SUDDILIVE || SHIVAMOGGA
ಮುದ್ರಾ ಲೋನ್ ಹೆಸರಿನಲ್ಲಿ ಪೊಲೀಸ್ ಅಧಿಕಾರಿಗೆ ₹3.04 ಲಕ್ಷ ವಂಚನೆ-₹3.04 lakh fraud in the name of Mudra loan: Cyber fraud on police officer
ಶಿವಮೊಗ್ಗ, ಜೂನ್ 23: ಮುದ್ರಾ ಲೋನ್ ಮಂಜೂರಾತಿಯ ಹೆಸರಿನಲ್ಲಿ ಕರೆ ಮಾಡಿ ಪೊಲೀಸ್ ಸಿಬ್ಬಂದಿಯೊಬ್ಬರಿಂದ ₹3.04 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಅಶೋಕನಗರ ನಿವಾಸಿ ಮಹದೇವಯ್ಯ ಎಂ. (58) ಎಂಬವರು ವಂಚನೆಗೆ ಒಳಗಾದವರು. ಜೂನ್ 9 ರಂದು ಅವರ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತರು, ಕರ್ನಾಟಕ ಸರ್ಕಾರದ ಮುದ್ರಾ ಲೋನ್ ಯೋಜನೆಯ ಅಧಿಕಾರಿಗಳೆಂದು ಪರಿಚಯಿಸಿಕೊಂಡು ₹25 ಲಕ್ಷ ಸಾಲ ಹಾಗೂ ₹5 ಲಕ್ಷ ಸಬ್ಸಿಡಿ ಮಂಜೂರು ಮಾಡಿಕೊಡುವುದಾಗಿ ನಂಬಿಸಿದ್ದರು.
ಆರೋಪಿತರು ಸಾಲ ಮಂಜೂರಾತಿಗೆ ಅಗತ್ಯ ದಾಖಲೆಗಳು ಹಾಗೂ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಾವತಿಸುವಂತೆ ಸೂಚಿಸಿದ್ದರು. ಇದನ್ನು ನಂಬಿದ ಮಹದೇವಯ್ಯ ಅವರು ಒಟ್ಟು ₹3,04,000 ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ.
ನಂತರವೂ ಸಾಲ ಮಂಜೂರಾಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅವರು ವಿಚಾರಿಸಿದಾಗ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಸಾಲ ಮಂಜೂರಾಗಬಹುದು ಎಂಬ ನಿರೀಕ್ಷೆಯಲ್ಲಿ ಇದುವರೆಗೆ ಕಾಯುತ್ತಿದ್ದ ಕಾರಣ ದೂರು ನೀಡಲು ತಡವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜೂನ್ 22 ರಂದು ಶಿವಮೊಗ್ಗ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 318(4) ಮತ್ತು 319(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಂಚಕರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
₹3.04 lakh fraud in the name of Mudra loan: Cyber fraud on police officer
