'ಮಣ್ಣಿನ ಆರೋಗ್ಯ ಕಾರ್ಡ್' ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಡಾ. ಧನಂಜಯ ಸರ್ಜಿ ಆಗ್ರಹ- Dr. Dhananjaya Sarji demands proper implementation of 'Soil Health Card' scheme

SUDDILIVE || SHIVAMOGGA

 'ಮಣ್ಣಿನ ಆರೋಗ್ಯ ಕಾರ್ಡ್' ಯೋಜನೆ  ಸಮರ್ಪಕ ಅನುಷ್ಠಾನಕ್ಕೆ ಡಾ. ಧನಂಜಯ ಸರ್ಜಿ ಆಗ್ರಹ- Dr. Dhananjaya Sarji demands proper implementation of 'Soil Health Card' scheme    

Sarji, demands


ಮಣ್ಣಿನ ಆರೋಗ್ಯದ ಅರಿವಿಲ್ಲದೆ ರೈತರು ಯಥೇಚ್ಛವಾಗಿ ಮತ್ತು ಅವೈಜ್ಞಾನಿಕವಾಗಿ ಬಳಸುತ್ತಿರುವ ರಾಸಾಯನಿಕ ರಸಗೊಬ್ಬರಗಳು ಹಾಗೂ ಕೀಟನಾಶಕಗಳು ಇಂದು ಜನಸಾಮಾನ್ಯರ ಜೀವಕ್ಕೆ ಕುತ್ತು ತರುತ್ತಿವೆ. ಈ ವಿಷಕಾರಿ ಅಂಶಗಳು ನದಿ ಮತ್ತು ನೀರಿನ ಮೂಲಗಳನ್ನು ಸೇರುತ್ತಿರುವುದರಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಉಲ್ಬಣಿಸುತ್ತಿದ್ದು, ಸರ್ಕಾರ ಕೂಡಲೇ 'ಮಣ್ಣಿನ ಆರೋಗ್ಯ ಕಾರ್ಡ್' ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ಕೃಷಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ಸದನದಲ್ಲಿ ಆಗ್ರಹ ಪಡಿಸಿದರು.


