ರಿಜಿಸ್ಟರ್ ಮದುವೆ ದಿನವೇ ನಾಪತ್ತೆಯಾಗಿದ್ದ ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ; ಮಹಿಳೆಯ ಗಂಭೀರ ಆರೋಪ-Rape case against young man who went missing on the day of registered marriage; woman makes serious allegations

SUDDILIVE || SHIVAMOGGA

ರಿಜಿಸ್ಟರ್ ಮದುವೆ ದಿನವೇ ನಾಪತ್ತೆಯಾಗಿದ್ದ ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ; ಮಹಿಳೆಯ ಗಂಭೀರ ಆರೋಪ-Rape case against young man who went missing on the day of registered marriage; woman makes serious allegations     

ಶಿವಮೊಗ್ಗ: ಪ್ರೇಮ ವಿವಾಹಕ್ಕಾಗಿ ರಿಜಿಸ್ಟರ್ ಮದುವೆಗೆ ತೆರಳಿದ್ದ ವೇಳೆ ನಿಗೂಢವಾಗಿ ನಾಪತ್ತೆಯಾಗಿರುವ ಶಿವಮೊಗ್ಗದ ಯುವಕ ಶುಭಕರ ಡಿ.ಆರ್. ವಿರುದ್ಧ ಇದೀಗ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಗರ್ಭಪಾತಕ್ಕೆ ಒತ್ತಾಯ, ಜೀವ ಬೆದರಿಕೆ ಹಾಗೂ ಹಣ ವಂಚನೆ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ.

ಶಿವಮೊಗ್ಗ ನಗರದ ನಿವಾಸಿಯಾಗಿರುವ ಮಹಿಳೆಯೊಬ್ಬರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಯುವಕ ಶುಭಕರ ಸೇರಿದಂತೆ ಕುಟುಂಬದ ಕೆಲವು ಸದಸ್ಯರ ವಿರುದ್ಧವೂ ಆರೋಪಗಳು ಕೇಳಿಬಂದಿವೆ.

ದೂರಿನಲ್ಲಿ ಉಲ್ಲೇಖಿಸಿರುವಂತೆ, 2023ರಿಂದ ಶುಭಕರ ಮತ್ತು ಮಹಿಳೆ ಪರಸ್ಪರ ಪರಿಚಯ ಹೊಂದಿದ್ದರು. ಆರಂಭದಲ್ಲಿ ಸ್ನೇಹದ ನೆಪದಲ್ಲಿ ಸಂಪರ್ಕ ಬೆಳೆಸಿದ್ದ ಶುಭಕರ, ನಂತರ ಮಹಿಳೆಯ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಂದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ದೈಹಿಕ ಸಂಪರ್ಕ ಹೊಂದಿದ್ದರಿಂದ ಮಹಿಳೆ ಗರ್ಭಿಣಿಯಾಗಿದ್ದಳು. ಈ ವಿಚಾರ ತಿಳಿಸಿದಾಗ ಆರೋಪಿ ಕೋಪಗೊಂಡು ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದು, ಔಷಧಿ ಹಾಗೂ ಇತರ ವಸ್ತುಗಳನ್ನು ನೀಡಿ ಗರ್ಭಪಾತವಾಗುವಂತೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದರ ಜೊತೆಗೆ, ಮಹಿಳೆಯ ಬಳಿ ಸುಮಾರು ₹3.80 ಲಕ್ಷ ಹಣ ಪಡೆದುಕೊಂಡಿದ್ದಲ್ಲದೆ, ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಸುಮಾರು ₹1.70 ಲಕ್ಷ ಮೌಲ್ಯದ ಆಪಲ್ ಐಫೋನ್‌ನ್ನು ಸಹ ಪಡೆದುಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಮಹಿಳೆ ಮದುವೆಗೆ ಒತ್ತಾಯಿಸಿದಾಗ, ಹಲವು ಬಾರಿ ಕುಟುಂಬದವರ ಹಾಗೂ ಮುಖಂಡರ ಸಮ್ಮುಖದಲ್ಲಿ ಸಭೆಗಳು ನಡೆದಿದ್ದವು. ಕೊನೆಗೆ ಮೇ 25ರಂದು ಮದುವೆ ನೋಂದಣಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಎರಡೂ ಕುಟುಂಬಗಳು ಉಪನೋಂದಣಾಧಿಕಾರಿ ಕಚೇರಿಗೆ ಆಗಮಿಸಿದ್ದ ವೇಳೆ, ಶುಭಕರ "ಮೇಲೆ ಹೋಗಿ ಬರುತ್ತೇನೆ" ಎಂದು ಹೇಳಿ ನಾಪತ್ತೆಯಾಗಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮಹಿಳೆಯ ದೂರಿನ ಪ್ರಕಾರ, ಮದುವೆ ವಿಚಾರದಲ್ಲಿ ಕಾಲಹರಣ ಮಾಡುತ್ತಾ ಬಂದ ಆರೋಪಿ ಹಾಗೂ ಅವರ ಕುಟುಂಬದವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದೀಗ ಒಂದೆಡೆ ಶುಭಕರ ನಾಪತ್ತೆ ಪ್ರಕರಣ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮತ್ತೊಂದೆಡೆ ಮಹಿಳೆಯ ದೂರಿನ ಆಧಾರದ ಮೇಲೆ ಗಂಭೀರ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಕರಣದ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಬೇಕಿದ್ದು, ಯುವಕನ ನಾಪತ್ತೆ ಹಾಗೂ ಮಹಿಳೆಯ ಆರೋಪಗಳು ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಮೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇರೆಗೆ ಮೀಟರ್ ರೀಡರ್ ಆಗಿದ್ದ ಶುಭಕರ್ ಸಧ್ಯ ನಾಪತ್ತೆಯಾಗಿದ್ದಾನೆ. ಈತ ಶಾಸಕರ ಹಿಂದು ಮುಂದು ಓಡಾಡಿಕೊಂಡಿದ್ದ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸಧ್ಯಕ್ಕೆ ಮಹಿಳೆಗೆ ಅನ್ಯಾಯವಾಗಿದೆ. ಅನ್ಯಾಯ ಹೇಗೆ ಸರಪಡಿಸಲಾಗುತ್ತದೆ ಎಂಬುದು ಕಾದುನೋಡಬೇಕಿದೆ. 

Rape case against young man who went missing on the day of registered marriage; woman makes serious allegations

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close