SUDDILIVE || RIPPONPETE
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಡಿಕೆ ತೋಟಕ್ಕೆ ಬೆಂಕಿ : 350ಕ್ಕೂ ಹೆಚ್ಚು ಅಡಿಕೆ ಮರಗಳು ಭಸ್ಮ- Fire in areca nut orchard due to electrical short circuit: More than 350 areca nut trees burnt to ashes
ವಿದ್ಯುತ್ ಲೈನ್‌ನಿಂದ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಪರಿಣಾಮವಾಗಿ ರೈತನ ಅಡಿಕೆ ತೋಟದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ, ನೂರಾರು ಮರಗಳು ಬೆಂಕಿಗಾಹುತಿಯಾದ ಘಟನೆ ಸಮೀಪದ ತಳಲೆ ಗ್ರಾಮದಲ್ಲಿ ನಡೆದಿದೆ.
ತಳಲೆ ಗ್ರಾಮದ ಸರ್ವೆ ನಂ. 60ರಲ್ಲಿ ಇರುವ ಹುಚ್ಚಾನಾಯ್ಕ್ ಅವರಿಗೆ ಸೇರಿದ ಸುಮಾರು 38 ಗುಂಟೆ ವ್ಯಾಪ್ತಿಯ ಅಡಿಕೆ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಸಂಪರ್ಕದ ಲೈನ್ ತಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ತೋಟದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಕವಾಗಿ ಹರಡಿದ ಪರಿಣಾಮ ಅಡಿಕೆ, ತೆಂಗು ಹಾಗೂ ಬಾಳೆ ಗಿಡಗಳು ಸುಟ್ಟು ಕರಕಲಾಗಿವೆ.
ಘಟನೆಯಲ್ಲಿ 350ಕ್ಕೂ ಹೆಚ್ಚು ಅಡಿಕೆ ಮರಗಳು ಸಂಪೂರ್ಣವಾಗಿ ನಾಶವಾಗಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಸ್ಥಳೀಯರು ತಕ್ಷಣವೇ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಹೆಚ್ಚಿನ ಹಾನಿಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
ಈ ಕುರಿತು ತೋಟದ ಮಾಲೀಕರು ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವೇ ಎಂಬುದು ತನಿಖೆಯಿಂದ ಹೊರಬರುವ ನಿರೀಕ್ಷೆಯಿದೆ.
ಸ್ಥಳೀಯರು ವಿದ್ಯುತ್ ಲೈನ್‌ಗಳ ನಿಯಮಿತ ಪರಿಶೀಲನೆ ಮತ್ತು ನಿರ್ವಹಣೆ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.
Fire in areca nut orchard due to electrical short circuit: More than 350 areca nut trees burnt to ashes
