SUDDILIVE || SHIVAMOGGA
ಸಾಚಾರ್, ಕಾಂತರಾಜ್ ವರದಿ ಜಾರಿ ಮಾಡಿ, ಅಹಿಂದಾ ಸಭೆಯಲ್ಲಿ ಒತ್ತಾಯ-Sachar, Kantaraj report to be implemented, demand in Ahinda meeting
ಶರಾವತಿ ಸೇರಿದಂತೆ ಮಲೆನಾಡು ಕರಾವಳಿಯ ವಿವಿಧ ಯೋಜನೆಗಳ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವುದು, ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾದ ಕಾಂತರಾಜ್ ಆಯೋಗದ ವರದಿಯನ್ನು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಲು ಅಹಿಂದ ಚಳವಳಿಯ ಪೂರ್ವಭಾವಿ ಸಭೆಯಲ್ಲಿ ಆಗ್ರಹಿಸಲಾಗಿದೆ.
ನಗರ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಗಳ ವ್ಯಾಪ್ತಿಯ ವಿವಿಧ ಸಂಘಟನೆಯ ಮುಖಂಡರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
೨೦೦೫ ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ಜಸ್ಟಿಸ್ ರಾಜಿಂದರ್ ಸಾಚಾರ್ ಸಮಿತಿ ರಚಿಸಿ ವರದಿ ಪಡೆದಿದ್ದು, ಆ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು.
ಹುಲ್ಲುಬನಿ, ಗೋಮಾಳ, ದನಗಳ ಮುಪತ್ತು, ಕಾನು ಸೊಪ್ಪಿನ ಬೆಟ್ಟ, ದನಗಳ ಮುಪ್ಪತ್ತು ಮೊದಲಾದ ಸ್ವರೂಪದ ಭೂಮಿಯಲ್ಲಿ ಬಗರ್ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹಾರಕ್ಕೆ ಭೂಹಕ್ಕು ನೀಡಬೇಕು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಇಲಾಖೆಯಿಂದ ನೀಡಿರುವ ೯೧೨೯.೨೧ ಎಕರೆ ಭೂಮಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಇದನ್ನು ತಕ್ಷಣ ಪರಿಹರಿಸಬೇಕು. ನೀರಾವರಿ ಯೋಜನೆಗಳಿಗಾಗಿ ಭೂಮಿ, ಮನೆಗಳನ್ನು ತ್ಯಾಗಮಾಡಿದ ತುಂಗಭದ್ರ, ವರಾಹಿ, ಚಕ್ರಾ, ಸಾವೇಹಕ್ಲು, ಅಂಬ್ಲಿಗೊಳ ಮುಳುಗಡೆ ಸಂತ್ರಸ್ತರಿಗೆ ಭೂಮಿಹಕ್ಕು ನೀಡುವಂತೆ ಒತ್ತಾಯಿಸಲಾಗಿದೆ.
೧೯೭೮ ರ ಪೂರ್ವದಲ್ಲಿ ರಾಜ್ಯದ ೧೪,೮೪೮.೮೩ಹೆಕ್ಟೇರ್ ಅರಣ್ಯ ಒತ್ತುವರಿಯನ್ನು ಸಕ್ರಮಗೊಳಿಸಲು ಭಾರತ ಸರ್ಕಾರದ ಅರಣ್ಯ ಕಾಯಿದೆ ೧೯೮೦ ಅಡಿ ಅವಕಾಶ ನೀಡಿರುವುದರಿಂದ ಇದನ್ನು ಕಾರ್ಯಗತಗೊಳಿಸಬೇಕು. ೧೯೭೮ ರ ನಂತರ ೩ ಎಕರೆವರೆಗೆ ಸಣ್ಣ ಹಿಡುವಳಿದಾರರು ಅರಣ್ಯ ಒತ್ತುವರಿ ಮಾಡಿದ್ದರೆ ಅಕ್ರಮ ಮಾಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅದರಂತೆ ಈಗ ಸಕ್ರಮ ಮಾಡಲು ಕ್ರಮಕೈಗೊಳ್ಳುವಂತೆಯೂ ಒತ್ತಾಯಿಸಲಾಗಿದೆ.
