ಹುಲಿಕಲ್ ಘಾಟ್ ಕಾಮಗಾರಿ ಶೀಘ್ರ ಪೂರ್ಣ; ತುಂಗಾ ನದಿಗೆ ₹50 ಕೋಟಿ ವೆಚ್ಚದ ಹೊಸ ಸೇತುವೆ ನವೆಂಬರ್‌ನಲ್ಲಿ ಆರಂಭ: ಸಚಿವ ಸತೀಶ್- Hulikal Ghat work to be completed soon; New bridge over Tunga river costing ₹50 crore to be inaugurated in November: Minister Satish Jarkiholi

 SUDDILIVE || HOSANAGARA

ಹುಲಿಕಲ್ ಘಾಟ್ ಕಾಮಗಾರಿ ಶೀಘ್ರ ಪೂರ್ಣ; ತುಂಗಾ ನದಿಗೆ ₹50 ಕೋಟಿ ವೆಚ್ಚದ ಹೊಸ ಸೇತುವೆ ನವೆಂಬರ್‌ನಲ್ಲಿ ಆರಂಭ: ಸಚಿವ ಸತೀಶ್- Hulikal Ghat work to be completed soon; New bridge over Tunga river costing ₹50 crore to be inaugurated in November: Minister Satish Jarkiholi  

Hulikal, ghat

ಹೊಸನಗರ, ಜು.14: ಹುಲಿಕಲ್ ಘಟಿಯಲ್ಲಿ ರಸ್ತೆ ಕಾಮಗಾರಿ ದುರಂತ ನಂತರ ರಸ್ತೆ ಪುನರ್ ನಿರ್ಮಾಣ ಹಾಗೂ ವಾಹನಗಳ ಚಾಲನೆ ನೀಡಿದ ಬಳಿಕ ಪಿಡಬ್ಲೂಡಿ ಸಚಿವ ಸತೀಶ್ ಜಾರಕಿಹೊಳೆ ಮತ್ತೊಮ್ಮೆ ಭೇಟಿ ನೀಡಿ ಸಂಪೂರ್ಣ ಕಾಮಗಾರಿಯ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿದರು. 

ನಂತರ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳೆ ಹುಲಿಕಲ್ ಘಾಟ್‌ನಲ್ಲಿ ನಡೆಯುತ್ತಿರುವ ರಸ್ತೆ ಸುರಕ್ಷತಾ ಕಾಮಗಾರಿಯನ್ನು ಮಳೆಗಾಲದ ನಂತರ ಸಂಪೂರ್ಣವಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.  ಈ ಯೋಜನೆ ಇಲಾಖೆಗೆ ಸವಾಲಿನ ಕೆಲಸವಾಗಿದ್ದು, ಪದೇ ಪದೇ ಅಪಘಾತಗಳು ಮತ್ತು ಸಮಸ್ಯೆಗಳು ಎದುರಾಗುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಇಲಾಖೆಗೆ ಸವಾಲಾಗಿದ್ದ ಹುಲಿಕಲ್ ಘಾಟ್

ಹುಲಿಕಲ್ ಘಾಟ್‌ನಲ್ಲಿ ಹಲವು ವರ್ಷಗಳಿಂದ ರಸ್ತೆ ಕುಸಿತ ಹಾಗೂ ಸುರಕ್ಷತಾ ಸಮಸ್ಯೆಗಳು ಎದುರಾಗುತ್ತಿದ್ದು, ಅನೇಕ ಅಪಘಾತಗಳ ನಂತರ ಸರ್ಕಾರದ ಗಮನಕ್ಕೆ ಬಂದಿದೆ. ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿತ್ತು ಎಂದು ಸಚಿವರು ಹೇಳಿದರು.

ಮಳೆಗಾಲದ ಕಾರಣದಿಂದ ಕಾಮಗಾರಿ ಸಂಪೂರ್ಣ ಮುಗಿಸಲು ಸಾಧ್ಯವಾಗಿಲ್ಲ. ಈಗಾಗಲೇ ಭಾರೀ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಖಾಲಿ ಸರಕು ವಾಹನಗಳ ಸಂಚಾರಕ್ಕೂ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಹಸಿರುಮಕ್ಕಿ ಸೇತುವೆ ಶೀಘ್ರ ಉದ್ಘಾಟನೆ

ಹಸಿರುಮಕ್ಕಿ ಸೇತುವೆ ಕಾಮಗಾರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಮಗಾರಿ ಅಂತಿಮ ಹಂತದಲ್ಲಿದ್ದು ತಾವು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು. ಒಂದು ಅಥವಾ ಎರಡು ತಿಂಗಳೊಳಗೆ ಸೇತುವೆ ಪೂರ್ಣಗೊಂಡು ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ ಎಂದರು.

