SUDDILIVE || SHIVAMOGGA
ರೈಲಿನಲ್ಲಿ ಮರೆತು ಬಿಟ್ಟಿದ್ದ ಮೊಬೈಲ್ ಪತ್ತೆ;-Forgotten mobile found in train;
ಶಿವಮೊಗ್ಗ, ಜೂನ್ 19: ಬೆಂಗಳೂರು–ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ಸುಮಾರು ₹10 ಸಾವಿರ ಮೌಲ್ಯದ ಮೊಬೈಲ್ ಫೋನ್ ಅನ್ನು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.
ಶಿವಮೊಗ್ಗದ ನಿವಾಸಿ ಪ್ರೀತಮ್ ಅವರು ಜೂನ್ 16ರಂದು ಬೆಂಗಳೂರು–ತಾಳಗುಪ್ಪ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16227) ರೈಲಿನ ಎಸ್-7 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ತಮ್ಮ ಮೊಬೈಲ್ ಫೋನ್ ಅನ್ನು ಸೀಟಿನಲ್ಲೇ ಮರೆತು ಇಳಿದಿದ್ದರು. ಬಳಿಕ ಮೊಬೈಲ್ ಕಳೆದುಹೋದ ಬಗ್ಗೆ ಆರ್‌ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು.
ಮಾಹಿತಿ ಪಡೆದ ತಕ್ಷಣ ಕಾರ್ಯಪ್ರವೃತ್ತರಾದ ಶಿವಮೊಗ್ಗ ಆರ್‌ಪಿಎಫ್ ಅಧಿಕಾರಿಗಳು ಹಾಗೂ ರೈಲ್ವೆ ಸಿಬ್ಬಂದಿ ಬೋಗಿಯಲ್ಲಿ ತಪಾಸಣೆ ನಡೆಸಿ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿದರು.
ನಂತರ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿ, ಮೊಬೈಲ್ ಫೋನ್ ಅನ್ನು ಅದರ ಮಾಲೀಕರಾದ ಪ್ರೀತಮ್ ಅವರಿಗೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕರ ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಿ ಮರಳಿಸುವಲ್ಲಿ ಆರ್‌ಪಿಎಫ್ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
