SUDDILIVE || SHIVAMOGGA
ಸೂಡ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಆರಿಫ್ ಉಲ್ಲಾರನ್ನ ನೇಮಿಸಲು ಆಗ್ರಹ-Demand to appoint Mohammad Arif Ullah as the president of Suda
ಶಿವಮೊಗ್ಗ, ಜುಲೈ 25: ಕಾಂಗ್ರೆಸ್ ಪಕ್ಷವನ್ನು ಹಲವು ದಶಕಗಳಿಂದ ಬೆಂಬಲಿಸುತ್ತ ಬಂದಿರುವ ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಸ್ಥಾನವನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬುಲ್ಲಾ ಒತ್ತಾಯಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸೂಡಾ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ತತ್ವದಡಿ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಬದ್ಧತೆಯನ್ನು ತೋರಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದ ಯಶಸ್ಸಿನಲ್ಲಿ ಮುಸ್ಲಿಂ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಹಲವು ವರ್ಷಗಳಿಂದ ಈ ಸಮುದಾಯ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಬಹುಮತದೊಂದಿಗೆ ಸರ್ಕಾರ ರಚಿಸಲು ಮುಸ್ಲಿಂ ಸಮುದಾಯದ ಮತದಾನ ಮತ್ತು ಬೆಂಬಲ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಪಡೆದ ಸುಮಾರು 68 ಸಾವಿರ ಮತಗಳಲ್ಲಿ 52 ಸಾವಿರಕ್ಕೂ ಹೆಚ್ಚು ಮತಗಳು ಮುಸ್ಲಿಂ ಸಮುದಾಯದಿಂದಲೇ ಬಂದಿವೆ ಎಂದು ಅವರು ತಿಳಿಸಿದರು. ಈ ಬೆಂಬಲದಿಂದಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ಗೌರವಯುತ ಮತಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಮೊದಲ ಹಂತದ ನಿಗಮ-ಮಂಡಳಿ ನೇಮಕಾತಿಯಲ್ಲಿ ಜಿಲ್ಲಾ ಕೇಂದ್ರವಾಗಿರುವ ಶಿವಮೊಗ್ಗದಿಂದ ಮುಸ್ಲಿಂ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ದೊರಕಿಲ್ಲ. ಇದರಿಂದ ಸಮುದಾಯದಲ್ಲಿ ನಿರಾಸೆ ಉಂಟಾಗಿದೆ. ಆದ್ದರಿಂದ ಎರಡನೇ ಹಂತದ ನೇಮಕಾತಿಯಲ್ಲಿ ಈ ಕೊರತೆಯನ್ನು ಸರಿಪಡಿಸಿ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಸಂಘಟನೆಗಳಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ, ಮುಸ್ಲಿಂ ಸಮುದಾಯದ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿರುವ ಯುವ ನಾಯಕ ಮೊಹಮ್ಮದ್ ಆರಿಫ್ ಉಲ್ಲಾ ಅವರನ್ನು ಶಿವಮೊಗ್ಗ ಸೂಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದರು.
ಸಾಮಾಜಿಕ ನ್ಯಾಯ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಸೂಕ್ತ ಗೌರವ ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ಬೇಡಿಕೆಯನ್ನು ಮುಂದಿರಿಸಲಾಗುತ್ತಿದೆ ಎಂದು ಸೈಯದ್ ಮುಜೀಬುಲ್ಲಾ ಹೇಳಿದರು.
Demand to appoint Mohammad Arif Ullah as the president of Suda

