SUDDILIVE || SHIVAMOGGA
ಎಲ್ಲೂ ಸಲ್ಲದ ಟ್ರಾನ್ಸ್ ಪೋರ್ಟ್ ವಾಹನಗಳಿಗೆ ತರೀಕೆರೆಯಲ್ಲಿ ಸಿಗಲಿದೆ ಎಫ್ ಸಿ-FC will be available in Tarikere for transport vehicles that are not eligible at all
![]() |
ಶಿವಮೊಗ್ಗ/ತರೀಕೆರೆ: ರಾಜ್ಯದ ಇತರೆ ಆರ್‌ಟಿಒ ಕಚೇರಿಗಳಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರುವ ಫಿಟ್ನೆಸ್ (ಎಫ್‌ಸಿ) ನಿಯಮಗಳನ್ನು ತರೀಕೆರೆ ಆರ್‌ಟಿಒ ಕಚೇರಿಯಲ್ಲಿ ಉಲ್ಲಂಘಿಸಿ ದೋಷಪೂರಿತ ಸಾರಿಗೆ ವಾಹನಗಳಿಗೆ ಫಿಟ್ನೆಸ್ ಪ್ರಮಾಣಪತ್ರ (Fitness Certificate) ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಮಾಹಿತಿಗಳ ಪ್ರಕಾರ, ತರೀಕೆರೆ ಆರ್‌ಟಿಒ ಕಚೇರಿಯ ಕೆಲ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಯಡವಟ್ಟಿನಿಂದ ಬೆಂಗಳೂರು, ಶಿವಮೊಗ್ಗ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ಸಾರಿಗೆ ವಾಹನಗಳಿಗೂ ಇಲ್ಲಿ ಎಫ್‌ಸಿ ಮಾಡಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ರಾಜ್ಯದ ಬೇರೆಡೆ ನಿಯಮಾನುಸಾರ ಎಫ್‌ಸಿ ಸಿಗದ ವಾಹನಗಳಿಗೂ ತರೀಕೆರೆಯಲ್ಲಿ ಸುಲಭವಾಗಿ ಫಿಟ್ನೆಸ್ ಪ್ರಮಾಣಪತ್ರ ದೊರೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಎಫ್‌ಸಿ ಪಡೆಯಲು ಕಟ್ಟುನಿಟ್ಟಿನ ನಿಯಮಗಳಿವೆ
ಮೋಟಾರು ವಾಹನ ಕಾಯ್ದೆಯ ಪ್ರಕಾರ ಹೊಸ ಯೆಲ್ಲೋ ಬೋರ್ಡ್ (ಟ್ರಾನ್ಸ್‌ಪೋರ್ಟ್) ವಾಹನಗಳಿಗೆ ಮೊದಲ ಎರಡು ವರ್ಷಗಳ ನಂತರ ಪ್ರತಿ ಎರಡು ವರ್ಷಕ್ಕೊಮ್ಮೆ ಫಿಟ್ನೆಸ್ ಪ್ರಮಾಣಪತ್ರ ಕಡ್ಡಾಯವಾಗಿದೆ. ವಾಹನವು ಎಂಟು ವರ್ಷ ಪೂರೈಸಿದ ಬಳಿಕ ಪ್ರತಿ ವರ್ಷವೂ ಎಫ್‌ಸಿ ಮಾಡಿಸಿಕೊಳ್ಳಬೇಕು.
ಎಫ್‌ಸಿ ವೇಳೆ ವಾಹನದಲ್ಲಿ ಹಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನದ ಮೇಲೆ ಅನಧಿಕೃತ ಹೆಸರು ಅಥವಾ ಬರಹ ಇರಬಾರದು, ನಿಯಮಬಾಹಿರ ಕೂಲಿಂಗ್ ಫಿಲ್ಮ್ ಅಳವಡಿಸಿರಬಾರದು, ವಾಹನದ ಸುತ್ತಲೂ ಕಡ್ಡಾಯವಾಗಿ ರಿಫ್ಲೆಕ್ಟರ್‌ಗಳು ಅಳವಡಿಸಿರಬೇಕು. ಇಂತಹ ಎಲ್ಲ ಮಾನದಂಡಗಳನ್ನು ಪೂರೈಸಿದ ವಾಹನಗಳಿಗೆ ಮಾತ್ರ ಫಿಟ್ನೆಸ್ ಪ್ರಮಾಣಪತ್ರ ನೀಡಬೇಕು ಎಂಬುದು ನಿಯಮವಾಗಿದೆ.
