SUDDILIVE || SHIVAMOGGA
ಡಾ. ಎಚ್.ಎಸ್. ನಾಗೇಂದ್ರ ಹೆದ್ದೂರು ಅವರಿಗೆ ಮಾನವರತ್ನ ರಾಜ್ಯ ಪ್ರಶಸ್ತಿ; ಸಮಾಜ ಸೇವೆಗೆ ಸರೋಜಮ್ಮಗೂ ಗೌರವ-Dr. H.S. Nagendra Heddur receives Maav Ratna State Award; Sarojamma also honored for social service
ಬೆಂಗಳೂರು- ಕನ್ನಡ ಭಾಷೆ, ಕಾರ್ಮಿಕರ ಹಕ್ಕುಗಳು ಹಾಗೂ ಸಮಾಜ ಸೇವೆಯಲ್ಲಿ ಸಲ್ಲಿಸಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ತೀರ್ಥಹಳ್ಳಿ ತಾಲ್ಲೂಕಿನ ಹೆದ್ದೂರಿನ ಡಾ. ಎಚ್.ಎಸ್. ನಾಗೇಂದ್ರ ಹಾಗೂ ಶ್ರೀಮತಿ ಸರೋಜಮ್ಮ ಅವರಿಗೆ "ಮಾನವರತ್ನ ರಾಜ್ಯ ಪ್ರಶಸ್ತಿ" ನೀಡಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಓರಿಯಂಟಲ್ ಪೌಂಡೇಶನ್ (ರಿ) ವತಿಯಿಂದ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಭವನ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆಯಲ್ಲಿ ಜುಲೈ 12ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ಡಾ. ಎಚ್.ಎಸ್. ನಾಗೇಂದ್ರ ಅವರು ಡಿ ಗ್ರೂಪ್ ನೌಕರರ ರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯಾಧ್ಯಕ್ಷರು ಆಗಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದ ಹೊರ ರಾಜ್ಯಗಳಲ್ಲಿಯೂ ಕನ್ನಡ ಭಾಷೆಯ ಬಳಕೆ ಮತ್ತು ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ವಿಶೇಷ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಡಿ ಗ್ರೂಪ್ ನೌಕರರ 8ನೇ ವೇತನ ಆಯೋಗದ ಜಾರಿ, 11 ಪ್ರಮುಖ ಬೇಡಿಕೆಗಳ ಈಡೇರಿಕೆ, ದಿನಗೂಲಿ ನೌಕರರು, ಹೊರಗುತ್ತಿಗೆ ನೌಕರರು, ಆಶಾ ಕಾರ್ಯಕರ್ತೆಯರು, ನೀರಗಂಟಿಗಳು, ಗ್ರಾಮ ಸಹಾಯಕರು, ಕ್ಷೇಮಾಭಿವೃದ್ಧಿ ಸಿಬ್ಬಂದಿ, ಹೊರಗುತ್ತಿಗೆ ವೈದ್ಯರು ಸೇರಿದಂತೆ ವಿವಿಧ ವರ್ಗದ ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿ, ಹಲವು ರಾಜ್ಯಗಳಲ್ಲಿ ಅವರ ಬೇಡಿಕೆಗಳು ಈಡೇರುವಂತೆ ಶ್ರಮಿಸಿರುವ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಪರಿಗಣಿಸಿ ಶ್ರೀಮತಿ ಸರೋಜಮ್ಮ (ಪತಿ: ಎಚ್.ಎಸ್. ಸೋಮಯ್ಯ ಗೌಡ), ಹೆದ್ದೂರು, ತೀರ್ಥಹಳ್ಳಿ ತಾಲ್ಲೂಕು ಅವರಿಗೆ ಸಹ ಮಾನವರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಕನ್ನಡಾಭಿಮಾನಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
ಈ ಗೌರವವು ತೀರ್ಥಹಳ್ಳಿ ತಾಲ್ಲೂಕು ಹಾಗೂ ಶಿವಮೊಗ್ಗ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದ್ದು, ಸಾರ್ವಜನಿಕರು, ಸ್ನೇಹಿತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಡಾ. ಎಚ್.ಎಸ್. ನಾಗೇಂದ್ರ ಮತ್ತು ಶ್ರೀಮತಿ ಸರೋಜಮ್ಮ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
