ರೈತ ಹುತಾತ್ಮರ ದಿನಾಚರಣೆ ಜು.21ಕ್ಕೆ: ಬರಗಾಲ ಘೋಷಣೆ ಸೇರಿ 15 ಬೇಡಿಕೆಗಳ ಈಡೇರಿಕೆಗೆ ಆಗ್ರಹ- Farmers' Martyrs' Day to be observed on July 21: Demand for fulfillment of 15 demands including declaration of drought

 SUDDILIVE || SHIVAMOGGA

ರೈತ ಹುತಾತ್ಮರ ದಿನಾಚರಣೆ ಜು.21ಕ್ಕೆ: ಬರಗಾಲ ಘೋಷಣೆ ಸೇರಿ 15 ಬೇಡಿಕೆಗಳ ಈಡೇರಿಕೆಗೆ ಆಗ್ರಹ-  Farmers' Martyrs' Day to be observed on July 21: Demand for fulfillment of 15 demands including declaration of drought 
Martyrs,day

ಶಿವಮೊಗ್ಗ: ನರಗುಂದ–ನವಲಗುಂದ ರೈತ ಹುತಾತ್ಮರ 46ನೇ ವರ್ಷದ ಸ್ಮರಣಾರ್ಥ ರೈತ ಹುತಾತ್ಮ ಬಸಪ್ಪ ಶಿವಪ್ಪ ಲಕ್ಕುಂಡಿ ಅವರ ನವೀಕರಿಸಿದ ರೈತ ಸ್ಮಾರಕ ಉದ್ಘಾಟನಾ ಸಮಾರಂಭವನ್ನು ಜುಲೈ 21ರಂದು ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಅಳಗವಾಡಿಯ ರೈತ ಸ್ಮಾರಕದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ತಿಳಿಸಿದ್ದಾರೆ.

ಶುಕ್ರವಾರ ಪ್ರಕಟಣೆ ನೀಡಿರುವ ಅವರು, 1980ರ ಜುಲೈ 21ರಂದು ನರಗುಂದ ತಹಸೀಲ್ದಾರ್ ಕಚೇರಿ ಎದುರು ನೀರಾವರಿ ತೆರಿಗೆ ಹಾಗೂ ಕಂದಾಯ ವಸೂಲಿ ವಿರುದ್ಧ ರೈತರು ನಡೆಸುತ್ತಿದ್ದ ಸತ್ಯಾಗ್ರಹದ ವೇಳೆ ನಡೆದ ಪೊಲೀಸ್ ಗೋಲಿಬಾರಿನಲ್ಲಿ ಅಳಗವಾಡಿಯ ಬಸಪ್ಪ ಶಿವಪ್ಪ ಲಕ್ಕುಂಡಿ ಹಾಗೂ ಚಿಕ್ಕನರಗುಂದದ ವೀರಪ್ಪ ಕಡ್ಲಿಕೊಪ್ಪ ಮೃತಪಟ್ಟಿದ್ದರು. ಅಂದಿನಿಂದ ಪ್ರತಿ ವರ್ಷ ರೈತ ಹುತಾತ್ಮರನ್ನು ಸ್ಮರಿಸಿ ರೈತರ ಸಮಸ್ಯೆಗಳ ಕುರಿತು ಚರ್ಚಿಸುವ ಸಂಪ್ರದಾಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಈ ಬಾರಿಯ ಕಾರ್ಯಕ್ರಮದಲ್ಲಿ ನವೀಕರಿಸಿದ ರೈತ ಸ್ಮಾರಕವನ್ನು ಉದ್ಘಾಟಿಸುವುದರ ಜೊತೆಗೆ ರೈತರ ಪ್ರಸ್ತುತ ಸಮಸ್ಯೆಗಳು ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ರಾಜ್ಯ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಸರ್ಕಾರ ಇಡೀ ರಾಜ್ಯವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಸಂಘ ಒತ್ತಾಯಿಸಿದೆ. ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಉದ್ಯೋಗ ಖಾತರಿ, ಮರುಬಿತ್ತನೆಗೆ ಉಚಿತ ಬೀಜ ಮತ್ತು ರಸಗೊಬ್ಬರ ಪೂರೈಕೆ, ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆಗಳನ್ನು ವಿದ್ಯುತ್ ಬಿಲ್ ಪಾವತಿಸಿ ಪುನರಾರಂಭಿಸುವಂತೆ ಆಗ್ರಹಿಸಿದೆ.

