ಕಸಾಪ ಅಧ್ಯಕ್ಷ ಡಿ. ಮಂಜುನಾಥಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ-Kempegowda Award presented to Kasapa President D. Manjunath

 SUDDILIVE || SHIVAMOGGA

ಕಸಾಪ ಅಧ್ಯಕ್ಷ ಡಿ. ಮಂಜುನಾಥಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ-Kempegowda Award presented to Kasapa President D. Manjunath    

Kempegowda, award

ಶಿವಮೊಗ್ಗ, ಜೂ. 27: ಸುಮಾರು 500 ವರ್ಷಗಳ ಹಿಂದೆಯೇ ನಗರವನ್ನು ಹೇಗೆ ಯೋಜನಾಬದ್ಧವಾಗಿ ನಿರ್ಮಿಸಬೇಕು ಹಾಗೂ ರಾಜಧಾನಿಯ ಮಾದರಿ ಹೇಗಿರಬೇಕು ಎಂಬ ದೂರದೃಷ್ಟಿಯನ್ನು ತೋರಿದ ನಾಡಪ್ರಭು ಕೆಂಪೇಗೌಡರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.

ನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಜಿಲ್ಲಾ ಒಕ್ಕಲಿಗರ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಶನಿವಾರ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಕ್ಕಲಿಗ ಸಮಾಜದ ವಿವಿಧ ಉಪಜಾತಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಮಹತ್ವದ ಕಾರ್ಯವನ್ನು ಆದಿಚುಂಚನಗಿರಿ ಮಠ ಕೈಗೊಂಡಿದ್ದು, ಪ್ರಸನ್ನನಾಥ ಸ್ವಾಮೀಜಿ ಈ ಕಾರ್ಯಕ್ಕೆ ಮುಂಚೂಣಿಯ ಸಂಘಟಕರಾಗಿ ಶ್ರಮಿಸುತ್ತಿದ್ದಾರೆ. ಸಮುದಾಯದ ಏಕತೆ ಹಾಗೂ ಸಂಘಟನಾ ಬಲವರ್ಧನೆಗೆ ಸಮುದಾಯ ಭವನ ನಿರ್ಮಾಣ ಅತ್ಯಂತ ಅಗತ್ಯವಾಗಿದ್ದು, ಅದರ ನಿರ್ಮಾಣಕ್ಕೆ ಸಮುದಾಯದ ಜನರು ಉದಾರವಾಗಿ ಧನಸಹಾಯ ನೀಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ ಅವರು ತಮ್ಮ ಕ್ರಿಯಾಶೀಲತೆಯ ಮೂಲಕ ಕನ್ನಡದ ಸೇವೆ ಮಾಡುತ್ತಿದ್ದು, "ಸಾಹಿತ್ಯ ಹುಣ್ಣಿಮೆ"ಯಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ. ಇಂತಹ ವ್ಯಕ್ತಿತ್ವಕ್ಕೆ ಕೆಂಪೇಗೌಡ ಪ್ರಶಸ್ತಿ ನೀಡಿರುವುದು ಸಂತಸದ ಸಂಗತಿ ಎಂದು ಹೇಳಿದರು.

ರಾಜ್ಯದ ಮುಖ್ಯಮಂತ್ರಿಯೂ ನಮ್ಮ ಸಮುದಾಯದವರಾಗಿದ್ದು, ದೇಶವನ್ನು ಎಲ್ಲಿಂದ ನೋಡಬೇಕು ಎಂದರೆ ಬೆಂಗಳೂರಿನಿಂದ ನೋಡಬೇಕು ಎನ್ನುವ ಮಟ್ಟಕ್ಕೆ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.

ಕೆಂಪೇಗೌಡ ಪ್ರಶಸ್ತಿ ಸ್ವೀಕರಿಸಿದ ಡಿ. ಮಂಜುನಾಥ

ಕೆಂಪೇಗೌಡ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ, ಸಾಹಿತ್ಯ ಹುಣ್ಣಿಮೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ಅನೇಕ ಕುಹಕದ ಮಾತುಗಳನ್ನು ಕೇಳಬೇಕಾಯಿತು. ಆದರೆ ಆ ಅವಮಾನಗಳೇ ಮತ್ತಷ್ಟು ಸೃಜನಶೀಲ ಸಂಘಟನೆಗಳನ್ನು ರೂಪಿಸಲು ಪ್ರೇರಣೆ ನೀಡಿದವು. ಸಹನೆ, ಶ್ರದ್ಧೆ ಮತ್ತು ಬದ್ಧತೆ ನಮ್ಮನ್ನು ಸದಾ ಕಾಪಾಡುತ್ತವೆ ಎಂಬ ಅನುಭವ ನಮಗಿದೆ ಎಂದರು.

