SUDDILIVE || SHIVAMOGGA
ಶಿವಮೊಗ್ಗದಲ್ಲಿ ಜೂನ್‌ನಲ್ಲಿ ಶೇ.55 ಮಳೆ ಕೊರತೆ; ರೈತರು ಆತಂಕಪಡಬೇಕಿಲ್ಲ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ- 55% rain deficit in Shivamogga in June; Farmers need not worry: Deputy Commissioner Prabhulinga Kavalikatti
ಶಿವಮೊಗ್ಗ, ಜು.3: ಶಿವಮೊಗ್ಗ ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಶೇ.55ರಷ್ಟು ಮಳೆ ಕೊರತೆಯಾಗಿದೆ. ಆದರೆ ಕಳೆದ ಎರಡು-ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ಆರಂಭವಾಗಿದ್ದು, ಭತ್ತದ ಬಿತ್ತನೆಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೃಷಿ, ಕುಡಿಯುವ ನೀರು, ಮಳೆ ಪರಿಸ್ಥಿತಿ ಹಾಗೂ ಬರ ಸಿದ್ಧತೆ ಕುರಿತು ಮಾಹಿತಿ ನೀಡಿದರು.
ಶೇ.13 ರಷ್ಟು ಬಿತ್ತನೆ
ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಆಗಸ್ಟ್ ಅಂತ್ಯದವರೆಗೂ ನಡೆಯುವುದರಿಂದ ಸದ್ಯದ ಮಳೆ ಕೊರತೆಯಿಂದ ಕೃಷಿಗೆ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆ ಇಲ್ಲ ಎಂದು ಹೇಳಿದರು. ಪ್ರಸ್ತುತ ಜಿಲ್ಲೆಯಲ್ಲಿ ಕೇವಲ ಶೇ.13ರಷ್ಟು ಮಾತ್ರ ಬಿತ್ತನೆ ಪೂರ್ಣಗೊಂಡಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ ಎಂದರು.
ಅಕಾಲಿಕ ಮಳೆಯಿಂದ ತೋಟಗಾರಿಕಾ ಬೆಳೆಗಳಿಗೆ ಉಂಟಾದ ಹಾನಿಯ ವಿವರಗಳನ್ನು ಸರ್ಕಾರದ ಪರಿಹಾರ ಪೋರ್ಟಲ್‌ಗೆ ದಾಖಲಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ಪರಿಹಾರ ವಿತರಿಸಲಾಗುವುದು. ಅಲ್ಲದೆ ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆಯಿಲ್ಲ
ಕುಡಿಯುವ ನೀರಿನ ವಿಚಾರದಲ್ಲಿ ಜಿಲ್ಲೆಯಲ್ಲಿ ಸದ್ಯ ಯಾವುದೇ ಸಮಸ್ಯೆ ಇಲ್ಲ. ಜಲಾಶಯಗಳಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಸಂಗ್ರಹವಿದೆ. ಆದರೆ ನೀರಾವರಿ ಉದ್ದೇಶಕ್ಕಾಗಿ ನೀರು ಬಿಡುವ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಒಳಹರಿವು ಹೆಚ್ಚಾದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯ 280 ಮಳೆ ಮಾಪನ ಕೇಂದ್ರಗಳಲ್ಲಿ ಆರಂಭದಲ್ಲಿ 208 ಕೇಂದ್ರಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಅವುಗಳ ದುರಸ್ತಿಗೆ ಕ್ರಮ ಕೈಗೊಂಡಿದ್ದು, ಉಳಿದ 44 ಕೇಂದ್ರಗಳಿಗೂ ಕಾರ್ಯಾದೇಶ ನೀಡಿ ಮುಂದಿನ ವಾರದೊಳಗೆ ಎಲ್ಲ ಕೇಂದ್ರಗಳನ್ನು ಕಾರ್ಯನಿರ್ವಹಣೆಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಂಟಿಂಜೆನ್ಸ್ ಪ್ಲಾನ್ ಇದೆ
ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾದರೆ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಕಂಟಿಂಜೆನ್ಸಿ ಪ್ಲಾನ್ ಸಿದ್ಧಪಡಿಸಿದೆ. ಭತ್ತಕ್ಕೆ ಕಡಿಮೆ ಅವಧಿಯ ತಳಿಗಳು, ಮೆಕ್ಕೆಜೋಳಕ್ಕೆ ಅಂತರಬೆಳೆ ಸೇರಿದಂತೆ ಪರ್ಯಾಯ ಕೃಷಿ ಕ್ರಮಗಳ ಬಗ್ಗೆ ಕೃಷಿ ಇಲಾಖೆಯ ಮೂಲಕ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.
ಮೂರು ಗ್ರಾಮದಲ್ಲಿ ನೀರಿನ ಟ್ಯಾಂಕರ್ ಮೂಲಕ ಪೂರೈಕೆ
ಜಿಲ್ಲೆಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಅತ್ಯಂತ ಸೀಮಿತವಾಗಿದೆ. ಸದ್ಯ ತೀರ್ಥಹಳ್ಳಿ ತಾಲ್ಲೂಕಿನ ಮೂರು ಗ್ರಾಮಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಗೋಶಾಲೆ ತೆರೆಯುವ ಅಗತ್ಯವೂ ಸದ್ಯ ಎದುರಾಗಿಲ್ಲ, ಏಕೆಂದರೆ ಜಿಲ್ಲೆಯಲ್ಲಿ ಸುಮಾರು ಹತ್ತು ತಿಂಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ ನೀಡಿದರು.
