SUDDILIVE || SHIVAMOGGA
ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿ ಬಂಧನ-Absconding theft suspect arrested
ಶಿವಮೊಗ್ಗ, ಜು.31: ಸುಮಾರು 34 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ತೀರ್ಥಹಳ್ಳಿ ಪೊಲೀಸರು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಶೇಖರ @ ಮತ್ತಿಗೆ ಶೇಖರ (65), ತಂದೆ ಕೊಂಡಯ್ಯ ತಿಮ್ಮಪ್ಪ, ಮೂಲ ನಿವಾಸಿ ಶಿಕಾರಿಪುರ ತಾಲ್ಲೂಕಿನ ಮತ್ತಿಗೆ ಗ್ರಾಮ, ಪ್ರಸ್ತುತ ಸಾಗರ ನಿವಾಸಿ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, 1990ರಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಸರಣಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಗುನ್ನೆ ಸಂಖ್ಯೆ 174/1990, 175/1990 ಹಾಗೂ 177/1990ರಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 457 (ಮನೆಗೆ ಅಕ್ರಮ ಪ್ರವೇಶ) ಹಾಗೂ 380 (ಕಳ್ಳತನ) ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣ ದಾಖಲಾಗಿದ ಬಳಿಕ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 34 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಪ್ರಕರಣಗಳನ್ನು LPR ಸಂಖ್ಯೆ 07/97, 08/97 ಮತ್ತು 09/97 ಎಂದು ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿತ್ತು.
ಆರೋಪಿಯ ಸುಳಿವು ಪತ್ತೆಹಚ್ಚಲು ತೀರ್ಥಹಳ್ಳಿ ಪೊಲೀಸರು ನಿರಂತರವಾಗಿ ಮಾಹಿತಿ ಸಂಗ್ರಹಣೆ ನಡೆಸಿದ್ದರು. ಅಂತಿಮವಾಗಿ ಆರೋಪಿಯ ಇರುವಿಕೆ ಪತ್ತೆಯಾದ ನಂತರ ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕಾರ್ಯಾಚರಣೆ ಜಿಲ್ಲಾ ಪೊಲೀಸ್ ಅಧೀಕ್ಷಕ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ ಎ.ಜಿ. ಹಾಗೂ ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಅರವಿಂದ ಕಲಗುಚ್ಚಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ತೀರ್ಥಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇಮ್ರಾನ್ ಬೇಗ್ ಅವರ ನೇತೃತ್ವದಲ್ಲಿ ಸಿ.ಎಚ್.ಸಿ. ಲಿಂಗೇಗೌಡ, ರಾಘವೇಂದ್ರ ಹಾಗೂ ಸಿಪಿಸಿ ಶಿವಶಂಕರ ಕುಂಬಾರ ಅವರನ್ನು ಒಳಗೊಂಡ ಪೊಲೀಸ್ ತಂಡ ಆರೋಪಿಯನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
34 ವರ್ಷಗಳ ಹಿಂದಿನ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಿರುವ ತೀರ್ಥಹಳ್ಳಿ ಪೊಲೀಸರ ಕಾರ್ಯಾಚರಣೆಗೆ ಪೊಲೀಸ್ ಇಲಾಖೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