ರಿಫ್ಲೆಕ್ಟರ್ ಇಲ್ಲದ ವಾಹನಕ್ಕೂ ಎಫ್‌ಸಿ?
![]() |
| ಈ ರೀತಿ ಎಲ್ಲೋ ಕಲರ್ ನ ರಿಫ್ಲೆಕ್ಟರ್ ನ್ನ ಅಳವಡಿಸಬೇಕು |
ಆದರೆ ತರೀಕೆರೆ ಆರ್‌ಟಿಒದಲ್ಲಿ ರಿಫ್ಲೆಕ್ಟರ್ ಅಳವಡಿಸದೇ ಇರುವ ಕೆಲವು ಟ್ರಾನ್ಸ್‌ಪೋರ್ಟ್ ವಾಹನಗಳಿಗೂ ಫಿಟ್ನೆಸ್ ಪ್ರಮಾಣಪತ್ರ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಾಹನದ ಮೇಲಿನ ಕೆಲವು ಸಣ್ಣಪುಟ್ಟ ದೋಷಗಳನ್ನು ಅಧಿಕಾರಿಗಳು ಕಡೆಗಣಿಸಬಹುದು. ಆದರೆ ರಸ್ತೆ ಸುರಕ್ಷತೆಗೆ ಅತ್ಯಂತ ಪ್ರಮುಖವಾದ ರಿಫ್ಲೆಕ್ಟರ್‌ಗಳೇ ಇಲ್ಲದ ವಾಹನಗಳಿಗೆ ಎಫ್‌ಸಿ ನೀಡಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಳೆದ ಎರಡು ವರ್ಷಗಳಿಂದ ಇಂತಹ ವಾಹನಗಳು ತರೀಕೆರೆ ಆರ್‌ಟಿಒ ಮೂಲಕ ಫಿಟ್ನೆಸ್ ಪ್ರಮಾಣಪತ್ರ ಪಡೆಯುತ್ತಿವೆ ಎನ್ನುವ ಆರೋಪವೂ ಕೇಳಿಬಂದಿದ್ದು, ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಪಘಾತ ಸಂಭವಿಸಿದರೆ ಹೊಣೆ ಯಾರು?
ನಿಯಮಗಳನ್ನು ಉಲ್ಲಂಘಿಸಿರುವ ವಾಹನಗಳು ಅಪಘಾತಕ್ಕೀಡಾದರೆ ಅದರ ಹೊಣೆಗಾರಿಕೆ ಕೇವಲ ವಾಹನ ಮಾಲೀಕರದ್ದೇ ಅಲ್ಲ, ನಿಯಮ ಪರಿಶೀಲಿಸದೆ ಫಿಟ್ನೆಸ್ ಪ್ರಮಾಣಪತ್ರ ನೀಡಿದ ಅಧಿಕಾರಿಗಳ ಮೇಲೂ ನಿಗದಿಯಾಗಬೇಕೆಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ವಾಹನ ಪರಿಶೀಲನೆಯಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಂಡರೆ ಮಾತ್ರ ಇಂತಹ ಅಕ್ರಮಗಳಿಗೆ ಕಡಿವಾಣ ಬೀಳಬಹುದು ಎಂದು ಹಲವರು ಒತ್ತಾಯಿಸಿದ್ದಾರೆ.
ಸರ್ಕಾರ ತನಿಖೆ ನಡೆಸುತ್ತದೆಯೇ?
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತರೀಕೆರೆ ಆರ್‌ಟಿಒ ಕಚೇರಿಯಲ್ಲಿ ನಡೆಯುತ್ತಿರುವ ಎಫ್‌ಸಿ ಪ್ರಕ್ರಿಯೆಯನ್ನು ಸಮಗ್ರವಾಗಿ ಪರಿಶೀಲಿಸಿ, ಆರೋಪಗಳಲ್ಲಿ ಸತ್ಯಾಂಶವಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಸೂಚನೆ: ಮೇಲಿನ ವರದಿ ಸಾರ್ವಜನಿಕರಿಂದ ವ್ಯಕ್ತವಾಗಿರುವ ಆರೋಪಗಳು ಮತ್ತು ಲಭ್ಯ ಮಾಹಿತಿಯನ್ನು ಆಧರಿಸಿದೆ. ಆರೋಪಗಳ ಕುರಿತು ಸಂಬಂಧಪಟ್ಟ ಆರ್‌ಟಿಒ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಲಭ್ಯವಾದಲ್ಲಿ ಅದಕ್ಕೂ ಅವಕಾಶ ನೀಡಲಾಗುವುದು.
FC will be available in Tarikere for transport vehicles that are not eligible at all


