ಸಿಇಸಿ ಶಿವಮೊಗ್ಗ ಭೇಟಿ ವಿರೋಧಿಸಿ ರಾಷ್ಟ್ರಭಕ್ತರ ಬಳಗ ಆಕ್ರೋಶ-Nationalist group protests against CEC's visit to Shivamogga

 SUDDILIVE || SHIVAMOGGA

ಸಿಇಸಿ ಶಿವಮೊಗ್ಗ ಭೇಟಿ ವಿರೋಧಿಸಿ ರಾಷ್ಟ್ರಭಕ್ತರ ಬಳಗ ಆಕ್ರೋಶ-Nationalist group protests against CEC's visit to Shivamogga   

Cec, protest


ಕೇಂದ್ರ ಸಬಲೀಕೃತ ಸಮಿತಿ (ಸಿಇಸಿ) ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡುತ್ತಿರುವ ಕ್ರಮಕ್ಕೆ ರಾಷ್ಟ್ರಭಕ್ತರ ಬಳಗ ತೀವ್ರ ವಿರೋಧ ವ್ಯಕ್ತಪಡಿಸಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್ ತಡೆಯಾಜ್ಞೆ ಜಾರಿಯಲ್ಲಿರುವಾಗ ಸಿಇಸಿ ಭೇಟಿ ನೀಡುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಬಳಗ ಆರೋಪಿಸಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಬಳಗದ ಮುಖಂಡ ಶ್ರೀಕಾಂತ್, ಜೂನ್ 18ರಂದು ಸಿಇಸಿ ನಿಯೋಗವು ರಾಜ್ಯ ಪ್ರವಾಸ ಕೈಗೊಂಡು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರದೇಶಕ್ಕೆ ಭೇಟಿ ನೀಡಲಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ನ ಯಾವುದೇ ನಿರ್ದೇಶನವಿಲ್ಲದೆ ಸಿಇಸಿ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿರುವುದು ನ್ಯಾಯಾಂಗ ಪ್ರಕ್ರಿಯೆಗೆ ವಿರುದ್ಧವಾಗಿರುವಂತೆ ಕಾಣುತ್ತಿದೆ. ಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಈ ಭೇಟಿ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಸಿಇಸಿ ಭೇಟಿಯ ಬಗ್ಗೆ ಸಾರ್ವಜನಿಕರಿಗೆ ಅಥವಾ ಸ್ಥಳೀಯ ಸಂಘಟನೆಗಳಿಗೆ ಯಾವುದೇ ಮಾಹಿತಿ ನೀಡದೆ ಯೋಜನೆ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಈ ಭೇಟಿ ಆಯೋಜನೆಯಾಗಿದೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.

ಈ ಕುರಿತು ನಾಳೆ ಸಿಇಸಿ ನಿಯೋಗವನ್ನು ಭೇಟಿ ಮಾಡಿ, ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, ವನ್ಯಜೀವಿ ಮಂಡಳಿ ಹಾಗೂ ಐಎಫ್‌ಎಸ್ ಅಧಿಕಾರಿ ಪರಿಣತಿ ಕೌರ್ ಸಲ್ಲಿಸಿರುವ ವರದಿಯಲ್ಲಿ ಸಿಂಗಳಿಕಾ ವನ್ಯಜೀವಿ ಪ್ರದೇಶದಲ್ಲಿ ಯೋಜನೆ ಕೈಗೊಳ್ಳಬಾರದು ಎಂದು ಶಿಫಾರಸು ಮಾಡಲಾಗಿದೆ. ಅದನ್ನು ಪರಿಗಣಿಸಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇಂತಹ ಸಂದರ್ಭದಲ್ಲಿ ಸಿಇಸಿ ಭೇಟಿ ನೀಡುತ್ತಿರುವುದು ಪ್ರಶ್ನಾರ್ಹವಾಗಿದೆ ಎಂದು ಹೇಳಿದರು.

ಸುಮಾರು 75 ಸಾವಿರ ಆಕ್ಷೇಪಣೆಗಳು ಸಲ್ಲಿಕೆಯಾಗಿರುವ ನಡುವೆಯೇ ಯೋಜನೆಗೆ ಅನುಮೋದನೆ ನೀಡುವ ಪ್ರಯತ್ನ ನಡೆಯುತ್ತಿರುವುದು ದುರಂತಕರ ಬೆಳವಣಿಗೆ. ಸಿಇಸಿ ಭೇಟಿ ನ್ಯಾಯಾಂಗ ಆದೇಶಗಳ ಉಲ್ಲಂಘನೆಯಾಗುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಅವರು ಕಿಡಿಕಾರಿದರು.

Nationalist group protests against CEC's visit to Shivamogga


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close