ಮೆಗ್ಗಾನ್‌ನಿಂದ ಮಂಗಳೂರಿಗೆ ಕೆಎಫ್‌ಡಿ ರೋಗಿ ರೆಫರ್ ಪ್ರಕರಣ: ಆರೋಗ್ಯ ಇಲಾಖೆಯಿಂದ ತನಿಖೆಗೆ ಸಚಿವ ಖಾದರ್ ಆದೇಶ-KFD patient referral case from Meggan to Mangaluru: Health Department orders investigation, Minister Khader orders

SUDDILIVE || SHIVAMOGGA

ಮೆಗ್ಗಾನ್‌ನಿಂದ ಮಂಗಳೂರಿಗೆ ಕೆಎಫ್‌ಡಿ ರೋಗಿ ರೆಫರ್ ಪ್ರಕರಣ: ಆರೋಗ್ಯ ಇಲಾಖೆಯಿಂದ ತನಿಖೆಗೆ ಸಚಿವ ಖಾದರ್ ಆದೇಶ-KFD patient referral case from Meggan to Mangaluru: Health Department orders investigation, Minister Khader orders 

Kfd, patient

ಶಿವಮೊಗ್ಗ: ಕೆಎಫ್‌ಡಿ (ಕ್ಯಾಸನೂರು ಅರಣ್ಯ ರೋಗ) ಸೋಂಕಿತ ರೋಗಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ಬಳಿಕ ಮಂಗಳೂರಿಗೆ ರೆಫರ್ ಮಾಡಿದ್ದ ಪ್ರಕರಣವನ್ನು ರಾಜ್ಯ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ಸಮಗ್ರ ತನಿಖೆಗೆ  ಆರೋಗ್ಯ ಸಚಿವ ಯು.ಟಿ.ಖಾದರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಸೌಲಭ್ಯ, ಹಿರಿಯ ವೈದ್ಯರ ಲಭ್ಯತೆ, ಕೆಎಫ್‌ಡಿ ನಿರ್ವಹಣೆ ಹಾಗೂ ರೋಗಿಯ ಚಿಕಿತ್ಸೆಯಲ್ಲಿನ ಲೋಪಗಳ ಕುರಿತು ಅಧಿಕಾರಿಗಳು, ವೈದ್ಯರು ಮತ್ತು ಜನಪ್ರತಿನಿಧಿಗಳ ನಡುವೆ ಸುದೀರ್ಘ ಚರ್ಚೆ ನಡೆಯಿತು.

ಸಭೆಯಲ್ಲಿ ಜನಪ್ರತಿನಿಧಿಗಳು, ಮೆಗ್ಗಾನ್ ಆಸ್ಪತ್ರೆಯಲ್ಲಿ ರಾತ್ರಿ ವೇಳೆಯಲ್ಲಿ ಹಿರಿಯ ವೈದ್ಯರು ಲಭ್ಯವಿರುವುದಿಲ್ಲ. ಪಿಜಿ ವಿದ್ಯಾರ್ಥಿಗಳು ಮಾತ್ರ ಕರ್ತವ್ಯದಲ್ಲಿರುವುದರಿಂದ ಗಂಭೀರ ಪ್ರಕರಣಗಳಲ್ಲಿ ರಿಸ್ಕ್ ತೆಗೆದುಕೊಳ್ಳದೆ ತಕ್ಷಣ ಬೇರೆ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿದೆ ಎಂದು ಸಚಿವರ ಗಮನಕ್ಕೆ ಮೊದಲಿಗೆ ಶಾಸಕ ಚೆನ್ನಿ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಸೀನಿಯರ್ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಬೇಕು. ಫೋನ್ ಇದೆ, ಕರೆಸಿ ಅಟೆಂಡ್ ಮಾಡಿಸಿ. ರೋಗಿಯನ್ನು ನೋಡದೇ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದು ರೆಫರ್ ಮಾಡುವುದು ಸರಿಯಲ್ಲ. ವೈದ್ಯರ ಹಕ್ಕಿಗಿಂತ ರೋಗಿಯ ಹಕ್ಕೇ ಮುಖ್ಯ" ಎಂದು ಸ್ಪಷ್ಟಪಡಿಸಿದರು.

