SUDDILIVE SHIVAMOGGA
ಜಾತಿನಿಂದನೆ ಮತ್ತು ಜೀವ ಬೆದರಿಕೆ ಅಡಿ ಐವರಿಗೆ ಶಿಕ್ಷೆ-Five sentenced for caste abuse and life threats
ಅವ್ಯಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರಿಗೆ ನ್ಯಾಯಾಲಯವು ಪ್ರತ್ಯೇಕ ದಂಡ, ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದಿನಾಂಕ: 21-12-2021 ರಂದು ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಿಯೂರು ಗ್ರಾಮದ ವಾಸಿ ಮಹಿಳೆಯೊಬ್ಬರಿಗೆ, ಅದೇ ಊರಿನವರು ಸೇರಿ ಅಕ್ರಮಕೂಟ ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ನಮ್ಮ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡಿದ್ದಿಯಾ, ಗಂಡ ಸತ್ತಿರುವ ನಿನಗೆ ಆಸ್ತಿ ಬೇಕಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಹಿಡಿದು ಎಳೆದಾಡಿ, ದೊಣ್ಣೆಯಿಂದ ಬಲಗೈ, ಎಡಗೈ ಮತ್ತು ಬಲಭುಜಕ್ಕೆ ಹೊಡೆದು ಮನೆ ಖಾಲಿ ಮಾಡದಿದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದು, ಅವರು ನಿರ್ಮಿಸಿಕೊಂಡಿದ್ದ ಗುಡಿಸಲನ್ನು ಸಹಾ ಕಿತ್ತು ಹಾಕಿ, ಗುಡಿಸಿಲಿನಲ್ಲಿದ್ದ ವಸ್ತುಗಳನ್ನು ಹೊರಗೆ ಹಾಕಿದ್ದು ಸದರಿಯವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣೆ ಭದ್ರಾವತಿಯಲ್ಲಿ ಹಲವು ಐಪಿಸಿಗಳ ಅಡಿ ಮತ್ತು ಎಸ್.ಸಿ/ಎಸ್.ಟಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಉಮೇಶ್ ಈಶ್ವರ್ ನಾಯ್ಕ್ ಡಿವೈಎಸ್ಪಿ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ದಿನಾಂಕ: 16-10-2025 ರಂದು 1) ಚಂದ್ರಪ್ಪ, 62 ವರ್ಷ ವಾಸ ಹಿರಿಯೂರು ಭದ್ರಾವತಿ ಶಿವಮೊಗ್ಗ, 2) ಗಂಗಮ್ಮ, 57 ವರ್ಷ ವಾಸ ಹಿರಿಯೂರು ಭದ್ರಾವತಿ ಶಿವಮೊಗ್ಗ, 3) ಸಂತೋಷ್, 26 ವರ್ಷ ವಾಸ ಹಿರಿಯೂರು ಭದ್ರಾವತಿ ಶಿವಮೊಗ್ಗ, 4) ಮಂಜುನಾಥ್, 24 ವರ್ಷ ವಾಸ ಹಿರಿಯೂರು ಭದ್ರಾವತಿ ಶಿವಮೊಗ್ಗ, 5) ಕವಿತಾ, 34 ವರ್ಷ ವಾಸ ಗುಡದಟ್ಟಿ ಗ್ರಾಮ ತರಿಕೆರೆ ಚಿಕ್ಕಮಗಳೂರು ಇವರಿಗೆ ಕಲಂ 143, 148, 504, 354, 323, 324, 506, 427 ಐಪಿಸಿ ಕಾಯ್ದೆಗೆ ಪ್ರತ್ಯೇಕವಾಗಿ 62,000 ರೂ ದಂಡವನ್ನು ಪಾವತಿಸಬೇಕು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆ ಮತ್ತು ಎಸ್.ಸಿ/ಎಸ್.ಟಿ ಕಾಯ್ದೆಗೆ 2 ವರ್ಷ ಕಠಿಣ ಕಾರಾವಾಸ ಶಿಕ್ಷೆ ಪ್ರತ್ಯೇಕವಾಗಿ 30,000/- ರೂ ದಂಡವನ್ನು, ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆಯನ್ನು ಅನುಭವಿಸತಕ್ಕದ್ದು ಎಂದು ಹಾಗೂ ಸಂತ್ರಸ್ತೆಗೆ 2,50,000/- ರೂಗಳನ್ನು ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
Five sentenced for caste abuse and life threats