನೆಯಲ್ಲಿ ಇಡಲಾಗಿತ್ತು.
ಇಂದು ಶುಕ್ರವಾರ ಬೆಳಗ್ಗೆ ತಹಶೀಲ್ದಾರ್, ಡಿವೈಎಸ್ಪಿ ಸಮ್ಮುಖದಲ್ಲಿ ಬಿಗಿ ಬಂದೋಬಸ್ತ್ ಮೂಲಕ ಹಣವನ್ನು ಹಣಗೆರೆಕಟ್ಟೆಯ ದೇವಸ್ಥಾನಕ್ಕೆ ಸಾಗಿಸಿ ಮರು ಎಣಿಕೆ ನಡೆಸಲಾಯಿತು.
ಒಟ್ಟು 66 ಲಕ್ಷದ 4 ಸಾವಿರದ 950 ರೂ. ಹಣ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಂದಾಯವಾಗಿದೆ. ಹಣದ ಕಂತೆಯಲ್ಲಿ ಸರಿಯಾಗಿ ಎಣಿಕೆ ಮಾಡದೆ ಹಿನ್ನಲೆಯಲ್ಲಿ ಮೊದಲು ಎಣಿಸಿದ ಹಣಕ್ಕಿಂತ 77,930 ರೂಪಾಯಿ ಹಣ ಜಾಸ್ತಿ ಬಂದಿದೆ. ಈ ಸಂಬಂಧ ತಹಶೀಲ್ದಾರ್ ಅವರಮುಂದಿನ ನಡೆ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಇಂತಹ ಕೃತ್ಯ ನಡೆಸಿದ ಹಾಗೂ ಅದಕ್ಕೆ ಸಹಕಾರ ಸಹಕಾರ ನೀಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಎಸ್‌ಬಿಐ ಬ್ಯಾಂಕ್ ಗೆ ಹಣ ವರ್ಗಾಯಿಸಲಾಗಿದೆ.
ಒಟ್ಟಿನಲ್ಲಿ ಹುಂಡಿ ಹಣದ ಮರು ಎಣಿಕೆ ಪ್ರಕರಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಇನ್ನು ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.