SUDDILIVE || SORABA
ಮೆಸ್ಕಾಂ ಸಹಾಯಕ ಇಂಜಿನಿಯರ್ ಅಮಾನತು-MESCOM Assistant Engineer suspended
ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದೆ ಮತ್ತು ಕಂದಾಯ ವಸೂಲಾತಿಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಸೊರಬ ಉಪವಿಭಾಗದ ಉಳವಿ ಶಾಖೆಯ ಮೆಸ್ಕಾಂ ಸಹಾಯಕ ಇಂಜಿನಿಯರ್ (AE) ಇಬ್ರಾಹಿಂ ಎನ್. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಮೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ. ಅಧಿಕಾರಿ ಇಬ್ರಾಹಿಂ ಅವರು ಕರ್ತವ್ಯದಲ್ಲಿದ್ದೂ ಪ್ರಗತಿ ಪರಿಶೀಲನಾ ಸಭೆಗಳಿಗೆ ಗೈರುಹಾಜರಾಗುತ್ತಿದ್ದರು ಹಾಗೂ ಕಂದಾಯ ವಸೂಲಾತಿ ಕುಂಠಿತಗೊಳ್ಳಲು ಕಾರಣರಾಗಿದ್ದರು. ಇದರೊಂದಿಗೆ, ಕಚೇರಿಯ ಕೆಲಸ ಹಂಚಿಕೆ ಪುಸ್ತಕ ಹಾಗೂ ಸಿಬ್ಬಂದಿ ಹಾಜರಾತಿ ಪುಸ್ತಕ ನಿರ್ವಹಣೆಯಲ್ಲೂ ಲೋಪವೆಸಗಿದ್ದರು ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.
ಸಚಿವರ ಆಪ್ತ ಕಾರ್ಯದರ್ಶಿ ಜೊತೆ ಅನುಚಿತ ವರ್ತನೆ
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಆಪ್ತ ಕಾರ್ಯದರ್ಶಿ ವೀರಭದ್ರಪ್ಪ ಅವರು ವಿದ್ಯುತ್ ಸಮಸ್ಯೆ ಕುರಿತು ಕಾನ್ಫರೆನ್ಸ್ ಕರೆ ಮೂಲಕ ವಿಚಾರಿಸಿದಾಗ, “ನನಗೆ ಉಳವಿ ಶಾಖೆಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲ, ನೀವು ಏನು ಬೇಕಾದರೂ ಮಾಡಿ” ಎಂದು ಇಬ್ರಾಹಿಂ ಅನುಚಿತವಾಗಿ ಮಾತನಾಡಿ ಕರೆಯನ್ನು ಕಟ್ ಮಾಡಿದ್ದಾನೆ. ಅಲ್ಲದೆ, ಕಳೆದ ಏಪ್ರಿಲ್‌ನಲ್ಲಿ ಗಾಳಿ-ಮಳೆಗೆ 25 ವಿದ್ಯುತ್ ಕಂಬಗಳು ಉರುಳಿಬಿದ್ದಾಗಲೂ ಘಟನಾ ಸ್ಥಳಕ್ಕೆ ಭೇಟಿ ನೀಡದೆ, ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದರು ಎಂದು ಜ್ಞಾಪನಾ ಪತ್ರದಲ್ಲಿ ಆರೋಪಿಸಲಾಗಿದೆ.
ನಿನ್ನೆ ನಡೆದ ಕೆ.ಡಿ.ಪಿ ಸಭೆಯಲ್ಲೂ ಇಬ್ರಾಹಿಂ ಅವರು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಕರೆಗಳನ್ನು ಸ್ವೀಕರಿಸುತ್ತಿಲ್ಲ ಮತ್ತು ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದು ಸಚಿವರಿಗೆ ದೂರುಗಳು ಬಂದಿದ್ದವು. ಈ ಎಲ್ಲಾ ಕರ್ತವ್ಯ ಲೋಪ ಹಾಗೂ ಇಲಾಖೆಯ ಘನತೆಗೆ ಕುಂದು ಉಂಟುಮಾಡಿದ ಹಿನ್ನೆಲೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಇಬ್ರಾಹಿಂ ಅವರನ್ನು ಅಮಾನತು ಮಾಡಲಾಗಿದೆ.
MESCOM Assistant Engineer suspended