ಜನಪ್ರತಿನಿಧಿಗಳು, ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ ಸೇರಿದ ಹಲವು ಹಿರಿಯ ವೈದ್ಯರು ನಿವೃತ್ತಿಯಾಗಿದ್ದು, ಅನೇಕ ತಜ್ಞ ವೈದ್ಯರ ಹುದ್ದೆಗಳು ಇನ್ನೂ ಖಾಲಿ ಇರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಸಭೆಗೆ ಪ್ರಸ್ತಾಪಿಸಲಾಯಿತು. ಇದಕ್ಕೆ ಸಚಿವರು, "ಮೊದಲು ರೋಗಿಗಳ ಬಗ್ಗೆ ಮಾತನಾಡಿ. ವೈದ್ಯರ ಹುದ್ದೆ, ನೇಮಕಾತಿ, ಪೋಸ್ಟ್ ಸೃಷ್ಟಿ ಎಲ್ಲವನ್ನು ನಂತರ ನೋಡೋಣ. ರೋಗಿಯ ಚಿಕಿತ್ಸೆಗೆ ಯಾವುದೇ ತೊಂದರೆ ಆಗಬಾರದು" ಎಂದು ತಾಕೀತು ಮಾಡಿದರು.

ಕೆಎಫ್‌ಡಿ ಕುರಿತು ಆತಂಕಕಾರಿ ಅಂಕಿಅಂಶಗಳು

ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಈ ವರ್ಷದ ಕೆಎಫ್‌ಡಿ ಪರಿಸ್ಥಿತಿಯ ಬಗ್ಗೆ ಡಾ.ನಾಗರಾಜ್ ನಾಯ್ಕ್  ಮಾಹಿತಿ ನೀಡಿದರು.

  • ಶಿವಮೊಗ್ಗ ಜಿಲ್ಲೆಯಲ್ಲಿ ಈ ವರ್ಷ 130 ಕೆಎಫ್‌ಡಿ ಪ್ರಕರಣಗಳು ದಾಖಲಾಗಿವೆ.
  • 5 ಮಂದಿ ಮೃತಪಟ್ಟಿದ್ದಾರೆ.
  • ಮೃತಪಟ್ಟವರಲ್ಲಿ ನಾಲ್ವರು 70 ವರ್ಷ ಮೇಲ್ಪಟ್ಟವರು ಹಾಗೂ ಇತರೆ ಗಂಭೀರ ಕಾಯಿಲೆಗಳಿಂದ (ಕೋ-ಮಾರ್ಬಿಡಿಟಿ) ಬಳಲುತ್ತಿದ್ದರು.
  • ಉಳಿದ ಒಬ್ಬರು ತೀರ್ಥಹಳ್ಳಿ ತಾಲೂಕಿನ 38 ವರ್ಷದ ವ್ಯಕ್ತಿ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
  • ಸೋಂಕು ಹೆಚ್ಚಾಗಿ ಮನೆ ಸುತ್ತಮುತ್ತ ಇರುವ ಟಿಕ್ (ಚಿಗಟೆ) ಸಂಪರ್ಕದಿಂದಲೇ ಹರಡಿರುವುದು ಕಂಡುಬಂದಿದೆ.

ಇದಲ್ಲದೆ 10,245 ಮಂದಿಗೆ ಕೆಎಫ್‌ಡಿ ಪರೀಕ್ಷೆ ನಡೆಸಲಾಗಿದ್ದು, ಶಿವಮೊಗ್ಗದಲ್ಲಿಯೇ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.

85 ಸಾವಿರ ಡಿ-ಫೈಲ್ ಮಾತ್ರೆಗಳ ಸಂಗ್ರಹ

ಕೆಎಫ್‌ಡಿ ನಿಯಂತ್ರಣಕ್ಕಾಗಿ ಅಪಾಯ ಪ್ರದೇಶಗಳಲ್ಲಿ ಮನೆ ಮನೆಗೆ ಔಷಧಿ ವಿತರಣೆ ಮಾಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 85 ಸಾವಿರ ಡಿ-ಫೈಲ್ ಮಾತ್ರೆಗಳು ಸಂಗ್ರಹದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದರು.

ಕೆಎಫ್‌ಡಿ ಲಸಿಕೆ ಕುರಿತು ಕೇಂದ್ರದ ಮೇಲೆ ಒತ್ತಡ

ಕೆಎಫ್‌ಡಿ ಲಸಿಕೆ ಕುರಿತು ಸಚಿವರು ಮಾತನಾಡಿ, ಹಿಂದೆ ನೀಡಲಾಗುತ್ತಿದ್ದ ಲಸಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಹೊಸ ಲಸಿಕೆ ಅಭಿವೃದ್ಧಿಗಾಗಿ ಐಸಿಎಂಆರ್‌ಗೆ ಸಂಶೋಧನೆ ನೀಡಲಾಗಿದ್ದರೂ ಇನ್ನೂ ಫಲಿತಾಂಶ ಬಂದಿಲ್ಲ. ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಸಂಶೋಧನೆಗೆ ವೇಗ ನೀಡುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿದರು.

