SUDDILIVE | MALURU
ಮಹಿಷಿ ಉತ್ತರಾಧಿ ಮಠದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಹಲಗಾರತಿ ನಾಪತ್ತೆ-Jewellery worth crores of rupees goes missing from Mahishi Uttaradhi Mutt
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಮಹಿಷಿ ಉತ್ತರಾಧಿ ಮಠದಲ್ಲಿ ಮತ್ತೊಮ್ಮೆ ಕಳವು ಪ್ರಕರಣ ಬೆಳಕಿಗೆ ಬಂದಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ತುಂಗಾ ನದಿಯ ದಡದಲ್ಲಿರುವ ಮಹಿಷಿ ಉತ್ತರಾಧಿ ಮಠವು ಉತ್ತರಾಧಿ ಮಠದ ಅತ್ಯಂತ ಪವಿತ್ರ ಶಾಖೆಗಳಲ್ಲಿ ಒಂದಾಗಿದ್ದು, ಮಧ್ವ ಪರಂಪರೆಯ ಪ್ರಖ್ಯಾತ ಯತಿಗಳಲ್ಲಿ ಒಬ್ಬರಾದ ಉತ್ತರಾಧಿ ಮಠದ 26ನೇ ಪೀಠಾಧಿಪತಿ ಶ್ರೀ ಸತ್ಯಸಂಧ ತೀರ್ಥರ ಮೂಲ ಬೃಂದಾವನ ಇಲ್ಲಿರುವುದು ಈ ಮಠದ ವಿಶೇಷತೆ. ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುವ ಈ ಧಾರ್ಮಿಕ ಕೇಂದ್ರದಲ್ಲಿ ನಡೆದಿರುವ ಕಳವು ಪ್ರಕರಣ ಭಕ್ತರಲ್ಲಿ ಆತಂಕ ಮೂಡಿಸಿದೆ.
ಮಠದ ಮೂಲಗಳ ಪ್ರಕಾರ, ಸುಮಾರು 750 ಗ್ರಾಂ ತೂಕದ ಚಿನ್ನದ ಹಲಗಾರತಿಗಳು ಕಳುವಾಗಿವೆ. ಒಂದೊಂದು ಹಲಗಾರತಿ ಸುಮಾರು 50 ಗ್ರಾಂ ಚಿನ್ನದಿಂದ ನಿರ್ಮಿತವಾಗಿದ್ದು, ಒಟ್ಟು 15 ಹಲಗಾರತಿಗಳು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಪ್ರಾಥಮಿಕ ಅಂದಾಜಿನಂತೆ ಕಳುವಾಗಿರುವ ಚಿನ್ನಾಭರಣದ ಮೌಲ್ಯ ಒಂದು ಕೋಟಿಗೂ ಅಧಿಕವಾಗಿರಬಹುದು ಎಂದು ಹೇಳಲಾಗುತ್ತಿದೆ.
ಗಮನಾರ್ಹ ಸಂಗತಿಯೆಂದರೆ, ಇದೇ ಮಠದಲ್ಲಿ ಕಳೆದ ವರ್ಷ ಏಪ್ರಿಲ್ 5ರಂದು ದರೋಡೆ ಪ್ರಕರಣ ನಡೆದಿತ್ತು. ಮಠದಲ್ಲಿ ಸುಮಾರು 300 ಕೋಟಿ ರೂ. ಹಣ ಸಂಗ್ರಹಿಸಲಾಗಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ 12 ರಿಂದ 15 ಮಂದಿಯ ತಂಡ ದರೋಡೆಗೆ ಯತ್ನಿಸಿತ್ತು. ಆ ಸಂದರ್ಭದಲ್ಲಿ ನಗದು, ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಸೇರಿದಂತೆ ಸುಮಾರು 1.16 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕೊಂಡೊಯ್ಯಲಾಗಿತ್ತು. ಪ್ರಕರಣದ ತನಿಖೆ ವೇಳೆ ಪ್ರಮುಖ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದರು.
ಆ ಘಟನೆಯ ಬಳಿಕ ಮಠದ ಭದ್ರತೆ ಹೆಚ್ಚಿಸಲು ಹಾಗೂ ಸುತ್ತ ಕಾಂಪೌಂಡ್ ನಿರ್ಮಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ ಭದ್ರತಾ ವ್ಯವಸ್ಥೆಯಲ್ಲಿ ಇನ್ನೂ ಲೋಪಗಳಿರುವುದೇ ಈ ಕಳುವಿಗೆ ಕಾರಣವೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಕಳುವಿನ ಹಿಂದೆ ಹೊರಗಿನಿಂದ ಬಂದ ಕಳ್ಳರ ಕೈವಾಡವಿದೆಯೇ ಅಥವಾ ಮಠದ ಒಳವಲಯದವರ ಪಾತ್ರವಿದೆಯೇ ಎಂಬ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟ ಉತ್ತರ ಸಿಗಬೇಕಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತ ದೂರು ದಾಖಲಾಗುವ ಪ್ರಕ್ರಿಯೆ ನಡೆಯುತ್ತಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
Jewellery worth crores of rupees goes missing from Mahishi Uttaradhi Mutt

