SUDDILIVE || SHIVAMOGGA
ಒತ್ತುವರಿ ಆರೋಪ, ವಕೀಲರ ಮನೆಯನ್ನೇ ಬೀಳಿಸಿದ ತಾಲೂಕು ಆಡಳಿತ, ತಾಲೂಕು ಆಡಳಿತದ ವಿರುದ್ಧವೇ ದೂರು-Encroachment allegations, taluk administration demolishes lawyer's house, complaint against taluk administration itself
ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿದ ಆರೋಪದ ಹಿನ್ನಲೆಯಲ್ಲಿ ನಿರ್ಮಾಣದ ಹಂತದಲ್ಲಿದ್ದ ಮನೆಯನ್ನು ನಿನ್ನೆ ಸಂಜೆ ತಾಲೂಕು ಆಡಳಿತ ತೆರವುಗೊಳಿಸಿದ್ದು ಈ ವಿಷಯ ವಕೀಲರ ಸಂಘವನ್ನೇ ತಲ್ಲಣಗೊಳಿಸಿದೆ.
ಜೆಸಿಬಿ ಯಂತ್ರ ಬಳಸಿ ಮನೆ ಬೀಳಿಸಿದ ತಾಲೂಕು ಕಚೇರಿ ಸಿಬ್ಬಂದಿಗಳು ಪೊಲೀಸ್ ಬಂದೋಬಸ್ತ್ ನಲ್ಲಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ತೆರವು ಕಾರ್ಯಾಚರಣೆಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರೂ ಯಾವುದೇ ಆಕ್ಷೇಪಣೆಯನ್ನ ಕೇಳದೆ ತಾಲೂಕು ಆಡಳಿತ ಮನೆಯನ್ನ ಕೆಡವಿದೆ. ಪರಿಣಾಮ ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ರವಿಚಂದ್ರ ಎಂಬ ವಕೀಲರಿಗೆ ಸೇರಿದ್ದ ಮನೆಯನ್ನ ಒತ್ತುವರಿಯಾಗಿ ಮನೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ತಾಲೂಕು ಆಡಳಿತ ಜೆಸಿಬಿ ಬಳಸಿ ನಿರ್ಮಾಣ ಹಂತದಲ್ಲಿರುವ ಮನೆಯನ್ನಕೆಡವಿದೆ. ಸೊರಬ ತಾಲೂಕಿನ ಆನವಟ್ಟಿ ಬಳಿಯ ಅಗಸನಹಳ್ಳಿ ಗ್ರಾಮದಲ್ಲಿ ವಕೀಲರು ಮನೆ ಕಟ್ಟುತ್ತಿದ್ದರು. ಸರ್ವೇ ನಂಬರ್ 20ರಲ್ಲಿ ಮನೆಯನ್ನ ನಿರ್ಮಿಸಲಾಗುತ್ತಿತ್ತು.
ಹಕ್ಕು ಪತ್ರ, ಚೆಕ್ ಬಂದಿ ಸೇರಿದಂತೆ ಸೂಕ್ತ ದಾಖಲೆಗಳಿದ್ದಾಗ್ಯೂ ಮನೆ ಕೆಡವಲಾಗಿದೆ ಎಂದು ವಕೀಲ ರವಿಚಂದ್ರ ಆರೋಪಿಸಿದ್ದಾರೆ. ಯಾವುದೇ ನೋಟಿಸ್ ನೀಡದೆ ಮನೆ ಕೆಡವಲಾಗಿದೆ ಎಂದು ಸಹ ಅವರು ಆರೋಪಿಸಿದ್ದಾರೆ. ಆದರೆ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮನೆ ನಿರ್ಮಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು
ಆದರೂ ಮನೆ ತೆರವಾಗದ ಕಾರಣ ತಾಲೂಕು ಆಡಳಿತದಿಂದಲೇ ಮನೆ ತೆರವುಗೊಳಿಸಲಾಯಿತು ಎಂದು ಅಧಿಕಾರಿಗಳು ಸಮ್ಜಾಯಿಷಿ ನೀಡಿದ್ದಾರೆ. ಇದನ್ನ ಖಂಡಿಸಿ ತಾಲೂಕು ಆಡಳಿತದ ಕ್ರಮದ ವಿರುದ್ಧ ಜಿಲ್ಲಾಡಳಿತಕ್ಕೆ ಜಿಲ್ಲಾ ವಕೀಲರಸಂಘದ ಅಧ್ಯಕ್ಷ ರಾಘವೇಂದ್ರ ಅವರ ನೇತೃತ್ವದಲ್ಲಿ ದೂರು ನೀಡಲಾಗಿದೆ.
Encroachment allegations