"ರಿಸರ್ಚ್‌ಗೆ ಆದ್ಯತೆ ಸಿಗಲು ನಾವು ನಿರಂತರ ಫಾಲೋ ಅಪ್ ಮಾಡುತ್ತಿದ್ದೇವೆ. ಹೊಸ ಲಸಿಕೆ ಬರುವವರೆಗೆ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳೇ ಪ್ರಮುಖ" ಎಂದು ಸಚಿವರು ಹೇಳಿದರು.

‘ಕೆಎಫ್‌ಡಿ ನಮ್ಮ ಜಿಲ್ಲೆಗಳ ವಾಸ್ತವ ಸಮಸ್ಯೆ’

ಸಭೆಯಲ್ಲಿ ಜನಪ್ರತಿನಿಧಿಗಳು, ಕೆಎಫ್‌ಡಿ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿರುವುದರಿಂದ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಮಹತ್ವ ಸಿಗುತ್ತಿಲ್ಲ. ಆದರೆ ಶಿವಮೊಗ್ಗ ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಜನರು ಕಾಡಿನ ನಡುವೆ ಬದುಕುತ್ತಿರುವುದರಿಂದ ಈ ರೋಗವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಉತ್ತಮ ವೈದ್ಯಕೀಯ ಸೌಲಭ್ಯಗಳಿದ್ದರೂ ಜನರು ಸಾವನ್ನಪ್ಪುತ್ತಿರುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟರು.

ಮೆಗ್ಗಾನ್ ಆಸ್ಪತ್ರೆ ವಿರುದ್ಧ ಪ್ರತ್ಯೇಕ ತನಿಖೆಗೆ ಆದೇಶ

ಕೆಎಫ್‌ಡಿ ರೋಗಿಯನ್ನು ಯಾಕೆ ಮಂಗಳೂರಿಗೆ ರೆಫರ್ ಮಾಡಲಾಯಿತು? ಮೆಗ್ಗಾನ್ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಮತ್ತು ಅಗತ್ಯ ಸೌಲಭ್ಯ ಯಾಕೆ ದೊರೆಯಲಿಲ್ಲ? ಎಂಬ ಪ್ರಶ್ನೆಗಳನ್ನು ಸಚಿವರು ಸಭೆಯಲ್ಲಿ ಎತ್ತಿದರು.

ಈ ಕುರಿತು ಈಗಾಗಲೇ ವೈದ್ಯಕೀಯ ಅಧೀಕ್ಷಕರು ಹಾಗೂ ಆರ್‌ಸಿಎಚ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿರುವುದಾಗಿ ಅಧಿಕಾರಿಗಳು ತಿಳಿಸಿದರು.

ಆದರೆ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, "ವೈದ್ಯರ ವಿರುದ್ಧದ ತನಿಖೆಯನ್ನು ವೈದ್ಯರೇ ನಡೆಸಿದರೆ ನ್ಯಾಯ ಸಿಗುತ್ತದೆಯೇ? ಜಿಲ್ಲಾಧಿಕಾರಿಯವರು ಪ್ರತ್ಯೇಕ ತನಿಖೆ ನಡೆಸಬೇಕು. ನಾನು ಕೂಡ ಬೇರೆ ಅಧಿಕಾರಿಯಿಂದ ಸ್ವತಂತ್ರ ತನಿಖೆ ನಡೆಸಿಸುತ್ತೇನೆ" ಎಂದು ಸ್ಪಷ್ಟ ಸೂಚನೆ ನೀಡಿದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಸಂಭವಿಸಿರುವ ಲೋಪಗಳನ್ನು ಪತ್ತೆಹಚ್ಚಿ, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯ ಅಂತ್ಯದಲ್ಲಿ, ಪ್ರತಿ ಪ್ರಕರಣದ ಕುರಿತು ತನಿಖೆ ನಡೆಸಿ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಬೇಕು ಹಾಗೂ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಮತ್ತು ಅಗತ್ಯ ಸೌಲಭ್ಯ ಒದಗಿಸುವಲ್ಲಿ ಯಾವುದೇ ನಿರ್ಲಕ್ಷ್ಯ ನಡೆಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

KFD patient referral case from Meggan to Mangaluru: Health Department orders investigation, Minister Khader orders

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close