ಈಶ್ವರಪ್ಪನವರ ಖರೀದಿ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಲಿ ಎಂದ ಶಾಸಕ ಆರಗ-MLA Araga demands clarification on Eshwarappa's purchase statement

SUDDILIVE || SHIVAMOGGA

ಈಶ್ವರಪ್ಪನವರ ಖರೀದಿ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಲಿ ಎಂದ ಶಾಸಕ ಆರಗ-MLA Araga demands clarification on Eshwarappa's purchase statement    

Araga, demands

ಶಿವಮೊಗ್ಗ: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಒಳಗೆ ಶಿಸ್ತು ಕ್ರಮದ ಚರ್ಚೆ ತೀವ್ರಗೊಂಡಿರುವ ನಡುವೆಯೇ, ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಮಾಡಿರುವ ಆರೋಪಗಳಿಗೆ ಶಾಸಕ ಆರಗ ಜ್ಞಾನೇಂದ್ರ ಸ್ಪಷ್ಟನೆ ಕೆಳಿದ್ದಾರೆ.  ಅಡ್ಡಮತದಾನ ಪ್ರಕರಣದ ಕುರಿತು ಪಕ್ಷದ ಸಮಿತಿ ತನಿಖೆ ನಡೆಸುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, “ಅಡ್ಡಮತದಾನದ ಬಗ್ಗೆ ಒಂದು ಸಮಿತಿ ರಚಿಸಲಾಗಿದೆ. ಆ ಸಮಿತಿ ವರದಿ ಸಲ್ಲಿಸಲಿದೆ. ನಮ್ಮಂತಹ ಶಿಸ್ತಿನ ಪಕ್ಷದಲ್ಲಿ ಇಂತಹ ಅಶಿಸ್ತನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಖಂಡಿತವಾಗಿ ತಪ್ಪು ನಡೆದಿದೆ, ಪಕ್ಷಕ್ಕೆ ದ್ರೋಹವಾಗಿದೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ನಾನು ಸ್ವತಃ ಕ್ರಮವಾಗಬೇಕು ಎಂದು ಒತ್ತಾಯ ಮಾಡುತ್ತೇನೆ” ಎಂದು ಹೇಳಿದರು.

ಪಕ್ಷದೊಳಗಿನ ಕೆಲ ನಾಯಕರ ವಿರುದ್ಧ ಅಡ್ಡಮತದಾನದ ಆರೋಪ ಕೇಳಿಬರುತ್ತಿರುವ ಬಗ್ಗೆ ಪ್ರಶ್ನಿಸಿದಾಗ, “ಈಗ ಅಂತೆ-ಕಂತೆಗಳ ಆಧಾರದ ಮೇಲೆ ಯಾರ ಮೇಲಾದರೂ ಆರೋಪ ಮಾಡಬಹುದು. ನನ್ನ ಮೇಲೆಯೂ ಹೇಳಬಹುದು. ಊಹಾಪೋಹಗಳ ಆಧಾರದ ಮೇಲೆ ಮಾತನಾಡಲು ಸಾಧ್ಯವಿಲ್ಲ. ತನಿಖೆ ವರದಿ ಬಂದ ಬಳಿಕ ಸತ್ಯ ಹೊರಬರುತ್ತದೆ” ಎಂದರು.

ಈ ವೇಳೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾಡಿರುವ ‘ಖರೀದಿ ರಾಜಕೀಯ’ದ ಆರೋಪಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, “ಈಶ್ವರಪ್ಪ ಅವರೇ ವಿವರ ನೀಡಬೇಕು. ಎಷ್ಟು ಖರೀದಿ ನಡೆದಿದೆ? ಯಾರನ್ನು ಖರೀದಿ ಮಾಡಿದ್ದಾರೆ? ಎಷ್ಟು ಹಣ ಕೊಟ್ಟಿದ್ದಾರೆ? ಯಾರಿಗೆ ಕೊಟ್ಟಿದ್ದಾರೆ? ಈ ಎಲ್ಲ ವಿವರಗಳನ್ನು ಅವರು ಬಹಿರಂಗಪಡಿಸಬೇಕು” ಎಂದು ಸವಾಲು ಹಾಕಿದರು.

