SUDDILIVE || SHIVAMOGGA
ಶಿವಮೊಗ್ಗದಲ್ಲಿ ಮೊಹರಂ ಆಚರಣೆ: ಇಮಾಮ್ ಹುಸೇನ್ ತ್ಯಾಗ ಸ್ಮರಣೆ, ಶಾಂತಿ-ಸೌಹಾರ್ದಕ್ಕೆ ಪ್ರಾರ್ಥನೆ-Muharram celebration in Shivamogga: Commemoration of Imam Hussain's sacrifice, prayers for peace and harmony
ಶಿವಮೊಗ್ಗ: ಮೊಹರಂ ಹಬ್ಬದ ಹತ್ತನೇ ದಿನವಾದ ಆಶೂರಾ ಅಂಗವಾಗಿ ಶಿವಮೊಗ್ಗ ನಗರದಲ್ಲಿ ಇಮಾಮ್ ಹುಸೇನ್ (ಅ.ಸ.) ಹಾಗೂ ಹಜ್ರತ್ ಅಬ್ಬಾಸ್ ಅಲಂಬರ್ದಾರ್ (ಅ.ಸ.) ಅವರ ಸ್ಮರಣಾರ್ಥ ಭಕ್ತಿಭಾವದಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಜಬೀದಿಯ ಮೂಲಕ ಆಲಂ-ಎ-ಪಾಕ್ ಉತ್ಸವ ಮೆರವಣಿಗೆ ನಡೆಸಿ, ರಾಮಣ್ಣ ಶೆಟ್ಟಿ ಪಾರ್ಕ್ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೈಯದ್ ಜೈನುಲ್ ಮದಾರ್ ಶಾ ಹುಸೇನಿ ಮದಾರಿ ಅವರು, ಮೊಹರಂ ದಿನವು ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ (ಅ.ಸ.) ಅವರ ತ್ಯಾಗವನ್ನು ಸ್ಮರಿಸುವ ಪವಿತ್ರ ದಿನವಾಗಿದೆ ಎಂದು ತಿಳಿಸಿದರು.
ಕ್ರಿ.ಶ. 680ರಲ್ಲಿ ಕರ್ಬಲಾ ಯುದ್ಧದಲ್ಲಿ ಅನ್ಯಾಯದ ವಿರುದ್ಧ ಹೋರಾಡಿದ ಇಮಾಮ್ ಹುಸೇನ್ (ಅ.ಸ.) ಅವರು ಮೂರು ದಿನ ನೀರು ಮತ್ತು ಆಹಾರವಿಲ್ಲದ ಸಂಕಷ್ಟದಲ್ಲಿದ್ದರೂ ಸತ್ಯ ಹಾಗೂ ನ್ಯಾಯದ ಮಾರ್ಗವನ್ನು ಬಿಡದೆ ತಮ್ಮ ಕುಟುಂಬದವರು ಮತ್ತು ಅನುಯಾಯಿಗಳೊಂದಿಗೆ ಹುತಾತ್ಮರಾದರು. ಅವರ ತ್ಯಾಗವು ನ್ಯಾಯ, ಸತ್ಯ ಮತ್ತು ಧರ್ಮದ ಪ್ರತೀಕವಾಗಿದೆ ಎಂದು ಹೇಳಿದರು.
ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿರುವ ಶಹನಶಾ ಸಂದಲ್ ಸವಾರಿ ಪರಂಪರೆಗೆ ಸುಮಾರು 350 ವರ್ಷಗಳ ಇತಿಹಾಸವಿದ್ದು, ಈ ಪವಿತ್ರ ಸ್ಥಳಕ್ಕೆ ಸಾವಿರಾರು ಭಕ್ತರು ಹರಕೆ ತೀರಿಸಲು ಆಗಮಿಸುತ್ತಾರೆ ಎಂದು ತಿಳಿಸಿದರು.
ಮೊಹರಂ ಆಚರಣೆಯಲ್ಲಿ ಜಾತಿ-ಧರ್ಮದ ಭೇದಭಾವವಿಲ್ಲದೆ ಹಿಂದೂ-ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯಗಳ ಜನರು ಭಾಗವಹಿಸಿ ಭಾವೈಕ್ಯತೆ ಮೆರೆದರು. ವಿಶ್ವದಲ್ಲಿ ಶಾಂತಿ ನೆಲೆಸಲಿ, ಭಾರತ ದೇಶ ಅಭಿವೃದ್ಧಿ ಹೊಂದಲಿ ಹಾಗೂ ಎಲ್ಲರಿಗೂ ಸುಖ, ಆರೋಗ್ಯ ಮತ್ತು ಸಮೃದ್ಧಿ ಲಭಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಎಲ್ಲ ಜನತೆಗೆ ದೇವರ ಆಶೀರ್ವಾದ, ಉತ್ತಮ ಆರೋಗ್ಯ ಹಾಗೂ ಭಾಗ್ಯ ದೊರೆಯಲಿ ಎಂದು ಹಾರೈಸಲಾಯಿತು.