ರಾಜ್ಯದಾದ್ಯಂತ ಸ್ಥಗಿತಗೊಂಡಿರುವ ಸಾರ್ವಜನಿಕ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಹುಲಿಕಲ್ ಘಾಟ್ ಸಮಗ್ರ ಅಭಿವೃದ್ಧಿಗೆ ಸಿದ್ಧತೆ

ಹುಲಿಕಲ್ ಘಾಟ್ ಅನ್ನು ಆಗುಂಬೆ ಹಾಗೂ ಕೊಲ್ಲೂರು ಘಾಟ್‌ಗಳ ಮಾದರಿಯಲ್ಲಿ ಇನ್ನಷ್ಟು ಸಮಗ್ರವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈಗ ನಡೆಯುತ್ತಿರುವ ಕಾಮಗಾರಿಯಿಂದ ಸಮಸ್ಯೆ ಪರಿಹಾರವಾಗಲಿದೆ ಎಂಬ ವಿಶ್ವಾಸವಿದೆ ಎಂದರು.

ಸಾರ್ವಜನಿಕರು ಹಾಗೂ ಅಧಿಕಾರಿಗಳಿಂದ ಉತ್ತಮ ಸಲಹೆಗಳು ಬಂದರೆ ಅವುಗಳನ್ನು ಅನುಷ್ಠಾನಗೊಳಿಸಲು ಲೋಕೋಪಯೋಗಿ ಇಲಾಖೆ ಸಂಪೂರ್ಣ ಸಿದ್ಧವಿದೆ ಎಂದು ತಿಳಿಸಿದರು.

ಶಿವಮೊಗ್ಗ ತುಂಗಾ ನದಿಗೆ ₹50 ಕೋಟಿ ವೆಚ್ಚದ ಹೊಸ ಸೇತುವೆ

ಶಿವಮೊಗ್ಗ ನಗರದಲ್ಲಿ ತುಂಗಾ ನದಿಗೆ ಹೊಸ ಸೇತುವೆ ನಿರ್ಮಾಣದ ಕುರಿತು ಮಾತನಾಡಿದ ಸಚಿವರು, ಬಹುಕಾಲದ ಬೇಡಿಕೆಗೆ ಸ್ಪಂದಿಸಿ ₹50 ಕೋಟಿ ಅನುದಾನವನ್ನು ಈಗಾಗಲೇ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಈ ಯೋಜನೆಯ ಕಾಮಗಾರಿ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ರಸ್ತೆ, ಕಟ್ಟಡ ಕಾಮಗಾರಿಗಳು ಸ್ಥಗಿತವಾಗಿಲ್ಲ

ರಾಜ್ಯದ ವಿವಿಧೆಡೆ ರಸ್ತೆ ಹಾಗೂ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕುಂದಾಪುರ ಸೇರಿದಂತೆ ಹಲವು ಕಾಮಗಾರಿಗಳಿಗೆ ಹೊಸದಾಗಿ ಅನುಮೋದನೆ ನೀಡಲಾಗಿದೆ ಎಂದರು.

ಕೆಳಭಾಗದ ಕಾಮಗಾರಿ ಪೂರ್ಣಗೊಂಡಿದ್ದು, ಮೇಲ್ಭಾಗದ ಕಾಮಗಾರಿಗೂ ಇತ್ತೀಚೆಗೆ ಅನುಮೋದನೆ ದೊರೆತಿದೆ. ಯಾವುದೇ ಕಾಮಗಾರಿ ಸ್ಥಗಿತಗೊಂಡಿಲ್ಲ, ಎಲ್ಲವೂ ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ

ಬೈಂದೂರು–ರಾಣೆಬೆನ್ನೂರು ಹೆದ್ದಾರಿ ಸೇರಿದಂತೆ ಕೆಲವು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವಿಳಂಬ ಕುರಿತು ಪ್ರತಿಕ್ರಿಯಿಸಿದ ಸಚಿವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದರು.

