ಹೊಸನಗರದಲ್ಲಿ ಟಿಂಬರ್ ಕಾರ್ಮಿನಿಗೆ ಚಾಕು ಇರಿದು ಬರ್ಬರ ಹತ್ಯೆ- Clashes between timber workers in Hosanagar; Worker brutally murdered with knife

 SUDDILIVE || HOSANAGARA

ಹೊಸನಗರದಲ್ಲಿ ಟಿಂಬರ್ ಕಾರ್ಮಿನಿಗೆ ಚಾಕು ಇರಿದು ಬರ್ಬರ ಹತ್ಯೆ- Clashes between timber workers in Hosanagar; Worker brutally murdered with knife      
Worker, clash

ಜುಲೈ 19: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಟಿಂಬರ್ ಕೆಲಸ ಮಾಡುತ್ತಿದ್ದ ಕಾರ್ಮಿಕರ ನಡುವೆ ನಡೆದ ಮಾತಿನ ಚಕಮಕಿ ಭೀಕರ ತಿರುವು ಪಡೆದು, ಒಬ್ಬ ಕಾರ್ಮಿಕನ ಕೊಲೆಯಾದ ಘಟನೆ ನಡೆದಿದೆ. ಹೆಂಡತಿ ಬಿಟ್ಟು ಹೋಗಿರುವ ವಿಚಾರದಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಆರಂಭವಾದ ವಾಗ್ವಾದ ಕೊನೆಗೆ ಚಾಕು ಇರಿತದಲ್ಲಿ ಅಂತ್ಯಗೊಂಡಿದೆ.

ಮೃತರನ್ನು ಪರಶುರಾಮ್ ಲಮಾಣಿ ಎಂದು ಗುರುತಿಸಲಾಗಿದೆ. ಅವರು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಸಮೀಪದ ಇಚನಹಳ್ಳಿ ತಾಂಡಾ ನಿವಾಸಿಯಾಗಿದ್ದರು. ಅದೇ ತಾಂಡಾದ ನಿವಾಸಿಗಳಾದ ಪರಶುರಾಮ್ ಶೆಟ್ಟಪ್ಪ ತಂಬೂರಿ ಹಾಗೂ ಅರುಣ್ ಪುನ್ನಪ್ಪ ಲಮಾಣಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಘಟನೆ ಬಳಿಕ ಇಬ್ಬರೂ ಪರಾರಿಯಾಗಿದ್ದಾರೆ.

ಡ್ರಿಂಕ್ಸ್ ವೇಳೆ ಆರಂಭವಾದ ಗಲಾಟೆ

ಮಾಹಿತಿಯ ಪ್ರಕಾರ, ಮೇಸ್ತ್ರಿ ಲಕ್ಷಣ್ ರಾಠೋಡ ನೇತೃತ್ವದಲ್ಲಿ ಐವರು ಕಾರ್ಮಿಕರು ಮೇ ತಿಂಗಳಿನಿಂದ ಹೊಸನಗರ ಭಾಗದಲ್ಲಿ ಟಿಂಬರ್ ಕಟಿಂಗ್ ಕೆಲಸ ಮಾಡುತ್ತಿದ್ದರು. ಸೊನಲೆ ಗ್ರಾಮದ ಕುಮಾರ್ ಎಂಬುವರ ಮನೆಯನ್ನು ಬಾಡಿಗೆಗೆ ಪಡೆದು ಎಲ್ಲರೂ ಒಟ್ಟಿಗೆ ವಾಸವಾಗಿದ್ದರು. ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ತೆರಳಿ ಸಂಜೆ ವಾಪಸ್ಸಾಗಿ ಒಂದೇ ಮನೆಯಲ್ಲಿ ಉಳಿಯುತ್ತಿದ್ದರು.

ಶನಿವಾರ ರಾತ್ರಿ ಕೆಲಸ ಮುಗಿಸಿ ಎಲ್ಲರೂ ಸೇರಿ ಮದ್ಯಪಾನ ಮಾಡುತ್ತಿದ್ದ ವೇಳೆ ಅರುಣ್ ಪುನ್ನಪ್ಪ ಲಮಾಣಿಯ ವೈಯಕ್ತಿಕ ಜೀವನದ ವಿಚಾರ ಪ್ರಸ್ತಾಪವಾಗಿದೆ. ಹೆಂಡತಿ ಬಿಟ್ಟು ಹೋಗಿರುವ ವಿಚಾರದಲ್ಲಿ ಪರಶುರಾಮ್ ಲಮಾಣಿ ಬುದ್ಧಿವಾದ ಹೇಳಿದ್ದರಿಂದ ಮಾತಿಗೆ ಮಾತು ಬೆಳೆದು ತೀವ್ರ ವಾಗ್ವಾದ ನಡೆದಿದೆ.