ರೈತರು ಬಳಸುವ ರಾಸಾಯನಿಕ ಗೊಬ್ಬರಗಳಿಂದ ಕ್ಯಾನ್ಸರ್, ನರರೋಗ ಕಾಯಿಲೆಗಳು, ಮೆದುಳಿನ ಗಡ್ಡೆ ಮತ್ತು ಸ್ತನ ಕ್ಯಾನ್ಸರ್, ಥೈರಾಯಿಡ್ ಸಮಸ್ಯೆ,  ಹಾರ್ಮೋನ್ ಸಮಸ್ಯೆಗಳು, ಬಂಜೆತನ, ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯಯಂತಹ ಮಾರಕ ಖಾಯಿಲೆಗಳು ವ್ಯಾಪಕವಾಗಿ ಹರಡುತ್ತಿದೆ. ಹೃದಯ ಮತ್ತು ಶ್ವಾಸಕೋಶ ಇತ್ತೀಚಿನ ದಿನಗಳಲ್ಲಿ ಸಾವಿಗೆ ಕಾರಣವಾಗುವ ಪ್ರಮುಖ ಮೂರು ಕಾಯಿಲೆಗಳಲ್ಲಿ ಕ್ಯಾನ್ಸರ್ ಕೂಡ ಒಂದಾಗಿದೆ.  2024ರ ವರದಿಯಂತೆ ದೇಶದಲ್ಲಿ 15.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು, 8.7 ಲಕ್ಷ ಜನ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ 2.30 ಲಕ್ಷ ಕ್ಯಾನ್ಸರ್ ರೋಗಿಗಳಿದ್ದು, 2024ರಲ್ಲಿ 87,855 ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ, ವಾರ್ಷಿಕ 25,000 ಸಾವುಗಳು ಸಂಭವಿಸುತ್ತಿವೆ. ಪ್ರತಿ ವರ್ಷ 87,000 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ದೇಶದ ಕೀಟನಾಶಕ ಬಳಕೆ 0.6 ಕೆಜಿ ಪ್ರತಿ ಹೆಕ್ಟೇರ್‌ಗೆ ಇದ್ದರೆ, ಕರ್ನಾಟಕದಲ್ಲಿ ಇದು ಆತಂಕಕಾರಿ ರೀತಿಯಲ್ಲಿ 1 ರಿಂದ 1.5 ಕೆಜಿ  ಪ್ರತಿ ಹೆಕ್ಟೇರ್‌ಗೆ ಇದೆ. ಹಾಗೆಯೆ ದೇಶದಲ್ಲಿ NPK  ರಾಸಾಯನಿಕಗಳ ಗೊಬ್ಬರ ಬಳಕೆ 135 ಕೆ.ಜಿ  ಪ್ರತಿ ಹೆಕ್ಟರ್ ಇದ್ದರೆ ರಾಜ್ಯದಲ್ಲಿ 120 ರಿಂದ 130 ಕೆ.ಜಿ  ಪ್ರತಿ ಹೆಕ್ಟರ್ ರಾಸಾಯನಿಕ ಗೊಬ್ಬರಗಳ ಬಳಕೆ ಇದೆ, ರಾಜ್ಯದಲ್ಲಿ ರಾಸಾಯನಿಕಗಳ ಬಳಕೆ 2021-22ರಲ್ಲಿ 30 ಲಕ್ಷ ಮೆಟ್ರಿಕ್ ಟನ್ ಇದ್ದರೆ 2023-24ರಲ್ಲಿ  32 ಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ. ದೇಶದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಆಹಾರದ ಮಾದರಿಗಳಲ್ಲಿ ಕೀಟನಾಶಕಗಳ ಅಂಶ ಪತ್ತೆಯಾಗಿದೆ, ಕೆಲವು ಸಲ ಇವು ಸುರಕ್ಷಿತ ಮಿತಿಗಿಂತಲೂ ಹೆಚ್ಚಾಗಿರುತ್ತವೆ ಎಂದು ವರದಿಗಳು ಹೇಳುತ್ತವೆ. 


ಶಿವಮೊಗ್ಗದ ತುಂಗಾ ನದಿಯ ನೀರನ್ನು ಪರೀಕ್ಷಿಸಿದಾಗ ಆಘತಕಾರಿ ಅಂಶಗಳು ಹೊರಬಂದಿವೆ. ನೀರಿನಲ್ಲಿ ಇರಬೇಕಾದ ಅಲ್ಯೂಮಿನಿಯಂ ಪ್ರಮಾಣ ಲೀಟರ್‌ಗೆ 0.03 ರಿಂದ 0.063 ಎಂಎಲ್ ಇರಬೇಕು. ಆದರೆ, ತುಂಗಾ ನದಿಯಲ್ಲಿ ಇದು 0.021 ರಿಂದ 13.4 ಎಂಎಲ್‌ ವರೆಗೆ ಪತ್ತೆಯಾಗಿದೆ. ಇಂತಹ ನೀರನ್ನು ಕುಡಿಯುವುದರಿಂದ ಮೆದುಳಿನ ಕಾಯಿಲೆ, ಕಿಡ್ನಿ, ಲಿವರ್ ಹಾನಿ ಮತ್ತು ಮೂಳೆಗಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ ಎಂದು ಡಾ. ಸರ್ಜಿ ಆತಂಕ ವ್ಯಕ್ತಪಡಿಸಿದರು.


