SUDDILIVE || BHADRAVATHI
ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆ- ಆರೋಗ್ಯ ರಕ್ಷಣ ಸಮಿತಿ ಭೇಟಿ ಬಳಿಕ ಪ್ರಶ್ನೆಗಳ ಸರಮಾಲೆ-Chaos at Bhadravati Public Hospital - A series of questions after the Health Protection Committee visit
ಭದ್ರಾವತಿ: ಭದ್ರಾವತಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬಂದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ರಕ್ಷಣ ಸಮಿತಿಯ ಸದಸ್ಯರು ಶನಿವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಹಲವು ಸಮಸ್ಯೆಗಳು ಬೆಳಕಿಗೆ ಬಂದಿದ್ದು, ಸಂಬಂಧಪಟ್ಟ ವೈದ್ಯಾಧಿಕಾರಿಗಳ ಗಮನಕ್ಕೂ ತರಲಾಗಿದೆ.
ಪರಿಶೀಲನೆಯ ವೇಳೆ ಹೆರಿಗೆ ವಾರ್ಡಿನ ಬಾತ್‌ರೂಮ್‌ನಲ್ಲಿ ಬಲ್ಬ್ ಹಾಳಾಗಿದ್ದರಿಂದ ಬಾಣಂತಿಯರು ಕತ್ತಲೆಯಲ್ಲೇ ಶೌಚಾಲಯ ಬಳಸಬೇಕಾದ ಪರಿಸ್ಥಿತಿ ಕಂಡುಬಂದಿದೆ. ಇದೇ ವಾರ್ಡಿನಲ್ಲಿ ಕುಡಿಯುವ ನೀರಿನ ವಾಟರ್ ಫಿಲ್ಟರ್ ಕಳೆದ ಮೂರು ದಿನಗಳಿಂದ ಕೆಟ್ಟು ಹೋಗಿದ್ದರೂ ದುರಸ್ತಿ ಮಾಡಿಸದಿರುವುದು ಗಮನಕ್ಕೆ ಬಂದಿದೆ. ಇದರಿಂದ ರೋಗಿಗಳು ಹಾಗೂ ಅವರ ಕುಟುಂಬಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಆರೋಗ್ಯ ರಕ್ಷಣ ಸಮಿತಿಯ ಸದಸ್ಯರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ತಕ್ಷಣ ಬಲ್ಬ್ ಅಳವಡಿಕೆ, ವಾಟರ್ ಫಿಲ್ಟರ್ ದುರಸ್ತಿ ಹಾಗೂ ವಾರ್ಡುಗಳಲ್ಲಿ ಸಮರ್ಪಕ ಸ್ವಚ್ಛತೆ ಕಾಪಾಡುವಂತೆ ಒತ್ತಾಯಿಸಿದ್ದಾರೆ.
ಈ ಪರಿಶೀಲನೆಯಲ್ಲಿ ಆರೋಗ್ಯ ರಕ್ಷಣ ಸಮಿತಿಯ ಸದಸ್ಯರಾದ ಸಲ್ಮಾನ್, ರೂಪಾ ನಾರಾಯಣ್, ಅನಿತಾ ಚಂದ್ರು, ಮಂಜು ಹಾಗೂ ಐಸಾಕ್ ಲಿಂಕನ್ ಉಪಸ್ಥಿತರಿದ್ದರು.
ಸಿಬ್ಬಂದಿಗಳ ಮೇಲಿನ ತರಾಟೆಗೆ ಆಕ್ಷೇಪ
ಆರೋಗ್ಯ ರಕ್ಷಣ ಸಮಿತಿಯ ಭೇಟಿ ಸ್ವಾಗತಾರ್ಹವಾದರೂ, ಪರಿಶೀಲನೆ ವೇಳೆ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆಯೇ ಅಸಮಾಧಾನ ವ್ಯಕ್ತಪಡಿಸಿರುವ ಕ್ರಮದ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ.