೨೦೦೬ ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಅರಣ್ಯ ಹಕ್ಕು ಕಾಯ್ದೆ ಇನ್ನೂ ಜಾರಿಯಾಗಿಲ್ಲ. ಪರಿಶಿಷ್ಟ ಪಂಗಡ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳೀಗೆ ವಿವಿಧ ಹಕ್ಕುಗಳ ಜೊತೆಗೆ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕು ನೀಡಲು ಅವಕಾಶ ನೀಡಿರುವುದರಿಂದ ಹಕ್ಕು ನೀಡುವಂತೆ ಸಭೆಯಲ್ಲಿ ಒತ್ತಾಯಿಸಲಾಗಿದೆ.
ಬೇರೆ ಜಿಲ್ಲೆಗಳಲ್ಲಿಯೂ ಸಂತ್ರಸ್ತರ ಸಭೆ ನಡೆಸಿ ಜಾಗೃತಿ ಮೂಡಿಸುವುದು.ಸ್ಥಳೀಯ ಸಂಸದರು, ಶಾಸಕರು ಹಾಗೂ ಪ್ರಮುಖರನ್ನು ಭೇಟಿ ಮಾಡಿ ಹೋರಾಟ್ಕಕೆ ಸಹಕಾರ ಕೋರುವುದು.ಶಾಂತವೇರಿ ಗೋಪಾಲಗೌಡರು, ದೇವರಾಜ ಅರಸು ಅವರ ಕುಟುಂಬದವರ ಉಪಸ್ಥಿತಿಯಲ್ಲಿ ಹಿರಿಯ ಹೋರಾಟಗಾರ ಕಾಗೋಡು ತಿಮ್ಮಪ್ಪನವರ ಮುಖಂಡತ್ವದಲ್ಲಿ ನಿರಾಶ್ರಿತರ ಬೃಹತ್ ಸಮಾವೇಶ ನಡೆಸುವುದು. ಈ ಸಮಾವೇಶಗಳೀಗೆ ಸಿಎಂ. ಡಿಸಿಎಂ, ಸಂಸದರು, ಶಾಸಕರನ್ನು ಆಹ್ವಾನಿಸಲು ಸಭೆ ನಿರ್ಧರಿಸಿತು.
ಸಭೆಯಲ್ಲಿ ರಾಜ್ಯ ಸಂಚಾಲಕರಾದ ತೀ.ನ.ಶ್ರೀನಿವಾಸ್, ಎಸ್. ಮೂರ್ತಿ, ಮಹಮ್ಮದ್ ಸನಾವುಲ್ಲಾ, ಜಿಲ್ಲಾ ಸಂಚಾಲಕ ಕಲ್ಲಪ್ಪ ಚಿತ್ರಟಳ್ಳಿ, ಎಸ್.ಪಿ. ಶೇಷಾದ್ರಿ, ಇಕ್ಬಾಲ್ ನೇತಾಜಿ, ಚನ್ನವೀರಪ್ಪ ಗಾಮನಗಟ್ಟಿ, ಮಾಜಿ ಶಾಸಕ ಬಿ. ಸ್ವಾಮಿರಾವ್, ಯೋಗೇಶ್ವರಿ ವಿಜಯ್, ದೇವರಾಜ್ ಅರಸು ಕುಟುಂಬದ ವಿಜಯಲಕ್ಷ್ಮೀ, ವಕೀಲ ಎನ್.ಪಿ. ಧರ್ಮರಾಜ್, ಶಂಕರಪ್ಪ ಸೇರಿದಂತೆ ಆರು ಜಿಲ್ಲೆಗಳ ಪ್ರಮುಖರು ಪಾಲ್ಗೊಂಡಿದ್ದರು.
demand in Ahinda meeting