ಕುವೆಂಪು ವಿವಿಗೆ ಅರಣ್ಯ ಇಲಾಖೆ ನೋಟೀಸ್- Forest Department notice to Kuvempu University

SUDDILIVE || SHIVAMOGGA

ಕುವೆಂಪು ವಿವಿಗೆ ಅರಣ್ಯ ಇಲಾಖೆ ನೋಟೀಸ್- Forest Department notice to Kuvempu University    

Kuvempu, university

ಅರಣ್ಯ ಇಲಾಖೆಯ ಭೂಮಿಯ ಲೀಸ್ ನವೀಕರಣಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿದ್ದ ಷರತ್ತುಗಳನ್ನು ಸಕಾಲದಲ್ಲಿ ಪಾಲಿಸದ ಕಾರಣ ಕುವೆಂಪು ವಿಶ್ವವಿದ್ಯಾಲಯವು ಇದೀಗ ಸುಮಾರು ₹100 ಕೋಟಿ ಪಾವತಿಸಬೇಕಾದ ಸಂಕಷ್ಟಕ್ಕೆ ಸಿಲುಕಿದೆ.

2018ರಲ್ಲಿ ನಡೆದ ಅರಣ್ಯ ಸಲಹಾ ಸಮಿತಿ (ಎಫ್‌ಎಸಿ) ಸಭೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪರವಾಗಿ ಅರಣ್ಯ ಭೂಮಿಯ ಲೀಸ್ ನವೀಕರಣಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ನವೀಕರಣಕ್ಕಾಗಿ ವಿಧಿಸಲಾಗಿದ್ದ ಹಲವು ಷರತ್ತುಗಳನ್ನು ವಿಶ್ವವಿದ್ಯಾಲಯ ಸಮರ್ಪಕವಾಗಿ ಅನುಸರಿಸದಿರುವುದು ಇದೀಗ ದೊಡ್ಡ ಆರ್ಥಿಕ ಹೊರೆ ಆಗಿದೆ.

ಕುವೆಂಪು ವಿಶ್ವವಿದ್ಯಾಲಯಕ್ಕೆ ಭದ್ರಾವತಿ ತಾಲೂಕಿನ ತಾವರೆಘಟ್ಟ ಗ್ರಾಮದ ಸರ್ವೆ ನಂ.14, ಸಿಂಗನಮನೆ ಗ್ರಾಮದ ಸರ್ವೆ ನಂ.16 ಹಾಗೂ ನರಸಿಂಹರಾಜಪುರ ತಾಲೂಕಿನ ಬೈರಾಪುರ ಗ್ರಾಮದ ಸರ್ವೆ ನಂ.37 ಸೇರಿದಂತೆ ಒಟ್ಟು 89.92 ಹೆಕ್ಟೇರ್ ಅರಣ್ಯ ಭೂಮಿಯನ್ನು ಶೈಕ್ಷಣಿಕ ಚಟುವಟಿಕೆಗಳಿಗಾಗಿ ನೀಡಲಾಗಿತ್ತು. ಈ ಭೂಮಿಯ ಬಳಕೆಗೆ ಸಂಬಂಧಿಸಿದಂತೆ ನೆಟ್ ಪ್ರಸೆಂಟ್ ವ್ಯಾಲ್ಯೂ (ಎನ್‌ಪಿವಿ) ಮೊತ್ತ ಪಾವತಿಸುವುದು ಹಾಗೂ ಭಾರತೀಯ ವನ್ಯಜೀವಿ ಮಂಡಳಿಯು ವಿಧಿಸಿದ್ದ ಎಲ್ಲಾ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿತ್ತು.

ಇದರ ಜೊತೆಗೆ 191 ಹೆಕ್ಟೇರ್ ಹಾಳಾದ ಅರಣ್ಯ ಪ್ರದೇಶದಲ್ಲಿ ಪರಿಹಾರಾತ್ಮಕ ಅರಣೀಕರಣ (ಕಾಂಪೆನ್ಸೇಟರಿ ಅಫಾರೆಸ್ಟೇಷನ್) ಕೈಗೊಳ್ಳುವುದು, ಅದರ ಸಂಪೂರ್ಣ ವೆಚ್ಚವನ್ನು ಭರಿಸುವುದು ಹಾಗೂ ಕನಿಷ್ಠ 10 ವರ್ಷಗಳ ಕಾಲ ನಿರ್ವಹಣೆ ಮಾಡುವ ಜವಾಬ್ದಾರಿಯನ್ನೂ ವಿಶ್ವವಿದ್ಯಾಲಯಕ್ಕೆ ವಹಿಸಲಾಗಿತ್ತು. ಈ ಎಲ್ಲ ಕಾರ್ಯಗಳಿಗೆ ಅಗತ್ಯವಾದ ಮೊತ್ತವನ್ನು ಕಾಂಪಾ ಖಾತೆ ಮೂಲಕ ಪಾವತಿಸಬೇಕಾಗಿತ್ತು.

ಆದರೆ ಈ ಷರತ್ತುಗಳ ಅನುಷ್ಠಾನದಲ್ಲಿ ವಿಳಂಬವಾಗಿದ್ದು, ಇದೀಗ ಅರಣ್ಯ ಇಲಾಖೆ ವಿಶ್ವವಿದ್ಯಾಲಯಕ್ಕೆ ಭಾರೀ ಮೊತ್ತದ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಿದೆ. 191 ಹೆಕ್ಟೇರ್ ಅರಣೀಕರಣ ಹಾಗೂ 10 ವರ್ಷಗಳ ನಿರ್ವಹಣೆಗೆ ₹37.14 ಕೋಟಿ, 89.92 ಹೆಕ್ಟೇರ್ ಅರಣ್ಯ ಭೂಮಿಯ ಎನ್‌ಪಿವಿ ಮೊತ್ತವಾಗಿ ₹14.34 ಕೋಟಿ ಸೇರಿದಂತೆ ವಿವಿಧ ಬಾಕಿ ಮೊತ್ತಗಳ ಜೊತೆಗೆ ನಿಯಮ ಉಲ್ಲಂಘನೆಗಾಗಿ ದಿನಕ್ಕೆ ₹3.93 ಲಕ್ಷ ದಂಡ ವಿಧಿಸಲಾಗಿದೆ.

1,243 ದಿನಗಳ ದಂಡ ಮೊತ್ತವೇ ಸುಮಾರು ₹48.86 ಕೋಟಿ ಆಗಿದ್ದು, ಅದರ ಮೇಲೂ ವಾರ್ಷಿಕ ಶೇ.12ರ ಸರಳ ಬಡ್ಡಿ ಪಾವತಿಸಬೇಕಿದೆ. ಎಲ್ಲವನ್ನೂ ಸೇರಿಸಿ ಒಟ್ಟು ₹100.36 ಕೋಟಿ ಪಾವತಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎನ್. ಹೇಮಂತ್, ಅರಣ್ಯ ಇಲಾಖೆಯಿಂದ ಡಿಮ್ಯಾಂಡ್ ನೋಟಿಸ್ ಬಂದಿದ್ದು, ಈ ವಿಷಯವನ್ನು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಅವರು ಮೇ 25ರಂದು ವಿಶ್ವವಿದ್ಯಾಲಯಕ್ಕೆ ನೋಟಿಸ್ ನೀಡಿದ್ದು, 30 ದಿನಗಳೊಳಗೆ ಅನುಸರಣೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ವಿಶ್ವವಿದ್ಯಾಲಯದ ಮುಂದಿನ ಕ್ರಮ ಏನಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Forest Department notice to Kuvempu University

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close