ಆಗುಂಬೆ ಘಾಟ್ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿ, ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗುತ್ತಿಗೆ ಕಾರ್ಮಿಕರ ವೇತನ ಸಮಸ್ಯೆಗೆ ಹೊಸ ವ್ಯವಸ್ಥೆ

ಗುತ್ತಿಗೆ ಆಧಾರದ ಮೇಲೆ ರಸ್ತೆ ನಿರ್ವಹಣೆ ಮಾಡುವ ಕಾರ್ಮಿಕರಿಗೆ ಹಲವು ತಿಂಗಳಿಂದ ವೇತನ ಸಿಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಗುತ್ತಿಗೆದಾರರ ಮೂಲಕವೇ ಪಾವತಿ ನಡೆಯುತ್ತಿರುವುದರಿಂದ ವಿಳಂಬವಾಗುತ್ತಿದೆ ಎಂದು ಹೇಳಿದರು.

ಈ ಸಮಸ್ಯೆ ನಿವಾರಣೆಗೆ ಮುಂದಿನ ದಿನಗಳಲ್ಲಿ ಗುತ್ತಿಗೆ ಕಾರ್ಮಿಕರನ್ನು ಜಿಲ್ಲಾಮಟ್ಟದಲ್ಲೇ ನೇರವಾಗಿ ನೇಮಕ ಮಾಡಿಕೊಂಡು ಸರ್ಕಾರದಿಂದಲೇ ವೇತನ ಪಾವತಿಸುವ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಘೋಷಿಸಿದರು.

ರಾಜ್ಯದ ಎಲ್ಲ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದ್ದೇವೆ

ಹುಲಿಕಲ್ ಘಾಟ್ ಕಾಮಗಾರಿ ಸರ್ಕಾರದ ಆದ್ಯತೆಯಾಗಿದ್ದು, ಒಮ್ಮೆ ಕೈಗೆತ್ತಿಕೊಂಡ ಕಾಮಗಾರಿಯನ್ನು ಪೂರ್ಣಗೊಳಿಸದೆ ಬಿಡುವುದಿಲ್ಲ ಎಂದು ಸಚಿವರು ಹೇಳಿದರು.

ರಾಜ್ಯದ ಯಾವುದೇ ಭಾಗದಲ್ಲಿ ರಸ್ತೆ ಸಮಸ್ಯೆ ಎದುರಾದರೂ ಅದನ್ನು ಇಲಾಖೆಯ ಸವಾಲಾಗಿ ಸ್ವೀಕರಿಸಿ ಶೀಘ್ರ ಪರಿಹಾರ ನೀಡುವ ಕೆಲಸ ಮಾಡಲಾಗುತ್ತಿದೆ. ಮಳೆಯ ಕಾರಣದಿಂದ ಮಾತ್ರ ಕೆಲವು ಕಾಮಗಾರಿಗಳಿಗೆ ವಿಳಂಬವಾಗಿದೆ ಎಂದು ಹೇಳಿದರು.

ಮಳೆ ಕೊರತೆ: ಕುಡಿಯುವ ನೀರಿಗೆ ತೊಂದರೆ ಇಲ್ಲ

ರಾಜ್ಯದಲ್ಲಿ ಮಳೆ ಕೊರತೆ ಇರುವುದನ್ನು ಒಪ್ಪಿಕೊಂಡ ಸಚಿವರು, ಇದು ನೈಸರ್ಗಿಕ ಸಮಸ್ಯೆಯಾಗಿದ್ದು ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂದರು.

ಆದರೆ ಪ್ರಸ್ತುತ ಲಭ್ಯವಿರುವ ನೀರಿನ ಸಂಗ್ರಹದಿಂದ ಮುಂದಿನ ಜೂನ್ ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೃಷಿ ಬೆಳೆಗಳಿಗೆ ಮಾತ್ರ ಮಳೆ ಕೊರತೆಯ ಪರಿಣಾಮ ಕಾಣಬಹುದು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಆ ಸಮಸ್ಯೆಯೂ ಪರಿಹಾರವಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

Hulikal Ghat work to be completed soon; New bridge over Tunga river costing ₹50 crore to be inaugurated in November: Minister Satish Jarkiholi  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close