ಹೆಂಡತಿ ವಿಚಾರದಲ್ಲಿ ಬುದ್ಧಿವಾದ ಹೇಳಿದ್ದೇ ಜೀವಕ್ಕೆ ಮುಳುವಾಯಿತು-ಎಸ್ಪಿ-Advice about wife cost his life - SP

SUDDILIVE || SHIVAMOGGA

ಹೆಂಡತಿ ವಿಚಾರದಲ್ಲಿ ಬುದ್ಧಿವಾದ ಹೇಳಿದ್ದೇ ಜೀವಕ್ಕೆ ಮುಳುವಾಯಿತು-ಎಸ್ಪಿ-Advice about wife cost his life - SP
Advice, wife

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಗಾರೆ ಕೆಲಸಕ್ಕೆ ಬಂದಿದ್ದ ಕಾರ್ಮಿಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಪ್ರಕರಣವನ್ನು

 ಹೊಸನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ aಭೇದಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಅವರು, ಮೃತನನ್ನು ಪರಶುರಾಮ್ ಎಂದು ಗುರುತಿಸಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಈಚನಳ್ಳಿ ತಾಂಡಾದ ನಿವಾಸಿಗಳಾದ ಪರಶುರಾಮ್, ಆರೋಪಿ ಪರಶುರಾಮ್ ಹಾಗೂ ಅರುಣ್ ಸೇರಿದಂತೆ ಮೂವರು ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಗಾರೆ ಕೆಲಸ ಮಾಡಲು ಬಂದಿದ್ದರು ಎಂದು ಮಾಹಿತಿ ನೀಡಿದರು.

ಊಟದ ವೇಳೆ ಆರಂಭವಾದ ಮಾತಿನ ಚಕಮಕಿ

ಕೆಲಸ ಮುಗಿಸಿಕೊಂಡು ರಾತ್ರಿ ಊಟ ಮಾಡುವ ವೇಳೆ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಅರುಣ್ ತನ್ನ ಪತ್ನಿಯಿಂದ ಪ್ರತ್ಯೇಕವಾಗಿ ಬದುಕುತ್ತಿರುವ ವಿಚಾರ ಪ್ರಸ್ತಾಪವಾಗಿದೆ. ವಯಸ್ಸಿನಲ್ಲಿ ಹಿರಿಯನಾಗಿದ್ದ ಮೃತ ಪರಶುರಾಮ್, "ಹೆಂಡತಿಯನ್ನು ಬಿಟ್ಟುಬಿಡುವುದು ಪರಿಹಾರವಲ್ಲ. ಕುಟುಂಬವನ್ನು ಒಟ್ಟಿಗೆ ಸಾಗಿಸಿಕೊಳ್ಳಬೇಕು" ಎಂದು ಅರುಣ್‌ಗೆ ಬುದ್ಧಿವಾದ ಹೇಳಿದ್ದಾರೆ.

ಈ ಮಾತು ಆರೋಪಿಗಳಿಗೆ ಅಸಮಾಧಾನ ಉಂಟುಮಾಡಿದ್ದು, ಮಾತಿಗೆ ಮಾತು ಬೆಳೆದು ಜಗಳದ ರೂಪ ಪಡೆದುಕೊಂಡಿದೆ.

ಅಡುಗೆ ಮನೆಯ ಚಾಕುವಿನಿಂದ ಕುತ್ತಿಗೆಗೆ ಇರಿತ

ಜಗಳ ತಾರಕಕ್ಕೇರಿದಾಗ ಆರೋಪಿ ಅರುಣ್ ಹಾಗೂ ಮತ್ತೋರ್ವ ಆರೋಪಿ ಪರಶುರಾಮ್ ಸೇರಿ ಅಡುಗೆ ಮನೆಯಲ್ಲಿ ಇದ್ದ ಚಾಕುವನ್ನು ತೆಗೆದುಕೊಂಡು ಮೃತ ಪರಶುರಾಮ್ ಅವರ ಕುತ್ತಿಗೆಗೆ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ವೇಳೆ ಇತರ ಕಾರ್ಮಿಕರು ಸ್ಥಳದಲ್ಲೇ ಇದ್ದು, ಪ್ರಕರಣಕ್ಕೆ ಪ್ರತ್ಯಕ್ಷ ಸಾಕ್ಷಿದಾರರೂ ಇದ್ದಾರೆ ಎಂದು ಎಸ್‌ಪಿ ತಿಳಿಸಿದರು.

