SUDDILIVE || SHIVAMOGGA
ಹೆಲ್ಮೆಟ್ ಧರಿಸದ ಯುವಕನ ಜೀವ ಉಳಿಸಿದ ಬಿಜೆಪಿ ಮುಖಂಡ-BJP worker saves life of youth who was not wearing helmet
ಶಿವಮೊಗ್ಗ, ಜೂನ್ 20: ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಸಾರ್ವಜನಿಕರ ನೆರವು ಸಿಗದ ವೇಳೆ ಬಿಜೆಪಿ ಮುಖಂಡರೊಬ್ಬರು ಮಾನವೀಯತೆ ಮೆರೆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶರಾವತಿ ನಗರ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಸುಮಾರು 24 ವರ್ಷದ ಯುವಕ ಸ್ಪ್ಲೆಂಡರ್ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಸ್ಕೂಟಿಯೊಂದಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ವೇಳೆ ಹೆಲ್ಮೆಟ್ ಧರಿಸದಿದ್ದ ಕಾರಣ ಯುವಕ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗಳಾಗಿದ್ದು, ತಲೆ ಹಾಗೂ ಕಿವಿಯಿಂದ ರಕ್ತಸ್ರಾವವಾಗುತ್ತಿತ್ತು.
ಅಪಘಾತದ ಬಳಿಕ ಸ್ಥಳದಲ್ಲಿದ್ದ ಸಾರ್ವಜನಿಕರು ಸಹಾಯಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಬೊಮ್ಮನಕಟ್ಟೆ ನಿವಾಸಿ ಬಿ.ಆರ್. ಸಂತೋಷ್ ನಾಯಕ್ ಅವರು ತಮ್ಮ ವಾಹನ ನಿಲ್ಲಿಸಿ ಗಾಯಾಳುವನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಮಯೋಚಿತ ಚಿಕಿತ್ಸೆಯಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಗಾಯಾಳುವಿನ ಬಳಿ ಸುಮಾರು ನಾಲ್ಕು ಲಕ್ಷ ರೂ. ಮೌಲ್ಯದ ಬಂಗಾರದ ಸರ ಹಾಗೂ ಒಂದು ಲಕ್ಷ ರೂ.ಗೂ ಅಧಿಕ ಮೌಲ್ಯದ ಮೊಬೈಲ್ ಫೋನ್ ಇದ್ದ ಹಿನ್ನೆಲೆಯಲ್ಲಿ ಅವುಗಳ ಸುರಕ್ಷತೆಗಾಗಿ ಆಟೋ ರಿಕ್ಷಾ ಸಂಖ್ಯೆ ಮತ್ತು ಬಂಗಾರದ ಸರದ ಫೋಟೋಗಳನ್ನು ತಮ್ಮ ಮೊಬೈಲ್‌ನಲ್ಲಿ ದಾಖಲಿಸಿಕೊಂಡಿರುವುದಾಗಿ ಸಂತೋಷ್ ನಾಯಕ್ ತಿಳಿಸಿದ್ದಾರೆ.
ಬಿ.ಆರ್. ಸಂತೋಷ್ ನಾಯಕ್ ಅವರು ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ಅಧ್ಯಕ್ಷರಾಗಿದ್ದು, ಶಿವಮೊಗ್ಗ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾದ ಉಪಾಧ್ಯಕ್ಷರಾಗಿದ್ದಾರೆ. ಈ ಘಟನೆ ರಸ್ತೆ ಸುರಕ್ಷತೆ ಹಾಗೂ ಹೆಲ್ಮೆಟ್ ಧರಿಸುವ ಅಗತ್ಯತೆಯ ಬಗ್ಗೆ ಮತ್ತೊಮ್ಮೆ ಜಾಗೃತಿ ಮೂಡಿಸಿದೆ.