ಬಿಡದಿ ಟೌನ್‌ಶಿಪ್ ಯೋಜನೆ ಹೆಸರಿನಲ್ಲಿ ರೈತರ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಗಳನ್ನು ಕೈಬಿಡಬೇಕು. ಸಣ್ಣ ಮತ್ತು ಅತಿಸಣ್ಣ ರೈತರ ಹಿತಾಸಕ್ತಿಯನ್ನು ಸರ್ಕಾರ ಕಾಪಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ಬೇಡಿಕೆಗಳು

ಸಂಘವು ಸರ್ಕಾರದ ಮುಂದೆ 15 ಬೇಡಿಕೆಗಳನ್ನು ಮುಂದಿಟ್ಟಿದ್ದು, ಕಳಸ–ಬಂಡೂರಿ ಮಹಾದಾಯಿ ಯೋಜನೆ ಜಾರಿ, 2025–26ರ ಬೆಳೆ ವಿಮೆ ಪರಿಹಾರ ಬಿಡುಗಡೆ, ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸಿದ ಬೆಳೆಗಳ ಹಣವನ್ನು ತಕ್ಷಣ ಪಾವತಿಸುವುದು, ಕಬ್ಬು ಬೆಳೆಗಾರರ ಬಾಕಿ ಪಾವತಿ, ವಿಪತ್ತು ಪರಿಹಾರ ನಿಧಿ ಹೆಚ್ಚಳ, ರೈತ ವಿರೋಧಿ ಕೃಷಿ ಕಾಯ್ದೆಗಳ ಹಿಂಪಡೆಯುವುದು, ಸಂಪೂರ್ಣ ಸಾಲಮನ್ನಾ, ವಿದ್ಯುತ್ ಖಾಸಗೀಕರಣ ಕೈಬಿಡುವುದು, ಡಾ. ಎಂ.ಎಸ್. ಸ್ವಾಮಿನಾಥನ್ ಶಿಫಾರಸಿನಂತೆ ಎಂಎಸ್‌ಪಿ ನಿಗದಿ, ಆಲಮಟ್ಟಿ ಹಾಗೂ ತುಂಗಭದ್ರಾ ನೀರಾವರಿ ಯೋಜನೆಗಳ ಕಾಮಗಾರಿ ವೇಗಗೊಳಿಸುವುದು, ಸಮಗ್ರ ನೀರಾವರಿ ಯೋಜನೆ ಜಾರಿ, ಗೊಬ್ಬರ ಸಮರ್ಪಕ ಪೂರೈಕೆ, ಸೋಲಾರ್ ಮತ್ತು ವಿಂಡ್ ಪವರ್ ಕಂಪನಿಗಳ ವಿರುದ್ಧ ಕ್ರಮ ಹಾಗೂ ಬಗರ್‌ಹುಕುಂ ಸಾಗುವಾಳಿದಾರರಿಗೆ ಹಕ್ಕುಪತ್ರ ನೀಡುವುದು ಸೇರಿವೆ.

ಜುಲೈ 21ರಂದು ನಡೆಯುವ ಕಾರ್ಯಕ್ರಮದಲ್ಲಿ ರೈತರು, ರೈತ ಮಹಿಳೆಯರು ಹಾಗೂ ಕೃಷಿ ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘ ಮನವಿ ಮಾಡಿದೆ.

Farmers' Martyrs' Day to be observed on July 21: Demand for fulfillment of 15 demands including declaration of drought 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close