ಆರೋಪಿಗಳ ಕ್ಷಿಪ್ರ ಬಂಧನ

ಮಾಹಿತಿ ದೊರೆಯುತ್ತಿದ್ದಂತೆಯೇ ಹೊಸನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಆರೋಪಿಗಳಿಬ್ಬರನ್ನೂ ತಕ್ಷಣವೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮದ್ಯದ ಅಮಲೇ ದುರಂತಕ್ಕೆ ಕಾರಣ

ಪ್ರಕರಣದ ವೇಳೆ ಆರೋಪಿಗಳು ಮದ್ಯದ ಅಮಲಿನಲ್ಲಿದ್ದರು. ಸಣ್ಣ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಮೃತ ಪರಶುರಾಮ್ ನಂತರದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಬಹುದು ಎಂಬ ಭಯದಿಂದ ಇಬ್ಬರು ಆರೋಪಿಗಳು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಎಸ್‌ಪಿ ವಿವರಿಸಿದರು.

ಹೆಸರಿನ ಗೊಂದಲಕ್ಕೆ ಎಸ್‌ಪಿ ಸ್ಪಷ್ಟನೆ

ಪ್ರಕರಣದಲ್ಲಿ ಮೃತನ ಹೆಸರು ಹಾಗೂ ಒಬ್ಬ ಆರೋಪಿಯ ಹೆಸರೂ ಪರಶುರಾಮ್ ಆಗಿರುವುದರಿಂದ ಗೊಂದಲ ಉಂಟಾಗಿದೆ. ಹೆಂಡತಿಯನ್ನು ಬಿಟ್ಟು ಬದುಕುತ್ತಿದ್ದವರು ಮೃತ ಪರಶುರಾಮ್ ಅಲ್ಲ, ಆರೋಪಿ ಅರುಣ್ ಎಂದು ಎಸ್‌ಪಿ ಸ್ಪಷ್ಟಪಡಿಸಿದರು. ಅರುಣ್‌ನ ಪತ್ನಿ ಸುಮಾರು 10 ರಿಂದ 12 ತಿಂಗಳ ಹಿಂದೆ ಪ್ರತ್ಯೇಕವಾಗಿದ್ದು, ಇದೇ ವಿಚಾರವಾಗಿ ಮೃತ ಪರಶುರಾಮ್ ಬುದ್ಧಿವಾದ ಹೇಳಿದ್ದರು ಎಂದು ತಿಳಿಸಿದರು.

ಒಂದೇ ತಾಂಡಾದ ನಿವಾಸಿಗಳು

ಮೃತ ಹಾಗೂ ಇಬ್ಬರು ಆರೋಪಿಗಳೂ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಈಚನಳ್ಳಿ ತಾಂಡಾದ ನಿವಾಸಿಗಳಾಗಿದ್ದು, ಪರಸ್ಪರ ಪರಿಚಯಸ್ಥರು ಮತ್ತು ಒಂದೇ ಊರಿನವರಾಗಿದ್ದರು. ಗಾರೆ ಕೆಲಸಕ್ಕಾಗಿ ಒಟ್ಟಾಗಿ ಶಿವಮೊಗ್ಗ ಜಿಲ್ಲೆಗೆ ಬಂದಿದ್ದರು.

15 ದಿನಗಳ ಬಳಿಕ ಕೆಲಸಕ್ಕೆ ಮರಳಿದ ದಿನವೇ ಹತ್ಯೆ

ಮೃತ ಪರಶುರಾಮ್ ಸುಮಾರು 15 ದಿನಗಳ ರಜೆ ಬಳಿಕ ಕೆಲಸಕ್ಕೆ ಮರಳಿದ್ದು, ಅವರು ವಾಪಸ್ ಬಂದ ಅದೇ ದಿನ ಈ ದುರ್ಘಟನೆ ನಡೆದಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಕ್ರಿಮಿನಲ್ ಹಿನ್ನೆಲೆ ಇಲ್ಲ

ಆರೋಪಿಗಳ ವಿರುದ್ಧ ಯಾವುದೇ ಹಿಂದಿನ ಅಪರಾಧ ಪ್ರಕರಣಗಳ ದಾಖಲೆ ಇಲ್ಲ. ಇದು ಕ್ಷಣಿಕ ಪ್ರಚೋದನೆಯಿಂದ ನಡೆದ ಕೃತ್ಯವಾಗಿದ್ದು, ಪೂರ್ವನಿಯೋಜಿತ ಹತ್ಯೆಯಲ್ಲ ಎಂದು ಎಸ್‌ಪಿ ನಿಖಿಲ್. ಕುಮಾರ್ ತಿಳಿಸಿದ್ದಾರೆ.

Advice about wife cost his life - SP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close