SUDDILIVE || BHDRAVATHI
ಭದ್ರಾವತಿ ಭೋವಿ ಕಾಲೋನಿ ಅಶೋಕನ ಆತ್ಮಹತ್ಯೆಗೆ ಪ್ರಕರಣ, ವೈರಲ್ ವೀಡಿಯೋದಿಂದ ಹೊಸ ತಿರುವು… ಪೊಲೀಸರ ಪಾತ್ರದ ಮೇಲೂ ಪ್ರಶ್ನೆಗಳು- Bhadravati Bhovi Colony Ashok's suicide case, new twist from viral video... Questions also on the role of the police
ಭದ್ರಾವತಿ: ಭದ್ರಾವತಿ ನಗರದ ಭೋವಿ ನಿವಾಸಿ ಅಶೋಕ್ ಆತ್ಮಹತ್ಯೆಗೆ ಯತ್ನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ ಪ್ರಕರಣದ ಕುರಿತು ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಬಡ್ಡಿ ವ್ಯವಹಾರ ನಡೆಸುವವರ ಕಿರುಕುಳವೇ ಆತ್ಮಹತ್ಯೆಗೆ ಕಾರಣವೇ ಎಂಬ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ.
ವೈರಲ್ ವೀಡಿಯೋದಲ್ಲಿ ಎಎಸ್‌ಐ ಮಂಜೇಶ್ವರ್, ಅವರ ತಮ್ಮ ಪಾಪಣ್ಣ, ಕುಳ್ಳಿ ರಾಜೇಶ್, ಅಣ್ಣಪ್ಪ ಹಾಗೂ ಧೃವ ಎಂಬವರ ಹೆಸರುಗಳು ಪ್ರಸ್ತಾಪವಾಗಿರುವುದಾಗಿ ಹೇಳಲಾಗುತ್ತಿದೆ. ಅಶೋಕನ ಮೇಲೆ ನಿರಂತರ ಒತ್ತಡ, ಬೆದರಿಕೆ ಹಾಗೂ ಬಡ್ಡಿ ವ್ಯವಹಾರದ ಕಿರುಕುಳ ನಡೆದಿರುವ ಆರೋಪಗಳು ಕೇಳಿಬರುತ್ತಿದ್ದು, ಈ ಎಲ್ಲ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಆದರೆ ಈ ಆತ್ಮಹತ್ಯೆ ಯತ್ನ ಪ್ರಕರಣ ಬಡ್ಡಿ ವ್ಯವಹಾರದ ಬಗ್ಗೆ ಕೇಳಿ ಬರಬೇಕಿತ್ತು. ಆದರೆ ಜಾಗ ಒತ್ತುವರಿಯಿಂದ ಆತ್ಮಹತ್ಯೆಗೆ ಯತ್ನ ಎಂದು ದೂರು ದಾಖಲಿಸಿಕೊಂಡಿರುವ ಪೊಲೀಸ್ ಇಲಾಖೆ ನಗೆ ಪಾಟಲಿಗೆ ಕಾರಣವಾಗಿರುವ ಆರೋಪವೂ ಕೇಳಿ ಬರುತ್ತಿದೆ. ಅಶೋಕ ಆತ್ಮಹತ್ಯೆಗೆ ಯತ್ನಿಸಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಹೆಸರು ಕೇಳಿಬಂದವರ ವಿರುದ್ಧ ಇದುವರೆಗೆ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆರೋಪಗಳು ಇಷ್ಟೊಂದು ಗಂಭೀರವಾಗಿದ್ದರೂ ಬಂಧನವಾಗದಿರುವುದು ಏಕೆ ಎಂಬ ಪ್ರಶ್ನೆಯನ್ನು ಸ್ಥಳೀಯರು ಹಾಗೂ ಸಾರ್ವಜನಿಕರು ಎತ್ತುತ್ತಿದ್ದಾರೆ. ಪೊಲೀಸ್ ಇಲಾಖೆ ತನಿಖೆಯನ್ನು ವಿಳಂಬ ಮಾಡುತ್ತಿದೆಯೇ ಅಥವಾ ಕಾನೂನು ಪ್ರಕ್ರಿಯೆಯ ಭಾಗವಾಗಿ ಸಾಕ್ಷ್ಯ ಸಂಗ್ರಹ ನಡೆಯುತ್ತಿದೆಯೇ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.
ಈ ಪ್ರಕರಣವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರಿಗೆ ಮತ್ತೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಭದ್ರಾವತಿಯಲ್ಲಿ ಬಡ್ಡಿ ಮಾಫಿಯಾದ ಚಟುವಟಿಕೆಗಳ ಕುರಿತು ಈ ಹಿಂದೆ ಸಹ ಹಲವು ಆರೋಪಗಳು ಕೇಳಿಬಂದಿದ್ದವು. ಇದೀಗ ವೈರಲ್ ವೀಡಿಯೋದಿಂದ ಆ ಆರೋಪಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳುವರೇ ಎಂಬುದನ್ನು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.
ಅಶೋಕನ ಆತ್ಮಹತ್ಯೆ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕಾದರೆ ವೈರಲ್ ವೀಡಿಯೋದ ಸತ್ಯಾಸತ್ಯತೆ, ಅದರಲ್ಲಿ ಪ್ರಸ್ತಾಪವಾಗಿರುವ ಆರೋಪಗಳು ಹಾಗೂ ಸಂಬಂಧಪಟ್ಟ ಎಲ್ಲ ವ್ಯಕ್ತಿಗಳ ಪಾತ್ರದ ಬಗ್ಗೆ ಆಳವಾದ ತನಿಖೆ ನಡೆಸುವುದು ಅಗತ್ಯವಾಗಿದೆ. ತನಿಖೆಯ ಅಂತಿಮ ವರದಿ ಹೊರಬರುವವರೆಗೆ ಯಾವುದೇ ಆರೋಪವನ್ನು ಅಂತಿಮ ಸತ್ಯವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳ ಗಂಭೀರತೆಯನ್ನು ಗಮನಿಸಿ ಪೊಲೀಸರು ತ್ವರಿತ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ.
Bhadravati Bhovi Colony Ashok's suicide case, new twist from viral video... Questions also on the role of the police