ಆಪರೇಷನ್ ಕಮಲದ ವೇಳೆ ಬಿಜೆಪಿ 17 ಶಾಸಕರನ್ನು ಸೆಳೆದಿತ್ತು ಎಂಬ ಈಶ್ವರಪ್ಪ ಹೇಳಿಕೆಯನ್ನು ಉಲ್ಲೇಖಿಸಿದಾಗ, ಶಾಸಕರು, “ಈಶ್ವರಪ್ಪ ಅವರು ಪಕ್ಷದಲ್ಲಿದ್ದಾಗಲೇ ಆ 17 ಜನ ಬಿಜೆಪಿ ಸೇರಿದ್ದರು. ಆಗ ಅವರು ಹೇಳುತ್ತಿದ್ದ ಮಾತುಗಳು ಬೇರೆ, ಈಗ ಹೇಳುತ್ತಿರುವುದು ಬೇರೆ. ಅವರು ಪಕ್ಷದಿಂದ ಹೊರಗೆ ಹೋದ ಬಳಿಕ ಮತ್ತೆ ಪಕ್ಷಕ್ಕೆ ಬರುತ್ತೇನೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಹೊರಗಿನಿಂದಲೇ ಪಕ್ಷಕ್ಕೆ ಹಾನಿಯಾಗುವ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಈಶ್ವರಪ್ಪ ತಮ್ಮ ಹೇಳಿಕೆಯನ್ನು ಪುನರ್‌ಪರಿಶೀಲನೆ ಮಾಡಬೇಕು ಎಂದ ಶಾಸಕರು “ಅವರು ಹಿರಿಯ ನಾಯಕರು. ಅವರಿಗೆ ನಾನು ವಿನಂತಿ ಮಾಡುತ್ತೇನೆ. ಪಕ್ಷಕ್ಕೆ ಹಾನಿಯಾಗುವ ರೀತಿಯ ಹೇಳಿಕೆಗಳನ್ನು ನೀಡುವ ಮೊದಲು ತಮ್ಮ ಮಾತುಗಳನ್ನು ಪುನರ್‌ಪರಿಶೀಲನೆ ಮಾಡಲಿ” ಎಂದರು.

ಪಕ್ಷಕ್ಕೆ ಮರಳುವ ಕುರಿತು ಈಶ್ವರಪ್ಪ ವ್ಯಕ್ತಪಡಿಸಿರುವ ಆಸಕ್ತಿ ಕುರಿತು ಮಾತನಾಡಿದ ಆರಗ, “ಅವರು ಪಕ್ಷಕ್ಕೆ ಬಂದರೆ ನನಗೆ ಖುಷಿಯೇ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿಯ ಹೇಳಿಕೆಗಳನ್ನು ಹೊರಗಿನಿಂದ ನೀಡುವುದರಲ್ಲಿ ಅರ್ಥವಿಲ್ಲ” ಎಂದು ಹೇಳಿದರು.

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರೋಕ್ಷ ಎಚ್ಚರಿಕೆ ನೀಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಆರ್‌ಎಸ್‌ಎಸ್ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಆರ್‌ಎಸ್‌ಎಸ್ ಬಗ್ಗೆ ಹೆಚ್ಚು ಚರ್ಚೆ ಮಾಡಿದರೆ ಮುಸ್ಲಿಂ ಮತಗಳು ಒಗ್ಗೂಡುತ್ತವೆ ಎಂಬ ರಾಜಕೀಯ ತಂತ್ರಗಾರಿಕೆಯ ಹೊರತಾಗಿ ಇದರಲ್ಲಿ ಬೇರೆ ಏನೂ ಇಲ್ಲ” ಸಂಸದ ರಮೇಶ್ ಜಿಗಜಿಣಗಿ ಅವರ ವಿಡಿಯೋ ವೈರಲ್ ಬಗ್ಗೆ ಅವರೆ ಸ್ಪಷ್ಟಪಡಿಸಿದ್ದಾರೆ. ಇದರ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದು ಹೇಳಿದರು.

ಕೊನೆಗೆ ಮತ್ತೆ ಈಶ್ವರಪ್ಪ ಅವರ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಖರೀದಿ ಮಾಡಿದ್ದೇವೆ ಎಂದು ಹೇಳುವುದು ಸುಲಭ. ಆದರೆ ಯಾರು ಎಷ್ಟು ಹಣ ಪಡೆದರು, ಯಾರು ಹಣ ನೀಡಿದರು ಎಂಬುದನ್ನು ಸಾಬೀತುಪಡಿಸಬೇಕು. ಈಶ್ವರಪ್ಪ ಅವರು ಮಂತ್ರಿಯಾಗಿದ್ದರು. ಅವರಿಗೆ ಎಲ್ಲ ಲೆಕ್ಕ ಗೊತ್ತಿದ್ದರೆ ಅದನ್ನು ಬಹಿರಂಗಪಡಿಸಲಿ” ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನ, ಪಕ್ಷದೊಳಗಿನ ಅಸಮಾಧಾನ ಹಾಗೂ ಈಶ್ವರಪ್ಪನವರ ಆರೋಪ ರಾಜ್ಯ ಬಿಜೆಪಿ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಪಕ್ಷದ ಸಮಿತಿ ವರದಿ ಬಳಿಕ ಮುಂದಿನ ಬೆಳವಣಿಗೆಗಳು ಯಾವ ದಿಕ್ಕು ಪಡೆಯಲಿವೆ ಎಂಬುದು ಕುತೂಹಲ ಮೂಡಿಸಿದೆ.

MLA Araga demands clarification on Eshwarappa's purchase statement

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close