Suddilive || Shivamogga
ಆಧಾರ್ ಲಿಂಕ್ ನೊಂದಿಗೆ ಜಾತಿ ಗಣತಿ ಕಡ್ಡಾಯಗೊಳಿಸಿ-ರಂಗಹನುಮಯ್ಯ-Make caste census mandatory with Aadhaar link-Rangahanumaiah
ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಕಾಂತರಾಜ್ ಜನಗಣತಿ ವರದಿಯಲ್ಲಿ ಕುಂಚಿಟಿಗ ಜನಾಂಗಕ್ಕೆ ಆಗಿರುವ ತಪ್ಪು ಜನಗಣತಿಯನ್ನು ಸರಿಪಡಿಸಿ ಆಯೋಗದಿಂದ ಮತ್ತೆ ಜನಗಣತಿ ಮಾಡಿಸಿ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ನಲ್ಲಿ ಅನುಮೋದನೆ ಮಾಡಬೇಕೆಂದು ಅಖಿಲ ಕುಂಚಿಡಿಗರ ಮಹಾಮಂಡಲ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಗುರುವಾರ ಮಾತನಾಡಿದ ಮಹಾಮಂಡಲದ ರಾಜ್ಯಾಧ್ಯಕ್ಷ ಎಚ್. ರಂಗಹನುಮಯ್ಯ, 1921 ರಲ್ಲಿ ನಡೆದ ಜಾತಿ ಗಣತಿಯ ಪ್ರಕಾರ ಹಿಂದಿನ ಮೈಸೂರು ಮಹಾರಾಜರ ಸರ್ಕಾರ 17.08.1928 ರಲ್ಲಿಯೇ ಕುಂಚಿಟಿಗ ಜಾತಿಯು ಒಕ್ಕಲಿಗರ ಉಪಜಾತಿ ಪಂಗಡಕ್ಕೆ ಸೇರುವುದಿಲ್ಲ. ಕುಂಚಿಟಿಗ ಜಾತಿ ಪ್ರತ್ಯೇಕ ಸ್ವಂತತ್ರ ಜಾತಿ ಎಂದು ಆದೇಶ ಮಾಡಿದ್ದು ಇಂದಿಗೂ ಚಾಲ್ತಿಯಲ್ಲಿದೆ ಎಂದರು.
ಆದರೆ, ಕಾಂತರಾಜ್ ಜಾತಿ ಗಣತಿ ಸಂದರ್ಭದಲ್ಲಿ ಕುಂಚಿಟಿಗರು ಜಾತಿ ಕಾಲಂನಲ್ಲಿ ಒಕ್ಕಲಿಗ ಮತ್ತು ಉಪಜಾತಿ ಕಾಲಂನಲ್ಲಿ ಕುಂಚಿಟಿಗ ಎಂದು ಬರೆಯಿಸಿ ಕುಂಚಿಟಿಗರನ್ನು ಒಕ್ಕಲಿಗರನ್ನಾಗಿ ಮಾಡಿದ್ದಾರೆ. ಮೈಸೂರಿನ ರಾವ್ ಬಹದ್ದೂರ್ ಡಿ. ಬನುಮಯ್ಯನವರು 1920-21 ರ ಜನಗಣತಿಯಲ್ಲಿ ಮೈಸೂರು ಮಹಾರಾಜರಿಗೆ ಮನವಿ ಮಾಡಿ ಕುಂಚಿಟಿಗ ಹಿಂದೂ ಧರ್ಮದಲ್ಲಿ ಒಂದು ಸ್ವತಂತ್ರ ಜಾತಿ ಎಂದು ಬರೆಯಿಸಿ ಜನಗಣತಿ ಮಾಡಿಸಿದ್ದಾರೆಎನ್ನುವುದನ್ನು ವಿವರಿಸಿದರು.
ಪ್ರಸ್ತುತ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಹಿಂದುಳಿದ ವರ್ಗಗಳ ಕಾಂತರಾಜ್ ಅಯೋಗದ ವರದಿಯಲ್ಲಿ ಪ್ರವರ್ಗ 3-ಎ ನಲ್ಲಿ ಬರುವ ಕುಂಚಿಟಿಗ ಒಕ್ಕಲಿಗರು 41,188 ಹಾಗೂ ಕುಂಚಿಟಿಗರು 1,95,499 ಒಟ್ಟು 2,36,687 ಜನಸಂಖ್ಯೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಶಿಫಾರಸ್ಸು ಮಾಡುವುದರ ಮುಖೇನ ರಾಜ್ಯ ಸರ್ಕಾರದ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲಾಗಿರುವುದು ಕಂಡುಬಂದಿದೆ ಎಂದರು.
ಈ ಜಾತಿಗಣತಿ ವರದಿಯು ಅಕ್ಷರಶಃ ಸತ್ಯಕ್ಕೆ ದೂರವಾದುದು. ಏಕೆಂದರೆ ಜಾತಿಗಣತಿಯನ್ನು ಮಾಡಲು ನಮ್ಮ ಸಮಾಜದ ಮನೆಗಳಿಗೆ ಯಾರು ಬಂದಿರುವುದಿಲ್ಲ. ಇದು ತಪ್ಪು ಜಾತಿಗಣತಿ ವರದಿಯಾಗಿದೆ ಎಂದು ಕುಂಚಿಟಿಗರು ಸಂದೇಶದ ಮೂಲಕ ಮತ್ತು ಕರೆಮಾಡುವುದರ ಮೂಲಕ ಮಾಹಿತಿ ಕೊಟ್ಟಿದ್ದಾರೆ ಎಂದರು.
ಕುಂಚಿಟಿಗ ಜಾತಿಯನ್ನು ಭಾರತ ಸರ್ಕಾರದ ಘನತೆವೆತ್ತ ತಮ್ಮ ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಕುಂಚಿಟಿಗ ಜಾತಿ ಎಂದೇ ಅನುಮೋದಿಸಿ, ಮೀಸಲಾತಿ ಪಟ್ಟಿಯಲ್ಲಿ ಸೇರಿಸುವ ಸಲುವಾಗಿ ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ದಿನಾಂಕ 30.10.2023 ರಂದು ಈಗಾಗಲೇ ಸಲ್ಲಿಸಿದೆ. ಆಧಾರ್ ಲಿಂಕ್ ನೊಂದಿಗೆ ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುವಂತೆ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಕಾಂತರಾಜ ಸೋಮಿನಕೊಪ್ಪ , ರಾಜ್ಯ ಕಾರ್ಯದರ್ಶಿ ರಂಗರಾಜು, ಖಜಾಂಚಿ ವೆಂಕಟೇಶ್, ತಾಲೂಕು ಅಧ್ಯಕ್ಷ ರಾಘವೇಂದ್ರ ಹಾಜರಿದ್ದರು.
Make caste census mandatory