SUDDILIVE || SHIVAMOGGA
ಬಸ್ ಪ್ರಯಾಣದಲ್ಲಿ ಮಹಿಳೆಯ ಬ್ಯಾಗ್‌ನಿಂದ ₹3.15 ಲಕ್ಷ ಮೌಲ್ಯದ ಚಿನ್ನಾಭರಣ ಕಳವು-Gold jewellery worth Rs 3.15 lakh stolen from woman's bag during bus journey
ಜೂನ್ 30: ಬಸ್ ಪ್ರಯಾಣದ ವೇಳೆ ಮಹಿಳೆಯೊಬ್ಬರ ಬ್ಯಾಗ್‌ನಿಂದ ಸುಮಾರು ₹3.15 ಲಕ್ಷ ಮೌಲ್ಯದ ಚಿನ್ನಾಭರಣ, ₹20 ಸಾವಿರ ನಗದು ಹಾಗೂ ಪ್ರಮುಖ ದಾಖಲೆಗಳು ಕಳ್ಳತನವಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮೈಸೂರಿನ ಪೊಲೀಸ್ ಲೇಔಟ್ ನಿವಾಸಿ ದಾಕ್ಷಾಯಿಣಿ (59) ಅವರು ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರಾಂಪುರಕ್ಕೆ ಬಂದಿದ್ದರು. ಬಳಿಕ ಸಾಸ್ವೆಹಳ್ಳಿಯಿಂದ ಹೊನ್ನಾಳಿ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು.
ಮಧ್ಯಾಹ್ನ ಶಿವಮೊಗ್ಗ ಬಸ್ ನಿಲ್ದಾಣದ ಸಿಗ್ನಲ್ ಬಳಿ ಬಸ್‌ನಿಂದ ಇಳಿದ ಅವರು, ಅಲ್ಲಿಂದ ಆಟೋದಲ್ಲಿ ವಿನೋಬನಗರ ಪೊಲೀಸ್ ಚೌಕಿ ಬಳಿ ತೆರಳಿದ್ದರು. ಆಟೋದಿಂದ ಬ್ಯಾಗ್ ಇಳಿಸಿ ಪರಿಶೀಲಿಸಿದಾಗ ಅದರ ಜಿಪ್ ತೆರೆದಿರುವುದು ಗಮನಕ್ಕೆ ಬಂದಿದೆ. ನಂತರ ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ, ನಗದು ಹಾಗೂ ಇತರೆ ವಸ್ತುಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳ್ಳತನವಾಗಿರುವ ವಸ್ತುಗಳಲ್ಲಿ 14 ಗ್ರಾಂ ತೂಕದ ಚಿನ್ನದ ಸರ, 10 ಗ್ರಾಂ ತೂಕದ 5 ಜೊತೆ ಕಿವಿಯೋಲೆಗಳು, 9 ಗ್ರಾಂ ತೂಕದ ಎರಡು ಮಕ್ಕಳ ಬ್ರೇಸ್‌ಲೆಟ್‌ಗಳು, 6 ಗ್ರಾಂ ತೂಕದ ಪೆಂಡೆಂಟ್, ₹20 ಸಾವಿರ ನಗದು, ಬ್ಯಾಂಕ್ ಲಾಕರ್ ಕೀ, ಎಟಿಎಂ ಕಾರ್ಡ್ ಹಾಗೂ ಇತರೆ ಪ್ರಮುಖ ದಾಖಲೆಗಳು ಸೇರಿವೆ.
ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಬ್ಯಾಗ್ ಅನ್ನು ಸೀಟಿನ ಕೆಳಗೆ ಇಟ್ಟಿದ್ದ ಸಂದರ್ಭದಲ್ಲೇ ಕಳ್ಳರು ಕೃತ್ಯ ಎಸಗಿರಬಹುದು ಎಂದು ದಾಕ್ಷಾಯಿಣಿ ಅವರು ನೀಡಿರುವ ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Gold jewellery worth Rs 3.15 lakh stolen from woman's bag during bus journey
