![]() |
Prof. Rajasharanshahi, National President of ABVP said that ABVP has sailed through the currents of time because of its solid ideological base. |
ಸುದ್ದಿಲೈವ್/ಶಿವಮೊಗ್ಗ
ವೈಚಾರಿಕ ತಳಹದಿ ಭದ್ರವಾಗಿರುವುದರಿಂದ ಎಬಿವಿಪಿ ಕಾಲದ ಪ್ರವಾಹದಲ್ಲಿ ಸಾಗಿ ಸುಭದ್ರವಾಗಿದೆ ಎಂದು ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಪ್ರೊ.ರಾಜಶರಣಶಾಹಿ ಹೇಳಿದರು.
ಎಬಿವಿಪಿಯ ಮೂರು ದಿನಗಳ ದಕ್ಷಿಣ ಪ್ರಾಂತದ 44ನೇ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದುವರೆಗೆ ಅನೇಕ ವಿದ್ಯಾರ್ಥಿ ಸಂಘಟನೆಗಳು ಜನ್ಮ ತಾಳಿವೆ. ಅಷ್ಟೇ ಶೀಘ್ರ ಸಮಯದಲ್ಲಿ ಅವು ಸ್ಥಗಿತವಾಗಿವೆ. ಎಬಿವಿಪಿ ಇನ್ನೂ ಸದೃಢವಾಗಿರುವುದಕ್ಕೆ ಅದರ ವೈಚಾರಿಕ ದೃಷ್ಟಿಕೋನವೇ ಕಾರಣ ಎಂದರು.
ಇಲ್ಲಿನ ಆಡಳಿತ ಭಾಷೆ ಇಂಗ್ಲೀಷ್ ಆದಲ್ಲಿ ಮಾತ್ರ ಉತ್ತಮ ಆಡಳಿತ ಸಾಧ್ಯ ಎಂದು ಬ್ರಿಟಿಷರು ಭಾರತೀಯರನ್ನು ನಂಬಿಸಿದರು. ಇದಕ್ಕಾಗಿಯೇ ಆಂಗ್ಲ ಭಾಷೆಯನ್ನು ಹೇರಿಕೆ ಮಾಡಿದ್ದರು. ಆದರೆ ಆಚಾರ್ಯ ವಿನೋಭಾ ಭಾವೆ ಅವರ ಪ್ರಕಾರ ಸ್ಥಳೀಯ ಭಾಷೆಯಲ್ಲೇ ಆಡಳಿತ ವ್ಯವಸ್ಥೆ ಇರಬೇಕೆಂಬುದಾಗಿತ್ತು. ಅದಕ್ಕೆ ಅವರು ವಿಜಯನಗರ ಸಾಮ್ರಾಜ್ಯದ ನಿದರ್ಶನವನ್ನು ನೀಡಿದ್ದರು ಎಂದು ವಿವರಿಸಿದರು.
ಎಬಿವಿಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಪಿ.ವಿ.ಕೃಷ್ಣಭಟ್, ಇಸ್ರೋದ ಕುಲಾಧಿಪತಿ, ಪದ್ಮಭೂಷಣ ಪುರಸ್ಕೃತ ಡಾ.ಬಿ.ಎನ್.ಸುರೇಶ್, ದಕ್ಷಿಣ ಪ್ರಾಂತ ಅಧ್ಯಕ್ಷ ರವಿ ಮಂಡ್ಯ, ಪ್ರಾಂತ ಕಾರ್ಯದರ್ಶಿ ಎಚ್.ಕೆ.ಪ್ರವೀಣ್, ಸ್ವಾಗತಿ ಅಮಿತಿ ಅಧ್ಯಕ್ಷ ಎಸ್.ಎನ್.ನಾಗರಾಜ, ಪ್ರಧಾನ ಕಾರ್ಯದರ್ಶಿ ಡಾ.ಕೆ.ಜೆ.ಹೇಮಂತ್, ಸಂಚಾಲಕ ರಾಜೇಶ್ ಶಾಸ್ತ್ರಿ ಮುಂತಾದವರು ಉಪಸ್ಥಿತರಿದ್ದರು.
ಯಾವುದೇ ದೇಶಕ್ಕೆ ಖಂಡಿತವಾಗಿಯೂ ರಾಜಕೀಯ ಅತ್ಯವಶ್ಯ. ಆದರೆ ಭ್ರಷ್ಟ ವ್ಯಕ್ತಿಗಳು ರಾಜಕೀಯಕ್ಕೆ ಬಂದರೆ ವಾತಾವರಣ ಕಲುಷಿತವಾಗುತ್ತದೆ ಎಂದು ಪ್ರೊ.ಪಿ.ವಿ.ಕೃಷ್ಣಭಟ್ ಹೇಳಿದರು.
ದೇಶಕ್ಕೆ ಸ್ವಾತಂತ್ರೃ ಬಂದ ಸಂದರ್ಭದಲ್ಲಿ ಈ ದೇಶವನ್ನು ಶಕ್ತಿಶಾಲಿಯಾಗಿ ರೂಪಿಸುವ ಅವಶ್ಯಕತೆಯಿತ್ತು. ಆ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿ ಸಂಘಟನೆಗಳಿದ್ದವು. ಕಮ್ಯುನಿಷ್ಟ್‌ಪ್ರೇರಿತ ವಿದ್ಯಾರ್ಥಿ ಸಂಘಟನೆ, ಕಾಂಗ್ರೆಸ್ ಬೆಂಬಲಿತ ಸಂಘಟನೆಗಳಿದ್ದವು. ವಿದ್ಯಾರ್ಥಿ ಸಂಘಟನೆಗಳು ರಾಜಕೀಯ ಪಕ್ಷಗಳ ಮುಖವಾಣಿಯಂತೆ ಕೆಲಸ ಮಾಡುತ್ತಿದ್ದ ಸಮಯವದು. ಆದರೆ ಎಬಿವಿಪಿ ಶೈಕ್ಷಣಿಕ ಪರಿವರ್ತನೆಯ ಉದ್ದೇಶದಿಂದ ಸ್ಥಾಪಿತವಾಯಿತು. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಂಘಟನೆ ತನ್ನ ಮೂಲ ಉದ್ದೇಶದಿಂದ ದೂರ ಸರಿಯಲಿಲ್ಲ ಎಂದರು.