ಅಭಿವೃದ್ಧಿ ಎಂದರೆ ಕೇವಲ ಕಟ್ಟಡ, ರಸ್ತೆ ಹಾಗೂ ಸೇತುವೆಗಳ ನಿರ್ಮಾಣ ಮಾತ್ರವಲ್ಲ. ಸಾಧಕರಾಗಿ ಹೊರಹೊಮ್ಮುವ ಮಕ್ಕಳು ಕೂಡ ದೇಶದ ಅಭಿವೃದ್ಧಿಯ ಭಾಗವಾಗಿದ್ದಾರೆ. ಮಕ್ಕಳಿಗೆ ಮಾತೃಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವಲ್ಲಿ ನಾವು ಹಿಂದುಳಿದಿದ್ದು, ಕನ್ನಡವನ್ನು ಉಪೇಕ್ಷಿಸುವುದರಿಂದ ಮಕ್ಕಳಲ್ಲಿ ಸೃಜನಶೀಲ ಚಿಂತನೆಗಳು ಕುಂಠಿತವಾಗುತ್ತಿವೆ ಎಂದು ವಿಷಾದಿಸಿದರು.

"ಕನ್ನಡಕ್ಕಾಗಿ ಕೈಎತ್ತು, ನಿನ್ನ ಕೈ ಕಲ್ಪವೃಕ್ಷ ಆಗಲಿದೆ" ಎಂಬ ಸಂದೇಶವನ್ನು ಅನುಷ್ಠಾನಗೊಳಿಸುವತ್ತ ಎಲ್ಲರೂ ಕಂಕಣಬದ್ಧರಾಗಬೇಕು. ಕಳೆದ ಎರಡು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್‌ಗೆ ಯಾವುದೇ ಅನುದಾನ ದೊರೆಯದಿದ್ದರೂ ಜಿಲ್ಲೆಯ ಸಾಹಿತ್ಯಾಸಕ್ತರ ಸಹಕಾರದಿಂದ ಕನ್ನಡ ಪರ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುತ್ತಿದ್ದೇವೆ ಎಂದು ಹೇಳಿದರು.

ಕೆಂಪೇಗೌಡರ ದೂರದೃಷ್ಟಿ ಸ್ಮರಣೀಯ: ರಮೇಶ್ ಹೆಗಡೆ

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನಾಬದ್ಧ ನಗರದ ಭದ್ರಬುನಾದಿಯನ್ನು ಹಾಕಿದ ಕೆಂಪೇಗೌಡರ ಕೊಡುಗೆ ಸ್ಮರಣೀಯವಾಗಿದೆ. ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ನಗರ ಯೋಜನೆಗೆ ಅವರು ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ಕೆಂಪೇಗೌಡರು ನಿರ್ಮಿಸಿದ್ದ ಕೆರೆ-ಕಟ್ಟೆಗಳ ಇಂದಿನ ಪರಿಸ್ಥಿತಿಯನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಂದು ಬರ ಪರಿಸ್ಥಿತಿಯಿಂದ ಜನರು ತತ್ತರಿಸುತ್ತಿದ್ದು, ಇಂತಹ ಸಂಕಷ್ಟ ಎದುರಾಗಬಾರದು ಎಂಬ ದೂರದೃಷ್ಟಿಯಿಂದಲೇ ಅಂದಿನ ಕಾಲದಲ್ಲೇ ಕೆರೆ-ಕಟ್ಟೆಗಳ ನಿರ್ಮಾಣಕ್ಕೆ ಅವರು ಆದ್ಯತೆ ನೀಡಿದ್ದರು ಎಂದು ಹೇಳಿದರು.

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಂಶುಮಂತ್, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿರಿಬೈಲ್ ಧರ್ಮೇಶ್, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಪ್ರಗತಿಪರ ಕೃಷಿಕೆ ಆಶಾ ಶೇಷಾದ್ರಿ, ಮಲೆನಾಡು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಎನ್. ರಾಮಕೃಷ್ಣ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎ.ಬಿ. ಸಂಜಯ್, ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ, ಶಶಾಂಕ್ ಗೌಡ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಒಕ್ಕಲಿಗ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿದ್ದರು.

Kempegowda Award presented to Kasapa President D. Manjunath    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close