Girl in a jacket

ಮತ್ತೊಂದು ವೈಚಾರಿಕತೆಯ ಚಳವಳಿ ಅಗತ್ಯವಿದೆ-ಟೆಲೆಕ್ಸ್ ರವಿ




ಸುದ್ದಿಲೈವ್/ಶಿವಮೊಗ್ಗ,ನ,.೧೧: 

ಸಾಮಾಜಿಕ,ಸಾಂಸ್ಕೃತಿಕ  ಮತ್ತು ರಾಜಕೀಯ ಸೈದ್ದಾಂತಿಕ ವೈರುಧ್ಯಗಳನ್ನು ಎದುರಿಸುತ್ತಿರುವ ಈ ಹೊತ್ತಿನಲ್ಲಿ ಬಸವಾದಿಶರಣರು ಮತ್ತು ವಚನಗಳನ್ನು ಉಳಿಸಿಕೊಳ್ಳಲು ಮತ್ತೊಂದು ವೈಚಾರಿಕ ಚಳವಳಿ ಅಗತ್ಯವಿದೆ ಎಂದು   ಪ್ರಗತಿಪರ ಚಿಂತಕ ಎನ್. ರವಿಕುಮಾರ್ (ಟೆಲೆಕ್ಸ್) ಹೇಳಿದರು.

ಬಸವಕೇಂದ್ರದವತಿಯಿಂದ ನಡೆಯುತ್ತಿರುವ ಚಿಂತನಕಾರ್ತಿಕದಲ್ಲಿ ಆತಿಥಿಗಳಾಗಿ ಮಾತನಾಡುತ್ತಿದ್ದ ಅವರು,  ೧೨ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ, ಮೌಢ್ಯ, ಕಂದಾಚಾರಗಳ ವಿರುದ್ದ  ಬಸವಣ್ಣನವರು ಕಟ್ಟಿದ ವೈಚಾರಿಕ ಚಳವಳಿ ಕ್ರಾಂತಿಕಾರಿ ಪರಿವರ್ತನೆಗೆ ಕಾರಣವಾಯಿತು, ಕಲ್ಯಾಣದಲ್ಲಿ ನಡೆದದ್ದು ಕ್ರಾಂತಿಯಲ್ಲ. ಸಾಮಾಜಿಕ , ಸಾಂಸ್ಕೃತಿಕ, ಧಾರ್ಮಿಕ  ಪರಿವರ್ತನೆಯ ಅರಿವಿನ  ವಿರುದ್ದ ವೈದಿಕಶಾಹಿಗಳು, ಯಥಾಸ್ಥಿತಿವಾದಿಗಳು ನಡೆಸಿದ ದೊಂಬಿಯೇ ಆಗಿತ್ತು. ಸಮಸಮಾಜದ ಬಸವಧರ್ಮ ಅಥವಾ ವಚನಗಳ ಚಳವಳಿಗಳು ಜಗತ್ತಿನಲ್ಲಿ ಜನಸಾಮಾನ್ಯರೆ ಕಟ್ಟಿದ ಚಳವಳಿಯಾಗಿದೆ ಎಂದರು.

೧೨ನೇ ಶತಮಾನದಲ್ಲಿ ಇದ್ದ ಜಾತಿ ತರತಮ, ಶೋಷಣೆ, ಧಾರ್ಮಿಕ ಕಂದಾಚಾರಗಳು ೨೧ ನೇ ಶತಮಾನದಲ್ಲೂ ಇನ್ನಷ್ಟು ಉಗ್ರವಾಗಿ , ಆಕ್ರಮಣಕಾರಿಯಾಗಿ ಮುನ್ನಡೆಯುತ್ತಿರುವುದು ಸಮಸಮಾಜ ನಿರ‍್ಮಾಣದ ಬಸವತತ್ವಕ್ಕೆ ದೊಡ್ಡ ಅಡ್ಡಿಯಾಗಿದೆ. ವೈದಿಕ ಪ್ರೇಣಿತ ಮತ್ತು ಬಸವಪ್ರೇಣಿತ ವಿಚಾರಧಾರೆಗಳ ನಡುವೆ ಸಂಘರ್ಷ ನಡೆಯುತ್ತಿದ್ದು,  ಕಲ್ಯಾಣದಲ್ಲಿ ಬಸವಾದಿಶರಣನ್ನು ಕೊಂದಂತೆ, ವಚನಗಳನ್ನು ಸುಟ್ಟ ಮನೋಧರ್ಮವೇ ಇಂದೂ ಕೂಡ ಇದೇ ಹಾದಿಯನ್ನು ಅನುಸರಿಸುತ್ತಿರುವುದು ಆತಂಕಕಾರಿ ಸಂಗತಿ ಎಂದು ಎನ್. ರವಿಕುಮಾರ್ ಕಳವಳ ವ್ಯಕ್ತಪಡಿಸಿದರು.