ಸಾರ್ವಜನಿಕ ಆಸ್ಪತ್ರೆಯ ನಿರ್ವಹಣೆಯ ಸಂಪೂರ್ಣ ಹೊಣೆ ವೈದ್ಯಾಧಿಕಾರಿಗಳು ಹಾಗೂ ಆಡಳಿತದ ಮೇಲಿದೆ. ಆಸ್ಪತ್ರೆಯ ಮೂಲಸೌಕರ್ಯ, ದುರಸ್ತಿ, ನಿರ್ವಹಣೆ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಆಡಳಿತದದ್ದಾಗಿದ್ದು, ಸಮಸ್ಯೆಗಳ ಮೂಲವನ್ನು ಪರಿಹರಿಸುವ ಹೊಣೆ ಅಧಿಕಾರಿಗಳ ಮೇಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
"ವೈದ್ಯಾಧಿಕಾರಿಗಳನ್ನೇ ಪ್ರಶ್ನಿಸಬೇಕಿತ್ತಲ್ಲವೇ?"
ಆಸ್ಪತ್ರೆಯಲ್ಲಿನ ಬಲ್ಬ್ ಹಾಳಾಗಿರುವುದು, ವಾಟರ್ ಫಿಲ್ಟರ್ ಮೂರು ದಿನಗಳಿಂದ ಕೆಟ್ಟು ಹೋಗಿರುವುದು ಹಾಗೂ ಸ್ವಚ್ಛತೆಯ ಕೊರತೆ ಮೊದಲಾದ ಸಮಸ್ಯೆಗಳು ಒಂದೇ ದಿನದಲ್ಲಿ ಉಂಟಾಗಿರುವುದಲ್ಲ. ಇವುಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಕ್ರಮ ಕೈಗೊಂಡಿದ್ದರೆ ಆರೋಗ್ಯ ರಕ್ಷಣ ಸಮಿತಿ ಭೇಟಿ ನೀಡುವ ಸಂದರ್ಭವೇ ಬಾರದಿರಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಹೀಗಿರುವಾಗ ಕೆಳಹಂತದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕಿಂತ ಆಸ್ಪತ್ರೆಯ ಆಡಳಿತದ ಜವಾಬ್ದಾರಿಯನ್ನು ಹೊತ್ತಿರುವ ವೈದ್ಯಾಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಬೇಕಿತ್ತಲ್ಲವೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಆಡಳಿತದ ಎಚ್ಚರಿಕೆ ಅಗತ್ಯ
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಬರುವ ಮಹಿಳೆಯರು ಮತ್ತು ನವಜಾತ ಶಿಶುಗಳಿಗೆ ಸುರಕ್ಷಿತ ಹಾಗೂ ಸ್ವಚ್ಛ ವಾತಾವರಣ ಕಲ್ಪಿಸುವುದು ಅತ್ಯಂತ ಮುಖ್ಯ. ಬಾತ್‌ರೂಮ್‌ನಲ್ಲಿ ಬೆಳಕಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತೆ ಎಂಬ ಮೂಲಭೂತ ಸೌಲಭ್ಯಗಳೇ ಸಮರ್ಪಕವಾಗಿ ಇಲ್ಲದಿರುವುದು ಆಸ್ಪತ್ರೆಯ ಆಡಳಿತದ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಹುಟ್ಟಿಸಿದೆ.
ಆರೋಗ್ಯ ರಕ್ಷಣ ಸಮಿತಿಯ ಈ ಭೇಟಿ ಕೇವಲ ಪರಿಶೀಲನೆಗೆ ಸೀಮಿತವಾಗದೆ, ಆಸ್ಪತ್ರೆಯಲ್ಲಿನ ಸಮಸ್ಯೆಗಳು ಶಾಶ್ವತವಾಗಿ ಪರಿಹಾರವಾಗುವಂತೆ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Chaos at Bhadravati Public Hospital - A series of questions after the Health Protection Committee visit