ರಾಜ್ಯದಲ್ಲಿ 1.1 ಕೋಟಿ ಹೆಕ್ಟೇರ್ ಕೃಷಿ ಭೂಮಿ ಇದ್ದರೂ ವರ್ಷಕ್ಕೆ ಕೇವಲ 5 ಲಕ್ಷ ಮಣ್ಣಿನ ಪರೀಕ್ಷೆಗಳು ಮಾತ್ರ ನಡೆಯುತ್ತಿವೆ. ಕೇವಲ 6 ಕೀಟನಾಶಕ ಪರೀಕ್ಷಾ ಕೇಂದ್ರಗಳಿದ್ದು, ವರ್ಷಕ್ಕೆ ಕೇವಲ 6,000 ಪರೀಕ್ಷೆಗಳು ಮಾತ್ರ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾಹೀರಾತಿಗೆ ಕಳೆದ ಮೂರು ವರ್ಷಗಳಲ್ಲಿ 520 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಈ ಹಣವನ್ನು ಜಾಹೀರಾತುಗಳ ಬದಲಿಗೆ ಕೃಷಿ ಜಾಗೃತಿ ಮತ್ತು ಮಣ್ಣಿನ ಆರೋಗ್ಯ ಪರೀಕ್ಷೆಗಳಿಗೆ ಬಳಸಬೇಕು ಸರ್ಕಾರ ಕೂಡಲೇ ರೈತರಲ್ಲಿ ಜಾಗೃತಿ ಮೂಡಿಸಿ, ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಎಂದು ಡಾ. ಧನಂಜಯ ಸರ್ಜಿ ಆಗ್ರಹಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ನಿರಂತರವಾಗಿ ಮಣ್ಣಿನ ಪರೀಕ್ಷೆ ಮಾಡಿಸಲು ಮತ್ತು ರಾಸಾಯನಿಕ ಗೊಬ್ಬರ ಬಳಕೆ  ಕಡಿಮೆ ಮಾಡುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದೇವೆ, ರಾಸಾಯನಿಕ ಗೊಬ್ಬರಗಳನ್ನ ಬಿಟ್ಟು ನೈಸರ್ಗಿಕ ಗೊಬ್ಬರಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ರಾಜ್ಯದಲ್ಲಿ 1,25,000 ಎಕರೆಯನ್ನು ನೈಸರ್ಗಿಕ  ಕೃಷಿ ಮಾಡಬೇಕೆಂದು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ, ಈ ಸಾಲಿನ ಬಜೆಟ್ ನಲ್ಲಿಯೂ ವಸುದಾಮೃತ ಎಂಬ ಯೋಜನೆಯನ್ನು ಘೋಷಣೆ ಮಾಡಿದ್ದೇವೆ, ಈ ಯೋಜನೆ ಅಡಿ ಸಾವಯವ ಗೊಬ್ಬರವನ್ನು ಹೆಚ್ಚಾಗಿ ಕೊಡುವಂತಹದನ್ನು ಮಾಡುತ್ತಿದ್ದೇವೆ. ರೋಣ ತಾಲೂಕನ್ನು ಸಂಪೂರ್ಣವಾಗಿ ಸಾವಯವ ತಾಲೂಕು ಎಂದು ಘೋಷಣೆ ಮಾಡಿದ್ದೇವೆ, ಈ ಬಾರಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕನ್ನು ಸಾವಯವ ತಾಲೂಕು ಎಂದು ಘೋಷಣೆ ಮಾಡಲಿದ್ದೇವೆ, ಜನರ ಆರೋಗ್ಯ ಮತ್ತು ಮಣ್ಣಿನ ಆರೋಗ್ಯ ಇವೆರಡನ್ನು ಗಮನದಲ್ಲಿಟ್ಟುಕೊಂಡು ಕೃಷಿಕರಿಗೆ ನೈಸರ್ಗಿಕ ಗೊಬ್ಬರಗಳಿಂದಲೂ ಇಳುವರಿ ಪಡೆಯಬಹುದು ಎಂದು ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಶಾಸಕರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Dr. Dhananjaya Sarji demands proper implementation of 'Soil Health Card' scheme

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close