ಇವತ್ತಿನ ಸಾಮಾಜಿಕ, ಧಾರ್ಮಿಕ, ರಾಜಕೀಯ ತಲ್ಲಣಗಳಿಗೆಲ್ಲಾ ವಚನಗಳು ಪರಿಹಾರವಾಗಿವೆ.  ಆದರೆ ಬಸವಣ್ಣ ಮತ್ತು ವಚನಗಳನ್ನು ವೈದಿಕನೆಲೆಯಲ್ಲಿ  ತಮ್ಮವನ್ನಾಗಿಸುವ ಅಥವಾ ಸಾಂಸ್ಕೃತಿಕ ರೂಪಾಂತರಗೊಳಿಸುವ ದೊಡ್ಡ ಹುನ್ನಾರ ನಡೆದಿದ್ದು, ಇದನ್ನು ತಡೆಯುವಲ್ಲಿ ಮತ್ತೊಂದು ವೈಚಾರಿಕ ಚಳವಳಿಗೆ ಬಹುಜನರು ಮುಂದಾಗಬೇಕು ಎಂದು ಕರೆನೀಡಿದರು.

ಉಪನ್ಯಾಸಕರಾದ ಡಾ.ಕಲೀಮುಲ್ಲಾ ಅವರು ಮಾತನಾಡಿ ಜಗತ್ತಿನಲ್ಲಿ ಪ್ರೀತಿ ಸೇರಿದಂತೆ ಎಲ್ಲವೂ ಒಳ್ಳೆಯದಿದೆ. ಆದರೆ ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದೇ ಅನಂತ ಲೋಕ. ನಮ್ಮೊಳಗೊಂದು ಲೋಕವಿದ್ದು ಅದು ಅಂತರ್ ಮುಖಿಯಾಗಿರುತ್ತದೆ ಎಂದರು.

ಈ ಲೋಕದಲ್ಲಿ ಅನೇಕ ವಿಸ್ಮಯಗಳಿವೆ. ಪ್ರಾಣಿ.ಪಕ್ಷಿಗಳ ಜೀವನ ಕ್ರಮವೇ ಮನುಷ್ಯನಿಗೆ ಪಾಠವಾಗಬೇಕು. ಅವುಗಳಿಗೆ ಹೋಲಿಸಿಕೊಂಡರೆ ಮನುಷ್ಯ ಅತ್ಯಂತ ದಡ್ಡನಾಗಿ ಕಾಣುತ್ತಾನೆ ಎಂದರು.

ಗ್ರಾಹಕರ ವ್ಯಾಜ್ಯ ಪ್ರಾಧಿಕಾರದ ನ್ಯಾಯಾಧೀಶೆ ಶ್ರೀಮತಿ ಪ್ರೇಮಾ ಹಾಲಸ್ವಾ,ಮಿ ಅಧ್ಯಕ್ಷತೆ ವಹಿಸಿದ್ದರು. ಬಸವಕೇಂದ್ರ ಡಾ. ಬಸವಮುರುಳುಸಿದ್ದಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಚಿಂತನಕಾರ್ತಿಕ ಸೇವಾರ್ಥಿಗಳಾದ  ಅ.ಮ.ಶಿವಮೂರ್ತಿ ಮತ್ತು ಕುಟುಂಬ ಆತಿಥ್ಯವಹಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close