ಗಲಾಟೆ ಶಮನವಾದರೂ ಮತ್ತೆ ದಾಳಿ

ಮೊದಲಿಗೆ ಗಲಾಟೆ ಹೆಚ್ಚಾಗುತ್ತಿದ್ದಂತೆ ಮೇಸ್ತ್ರಿ ಲಕ್ಷಣ್ ರಾಠೋಡ ಹಾಗೂ ಇತರ ಕಾರ್ಮಿಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಅರುಣ್ ಪುನ್ನಪ್ಪ ಲಮಾಣಿ ಹಾಗೂ ಪರಶುರಾಮ್ ಶೆಟ್ಟಪ್ಪ ತಂಬೂರಿ ಮತ್ತೆ ಪರಶುರಾಮ್ ಲಮಾಣಿ ಬಳಿ ಹೋಗಿ ಜಗಳ ಆರಂಭಿಸಿದ್ದಾರೆ.

"ನನ್ನ ಗೆಳೆಯನಿಗೆ ಬುದ್ಧಿ ಹೇಳ್ತಿಯಾ... ನೀನೇನು ಸಾಚನಾ?" ಎಂದು ಪ್ರಶ್ನಿಸುತ್ತಾ ಮತ್ತೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.

ಚಾಕು ಇರಿದು ಕೊಲೆ

ವಾದವಿವಾದ ತಾರಕ್ಕೇರಿದ ವೇಳೆ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡ ಪರಶುರಾಮ್ ಶೆಟ್ಟಪ್ಪ ತಂಬೂರಿ, ಪರಶುರಾಮ್ ಲಮಾಣಿಯ ಕುತ್ತಿಗೆ ಭಾಗಕ್ಕೆ ಚುಚ್ಚಿದ್ದಾನೆ ಎನ್ನಲಾಗಿದೆ. ಈ ವೇಳೆ ಅರುಣ್ ಪುನ್ನಪ್ಪ ಲಮಾಣಿ ಮೃತನ ಕಾಲು ಹಿಡಿದು ಎಳೆದಿದ್ದರಿಂದ ತೀವ್ರ ಗಾಯಗೊಂಡ ಪರಶುರಾಮ್ ಲಮಾಣಿ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


15 ದಿನಗಳ ಹಿಂದೆ ಊರಿಗೆ ಹೋಗಿ, ನಿನ್ನೆ ಮರಳಿದ್ದ ಕಾರ್ಮಿಕ

ಮೃತ ಪರಶುರಾಮ್ ಲಮಾಣಿ ಸುಮಾರು 15 ದಿನಗಳ ಹಿಂದೆ ಊರಿಗೆ ತೆರಳಿದ್ದು, ತಮ್ಮ ಮನೆಯ ಸ್ಲಾಬ್ ಕೆಲಸ ಮುಗಿಸಿಕೊಂಡು ಶನಿವಾರ ಸಂಜೆ ಮತ್ತೆ ಹೊಸನಗರಕ್ಕೆ ಕೆಲಸಕ್ಕೆ ಮರಳಿದ್ದರು. ಊರಿಗೆ ಹೋಗಿ ವಾಪಸ್ಸಾದ ಕೆಲವೇ ಗಂಟೆಗಳಲ್ಲಿ ಈ ದುರ್ಘಟನೆ ಸಂಭವಿಸಿರುವುದು ಕುಟುಂಬಸ್ಥರ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ.

ಆರೋಪಿಗಳಿಗಾಗಿ ಶೋಧ

ಘಟನೆ ಬಳಿಕ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಹೊಸನಗರ ಪೊಲೀಸರು ಬಲೆ ಬೀಸಿದ್ದಾರೆ. ಮೃತದೇಹವನ್ನು ಹೊಸನಗರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.

ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತ್ಯುವಿಗೆ ಕಾರಣವಾದ ನಿಖರ ಸಂದರ್ಭಗಳು ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Clashes between timber workers in Hosanagar; Worker brutally murdered with knife  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close