ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ-ಡಿಡಿಪಿಐ-Strict action against schools charging extra fees - DDPI

 SUDDILIVE || SHIVAMOGGA

ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ-ಡಿಡಿಪಿಐ-Strict action against schools charging extra fees - DDPI

School, action

ಶಿವಮೊಗ್ಗ, ಜೂನ್ 11: ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ ಎಚ್ಚರಿಕೆ ನೀಡಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಸಂಚಾರ ಪೊಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ತಾಲೂಕಿನ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರಿಗಾಗಿ ಆಯೋಜಿಸಿದ್ದ ‘ಶಾಲಾ ಶುಲ್ಕ ಪಾರದರ್ಶಕತೆ, ನಿಯಮ ಪಾಲನೆ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳು’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತಿಯಾದ ಶುಲ್ಕದ ಬಗ್ಗೆ ಸಾರ್ವಜನಿಕರಿಂದ ದೂರು

ಖಾಸಗಿ ಶಾಲೆಗಳಲ್ಲಿ ದಾಖಲಾತಿ ಶುಲ್ಕ, ಸಮವಸ್ತ್ರ ಶುಲ್ಕ ಹಾಗೂ ವಾಹನ ಶುಲ್ಕಗಳು ಅತಿಯಾಗಿ ವಸೂಲಾಗುತ್ತಿರುವ ಬಗ್ಗೆ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ದೂರುಗಳು ಬಂದಿವೆ. ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಶಾಲೆಗಳು ಸರ್ಕಾರ ನಿಗದಿಪಡಿಸಿದ ಶುಲ್ಕದ ವಿವರಗಳನ್ನು ಹಾಗೂ ತಮ್ಮ ಪ್ರವೇಶ ಶುಲ್ಕದ ಮಾಹಿತಿಯನ್ನು ಶಾಲೆಯ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಿದರು.

ನಿಯಮ ಉಲ್ಲಂಘಿಸಿದರೆ ಮಾನ್ಯತೆ ರದ್ದು

ಸರ್ಕಾರದ ಮಾರ್ಗಸೂಚಿ ಹಾಗೂ ಇಲಾಖೆಯ ನಿಯಮಗಳನ್ನು ಪಾಲಿಸದ ಶಾಲೆಗಳ ಮಾನ್ಯತೆಯನ್ನು ಹಿಂಪಡೆಯಲಾಗುವುದು ಎಂದು ಎಚ್ಚರಿಸಿದ ಅವರು, ಶುಲ್ಕ ಪಾವತಿಸದ ಕಾರಣಕ್ಕೆ ಮಕ್ಕಳ ವರ್ಗಾವಣೆ ಪತ್ರ (ಟಿ.ಸಿ.) ನೀಡದಿರುವುದು, ಶಾಲೆಯಿಂದ ಹೊರಗೆ ನಿಲ್ಲಿಸುವುದು ಅಥವಾ ಅಂಕಪಟ್ಟಿ ತಡೆಹಿಡಿಯುವುದು ಕಾನೂನುಬಾಹಿರ ಎಂದು ಹೇಳಿದರು.

ಇಂತಹ ಪ್ರಕರಣಗಳ ಕುರಿತು ದೂರು ಬಂದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

ಬಡ ಮಕ್ಕಳಿಗೆ ಮಾನವೀಯತೆ ಅಗತ್ಯ

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಬಡ ಹಾಗೂ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ದಾಖಲಾತಿ ಪ್ರಕ್ರಿಯೆಯಲ್ಲಿ ಮಾನವೀಯತೆ ಮೆರೆಯಬೇಕು ಎಂದು ಕರೆ ನೀಡಿದರು.

ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಸಮರ್ಪಕ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.

ಉದಾರತೆ ತೋರಿದ ಶಾಲೆಗಳಿಗೆ ಪ್ರಶಂಸೆ

ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ನಾಯ್ಕ್ ಮಾತನಾಡಿ, ಜಿಲ್ಲೆಯ ಕೆಲವು ಖಾಸಗಿ ಶಾಲೆಗಳು ಬಡ ಮಕ್ಕಳನ್ನು ಉಚಿತವಾಗಿ ದಾಖಲಿಸಿಕೊಂಡು ಶಿಕ್ಷಣ ನೀಡುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

