ಸುದ್ದಿಲೈವ್/ಶಿವಮೊಗ್ಗ
ಶಾಂತಿ ನಗರದ ರಾಗಿಗುಡ್ಡಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಯುಜಿಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆ ನೇತೃತ್ವದಲ್ಲಿ ಸ್ಥಳೀಯರು ಸೋಮವಾರ ನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಬಡವರು, ಕೂಲಿ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ನೀರಿನ ಕಂದಾಯ ಪಾವತಿ ಮಾಡುತ್ತಿದ್ದರೂ ಸಮಪರ್ಕವಾಗಿ ನೀರು ಸರಬರಾಜು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಯುಜಿಡಿ ವ್ಯವಸ್ಥೆ ಸಂಪೂರ್ಣವಾಗಿಲ್ಲ. ಇರುವ ಅಲ್ಪ ಸ್ಥಳಗಳಲ್ಲಿ ಪೈಪ್‌ಗಳು ಒಡೆದು ಹೋಗಿವೆ. ಒಡೆದ ಪೈಪ್‌ನಿಂದ ಕೊಳಚೆ ನೀರು ಕುಡಿಯುವ ನೀರಿನ ಪೈಪ್‌ನೊಂದಿಗೆ ಸೇರಿಕೊಂಡಿರುವ ಪರಿಣಾಮ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಡಾವಣಿಯ ಮೂಲ ಸೌಕರ್ಯ ಸಮಸ್ಯೆ ಬಗ್ಗೆ ನಿರ್ಲಕ್ಷೃ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಾಗರಿಕ ಹಕ್ಕುಗಳ ವೇದಿಕೆಯ ಪ್ರಮುಖರಾದ ಸೈಯದ್ ಮುಜೀಬುಲ್ಲಾ, ರಾಮು, ಸೈಮನ್‌ರಾಜು, ಇರ್ಫಾನ್, ಕೃಷ್ಣ, ಸೈಮನ್, ಮನ್ಸೂರ್, ಸುಭಾನ್, ಅಬು ತಾಹೀರ್, ಪುಷ್ಪಾ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.