80ಕ್ಕೂ ಹೆಚ್ಚು ಶಾಲಾ ಬಸ್‌ಗಳಿಗೆ ಪರವಾನಿಗೆ ನವೀಕರಣ ಇಲ್ಲ

ಪ್ರಾದೇಶಿಕ ಸಾರಿಗೆ ಅಧಿಕಾರಿ ಮರುಗೇಂದ್ರಯ್ಯ ಶಿರೋಳ್ಕರ್ ಮಾತನಾಡಿ, ಜಿಲ್ಲೆಯಲ್ಲಿ 710ಕ್ಕೂ ಹೆಚ್ಚು ಶಾಲಾ ಬಸ್‌ಗಳಿದ್ದು, ಅವುಗಳಲ್ಲಿ 80ಕ್ಕೂ ಹೆಚ್ಚು ಬಸ್‌ಗಳು ಪರವಾನಿಗೆ ನವೀಕರಣ ಹಾಗೂ ಕ್ಷಮತಾ ಪ್ರಮಾಣಪತ್ರ ಪಡೆಯದಿರುವುದು ಕಂಡುಬಂದಿದೆ ಎಂದು ತಿಳಿಸಿದರು.

ಶಾಲಾ ಆಡಳಿತ ಮಂಡಳಿಗಳು ಬಸ್‌ಗಳ ಸುರಕ್ಷತೆ, ದಾಖಲೆಗಳ ನಿರ್ವಹಣೆ ಹಾಗೂ ತಾಂತ್ರಿಕ ಸ್ಥಿತಿಗತಿಗಳ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಶಾಲಾ ವಾಹನಗಳಲ್ಲಿ ಜಿಪಿಎಸ್, ಸಿಸಿಟಿವಿ ಕಡ್ಡಾಯ

ಶಾಲಾ ವಾಹನಗಳಿಗೆ ಅನುಭವಿ ಚಾಲಕರನ್ನು ನೇಮಿಸಬೇಕು. ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದ್ದಲ್ಲಿ ಮಹಿಳಾ ನಿರ್ವಾಹಕರನ್ನು ನಿಯೋಜಿಸಬೇಕು. ಜಿಪಿಎಸ್ ಹಾಗೂ ಸಿಸಿಟಿವಿ ವ್ಯವಸ್ಥೆ ಅಳವಡಿಸುವಂತೆ ಸೂಚಿಸಿದರು.

ಮದ್ಯಪಾನ ಮಾಡಿ ವಾಹನ ಚಾಲನೆ: ನಾಲ್ವರು ಚಾಲಕರ ವಿರುದ್ಧ ಕ್ರಮ

ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ವಿ. ದೇವರಾಜ್ ಮಾತನಾಡಿ, ಶಾಲಾ ಮಕ್ಕಳ ಸುರಕ್ಷತೆ ಅತ್ಯಂತ ಮಹತ್ವದ್ದು ಎಂದು ಹೇಳಿದರು.

ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ನಾಲ್ವರು ಚಾಲಕರನ್ನು ಪತ್ತೆಹಚ್ಚಿ, ಅವರ ಚಾಲನಾ ಪರವಾನಿಗೆ ರದ್ದುಪಡಿಸಲು ಶಿಫಾರಸು ಮಾಡಿರುವುದಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಶಾಲಾ ವಾಹನಗಳಿಗೆ ಸುರಕ್ಷತಾ ನಿಯಮ ಪಾಲನೆ ಸೂಚನೆ

ಶಾಲಾ ವಾಹನಗಳಿಗೆ ಹಳದಿ ಬಣ್ಣ ಬಳಿಯಬೇಕು, ವೇಗ ಮಿತಿ ಸಾಧನ ಅಳವಡಿಸಬೇಕು, ‘ಶಾಲಾ ವಾಹನ’ ಎಂಬ ಫಲಕ ಪ್ರದರ್ಶಿಸಬೇಕು, ಬಾಗಿಲುಗಳ ಭದ್ರತೆ ಖಚಿತಪಡಿಸಬೇಕು ಹಾಗೂ ವಿಮೆ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಡ್ಡಾಯವಾಗಿ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದರು.

ಕಾರ್ಯಕ್ರಮದಲ್ಲಿ ಅನುದಾನಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಗಿರೀಶ್, ಕ್ಷೇತ್ರ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್, ಸಂಚಾರಿ ನಿರೀಕ್ಷಕ ಮಲ್ಲೇಶಪ್ಪ, ವಿವಿಧ ಶಾಲೆಗಳ ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Strict action against schools charging extra fees - DDPI

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close